ಕಸ ವಿಲೇವಾರಿ ಬಗ್ಗೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹಾಲಿ ಮತ್ತು ಮಾಜಿ ಅಧ್ಯಕ್ಷರ ನಡುವೆ ಮಾತಿನ ಚಕಮಕಿ
ಸುಳ್ಯ:ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿದರೆ ಹಾಗೂ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮತ್ತು ಆಡಳಿತ ಸದಸ್ಯರ ಮಧ್ಯೆಯೇ ಬಿರುಸಿನ ಚರ್ಚೆ, ಮಾತಿನ ಚಕಮಕಿ ನಡೆದ ಘಟನೆ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ನಡೆಯಲ್ಲಿ ಆಡಳಿತ ಸದಸ್ಯರ ಮಧ್ಯೆಯೇ ಕಸ ಸಾಗಾಟ ವಿಚಾರದಲ್ಲಿ ಚರ್ಚೆ ನಡೆದು ಪ್ರಮಾಣದ ಹಂತಕ್ಕೆ ತಲುಪಿದ ಘಟನೆಯೂ ವರದಿಯಾಗಿದೆ. ಕಸ ಸಾಗಾಟಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಕಾನೂನು ಪಾಲಿಸಿಲ್ಲ ಎಂದು ಮಾಜಿ ಅಧ್ಯಕ್ಷ ವಿನಯ ಕಂದಡ್ಕರು ವಿಷಯ ಆರಂಭಿಸಿದರು. ಇದೇ ವಿಚಾರ ಮುಂದುವರಿದು ವಿನಯ ಕಂದಡ್ಕರು ಹಾಗೂ ಅಧ್ಯಕ್ಷೆ ಶಶಿಕಲಾ ರವರ ಮಧ್ಯೆ ಬಾರೀ ಚರ್ಚೆ ನಡೆಯಿತು. ವಿನಯ ಕಂದಡ್ಕರ ಮಾತಿಗೆ ಆಡಳಿತ ಸದಸ್ಯರು ಸೇರಿಕೊಂಡರು.
ಕಸ ಸಾಗಾಟಕ್ಕೆ ನೀವು ಅಷ್ಟು ಖರ್ಚು ಮಾಡಿದ್ದೀರಿ ಎಂದು ವಿನಯ್ ಕುಮಾರ್ ಕಂದಡ್ಕ ರವರು ದೂರಿದರೆ ನಿಮ್ಮ ಅಧಿಕಾರ ಅವಧಿಯಲ್ಲಿಯೂ ಕೂಡ ಇನ್ನಷ್ಟು ಖರ್ಚು ಮಾಡಿದ್ದೀರಿ ಎಂದು ಶಶಿಕಲಾ ಅವರು ಕೂಡ ಹೇಳಿ ಪರಸ್ಪರ ಆರೋಪ ಪ್ರತ್ಯಾರೋಪಗಳು ಮಾಡಿದರು.
ಅಧ್ಯಕ್ಷೆ ಶಶಿಕಲಾ ಮಾತನಾಡಿ ಕಳೆದ ಕೆಲವು ದಿನಗಳಿಂದ ಮಂಗಳೂರಿನ ಖಾಸಗಿ ಸಂಸ್ಥೆಯೊಂದಕ್ಕೆ ಸರಿಯಾದ ರೀತಿಯಲ್ಲಿ ಕಸ ಸಾಗಟ ನಡೆಯುತ್ತಿದ್ದು ಇದರಿಂದ ಕಸದ ಸಮಸ್ಯೆಗೆ ಅಲ್ಪಮಟ್ಟಿನ ಮುಕ್ತಿ ಸಿಕ್ಕಿದಂತೆ ಹಾಗಿದೆ ಎಂದರು. ಈ ಸಂದರ್ಭದಲ್ಲಿ ಎದ್ದು ನಿಂತ ವಿನಯ ಕುಮಾರ್ ಕಂದಡ್ಕರವರು ಸಭೆಗೆ ತಪ್ಪು ಮಾಹಿತಿಯನ್ನು ನೀಡಬೇಡಿ ಅಧ್ಯಕ್ಷರೆ ಎಂದು ಹೇಳಿ ಕಳೆದ ಮೂರು ವರ್ಷಗಳ ಕಸದ ರಾಶಿಯನ್ನು ತೆರವುಗೊಳಿಸಲಾಗಿದೆ ಎಂದು ತಪ್ಪು ಸಂದೇಶವನ್ನು ನೀಡಿದ್ದೀರಿ. ಅಲ್ಲದೆ ಕಸ ಸಾಗಾಟದ ಬಗ್ಗೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಲಿಲ್ಲ ಮತ್ತು ಒಂದೂವರೆ ಲಕ್ಷ ರೂಪಾಯಿ ಖರ್ಚಾಗುತ್ತಿದ್ದ ಸ್ಥಳದಲ್ಲಿ ಇದೀಗ ಸುಮಾರು ೪ ಲಕ್ಷ ರೂ ಖರ್ಚು ಮಾಡಿಕೊಂಡು ಕಸ ತೆರವು ಮಾಡುತ್ತಿದ್ದೀರಿ ಇದು ಎಲ್ಲಿಯ ಸರಿ ಎಂದು ಕೇಳಿದರು.
ಈ ಸಂದರ್ಭದಲ್ಲಿ ನಾಮ ನಿರ್ದೇಶಕ ಸದಸ್ಯರಾದ ಸಿದ್ದಿಕ್ ಕೊಕ್ಕೋರವರು ಎದ್ದುನಿಂತು ಸ್ವ ಪಕ್ಷದ ಸದಸ್ಯರೇ ಅಧ್ಯಕ್ಷರು ಕಸ ವಿಲೇವಾರಿಯಲ್ಲಿ ಭ್ರಷ್ಟಾಚಾರವನ್ನು ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದ್ದರಿಂದ ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿನಯರವರು ನಾನು ಅಧ್ಯಕ್ಷರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಆದರೆ ವಿಲೇವಾರಿ ಸಂದರ್ಭದಲ್ಲಿ ನಿಯಮವನ್ನು ಸರಿಯಾಗಿ ಪಾಲಿಸಲಿಲ್ಲ. ಸಭೆಯಲ್ಲಿ ತೀರ್ಮಾನ ಮಾಡದೆ ಹೆಚ್ಚಿನ ದರವನ್ನು ನೀಡಲು ಅವರಿಗೆ ಅನುಮತಿ ನೀಡಿದವರು ಯಾರು ಎಂದು ಹೇಳಿದರು. ಅಲ್ಲದೇ ನಗರ ಪಂಚಾಯತಿ ಸಭೆಯ ನಿರ್ಣಯವನ್ನು ತೆಗೆದುಕೊಳ್ಳದೆ ಸ್ವಂತ ತೀರ್ಮಾನ ಪ್ರಕಾರ ಕಸ ವಿಲೇವಾರಿ ಮಾಡಿರುವುದು ಸರಿಯಲ್ಲ ಇದನ್ನು ಯಾರ ಹತ್ತಿರ ಕೇಳಿ ಮಾಡಿದ್ದೀರಿ ಎಂದು ಪ್ರಶ್ನೆಯನ್ನು ಹಾಕಿದ್ದರು. ಇದಕ್ಕೆ ಅಧ್ಯಕ್ಷೆ ಶಶಿಕಲಾರವರು ಮರು ಪ್ರಶ್ನೆಯನ್ನು ಮಾಡಿ ನಿಮ್ಮ ಸಮಯದಲ್ಲಿಯೂ ನೀವು ಕಸ ವಿಲೇವಾರಿ ವೇಳೆ ಯಾರನ್ನು ಕೇಳಿ ಮಾಡಿದ್ದೀರಿ. ಅಂದು ನೀವು ಕೂಡ ನಿಮ್ಮ ಸ್ವಂತ ಅಭಿಪ್ರಾಯದ ಪ್ರಕಾರವೇ ನೀವು ಮಾಡಲಿಲ್ಲವೇ ಎಂದು ಮರು ಪ್ರಶ್ನೆಯನ್ನು ಮಾಡಿ ಈ ವಿಷಯದ ಕುರಿತು ಕೆಲಕಾಲ ಪರಸ್ಪರ ಆರೋಪ ಪ್ರತ್ಯಾರೋಪಗಳು ಮಾಡಿಕೊಂಡರು.
ಮಾತಿನ ಚಕಮಕಿಯ ನಡುವೆ ವಿಪಕ್ಷ ಸದಸ್ಯ ಕೆ. ಎಸ್ ಉಮ್ಮರ್ ಮಾತನಾಡಿ ೨೦೨೦ ರಿಂದ ಇದು ವರೆಗೆ ಕಸ ವಿಲೇವಾರಿಗೆ ಆಗಿರುವಂತಹ ಪಂಚಾಯತಿ ಸಭೆಯ ನಿರ್ಣಯಗಳು ಮತ್ತು ಅನುಮತಿ, ದಾಖಲೆ ಸಮೇತ ವಿವರಿಸಿ ಮಾಹಿತಿಯನ್ನು ನೀಡಿದರು. ಅಲ್ಲದೆ ವಿನಯಕುಮಾರ್ ಕಂದಡ್ಕ ಅವರು ಅಧ್ಯಕ್ಷರಾಗಿ ಇರುವ ಸಂದರ್ಭದಲ್ಲಿಯೇ ಖಾಸಗಿ ಸಂಸ್ಥೆಯೊಂದರಿಂದ ಅಗ್ರಿಮೆಂಟ್ ಮಾಡಿಕೊಂಡ ಪ್ರಕಾರ ಇಂದಿಗೂ ಕೂಡ ಕಸವಿಲೆವಾರಿ ನಡೆಯುತ್ತಿದೆ. ಅಂದು ಅದು ಸರಿಯಾಗಿದೆ ಎಂದು ನಿಮ್ಮ ಮನಸ್ಸಿನಲ್ಲಿದ್ದರೆ ಇಂದು ಕೂಡ ಅದು ಸರಿ ಇದೆ. ಇದರಲ್ಲಿ ಯಾವುದೇ ರೀತಿಯ ತಪ್ಪುಗಳು ಉಂಟಾಗಿಲ್ಲ ಎಂದು ಹೇಳಿದರು.
ಉಮ್ಮರ್ ಅವರಿಗೆ ಸನ್ಮಾನ :
ಚರ್ಚೆಗಳು ನಡೆಯುತ್ತಿದ್ದಂತೆ ಕಸ ವಿಲೇವಾರಿಯಲ್ಲಿ ಸದಸ್ಯರಾದ ಕೆ ಎಸ್ ಉಮ್ಮರ್ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ ಅವರಿಗೆ ಈ ಸಂದರ್ಭದಲ್ಲಿ ನಾನು ಶಾಲು ಹೊದಿಸಿ ಗೌರವಿಸುತ್ತೇನೆ ಎಂದು ಹೇಳಿ ಆಡಳಿತ ಪಕ್ಷದ ಸದಸ್ಯ ವಿನಯ್ ಕುಮಾರ್ ಕಂದಡ್ಕ ಅವರು ಸಭೆಯಲ್ಲಿದ್ದ ವಿಪಕ್ಷ ಸದಸ್ಯ ಕೆ.ಎಸ್.ಉಮ್ಮರ್ ಅವರಿಗೆ ಸನ್ಮಾನಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಿಂದ ನಿಂತುಕೊಂಡೇ ಪ್ರತಿಭಟನೆ :
ಸಭೆ ಆರಂಭವಾಗುತ್ತಿದ್ದಂತೆ ನಗರ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಅವರ ವಿರುದ್ಧ ನೀರು ಸರಬರಾಜು ಸಿಬ್ಬಂದಿ ದೂರು ನೀಡಿದ್ದಾರೆ ಎಂಬ ಘಟನೆಗೆ ಸಂಬಂಧಿಸಿ ಸಿಬ್ಬಂದಿ ಕ್ಷಮೆ ಕೇಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಆಗ್ರಹಿಸಿದರು. ಇದು ಇತ್ಯರ್ಥ ಆಗದೆ ಸಭೆಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಕಿಶೋರಿ ಶೇಟ್ ಹೇಳಿದರು. ವಿಷಯ ಕಳೆದ ಸಭೆಯಲ್ಲಿ ಪ್ರಸ್ತಾಪ ಆದ ಸಂದರ್ಭದಲ್ಲಿ ಅದನ್ನು ಮುಗಿಸುವುದಾಗಿ ಅಧ್ಯಕ್ಷರು ಹೇಳಿದ್ದರೂ ಅದನ್ನು ಮುಗಿಸಿಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಇದನ್ನು ಮುಗಿಸಲು ಮಾತುಕತೆಗೆ ಕರೆದರೂ ಸ್ಥಾಯಿ ಸಮಿತಿ ಅಧ್ಯಕರು ಬರಲಿಲ್ಲ, ನಮಗೆ ಮತ್ತೇನು ಮಾಡಲಾಗುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಎಲ್ಲರನ್ನು ಸರಿಪಡಿಸಿಕೊಂಡು ಹೋಗಬೇಕಾದ ಅಧ್ಯಕ್ಷರು ಹಾಗೆ ಮಾಡುತ್ತಿಲ್ಲ ಸಮಸ್ಯೆಗಳನ್ನು ಸರಿಪಡಿಸುತ್ತಿಲ್ಲ, ಎಲ್ಲರನ್ನು
ವಿಶ್ವಾಸಕ್ಜೆ ತೆಗೆದುಕೊಳ್ಳದೆ ಕೆಲವರು ಹೇಳಿದಂತೆ ಆಡಳಿತ ನಡೆಸುತ್ತಿದ್ದಾರೆ ಎಂದರು, ಇದಕ್ಕೆ ಉತ್ತರಿಸಿದ ಶಶಿಕಲಾ ನೀವು ಅಧ್ಯಕ್ಷರಾಗಿ ನೀವು ಮಾಡಿದ ಕೆಲಸ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ಶಶಿಕಲಾ ಹಾಗೂ ಮಾಜಿ ಅಧ್ಯಕ್ಷೆ ವಿನಯಕುಮಾರ್ ಮಧ್ಯೆ ಕೆಲ ಹೊತ್ತು ವಾಗ್ವಾದ ಮಾತಿನ ಚಕಮಕಿ ನಡೆಯಿತು. ನ.ಪಂ.ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಮಧ್ಯೆಯೂ ವಾಗ್ವಾದ ನಡೆಯಿತು. ಬಳಿಕ ಸಿಬ್ಬಂದಿಯನ್ನು ಸಭೆಗೆ ಕರೆದು ವಿವರಣೆ ಕೇಳಿ ಮಾತುಕತೆ ನಡೆಸಿ ಇತ್ಯರ್ಥಗೊಳಿಸಲಾಯಿತು.
ಸಭೆಯಲ್ಲಿ ನ.ಪಂ. ಮುಖ್ಯಾಧಿಕಾರಿ ಬಸವರಾಜ್, ನ.ಪಂ.ಸದಸ್ಯರು ಇದ್ದರು.




























