
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.03: ಹಲವಾರು ವರ್ಷಗಳಿಂದಲೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿದ್ದ ಸಮಸ್ಯೆಗಳನ್ನು ಪರಿಹರಿಸಲು ಕಂಕಣಬದ್ದನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಗ್ರಾಮದಲ್ಲಿ ತಾಲ್ಲೂಕು ಆಡಳಿತದ ಹಾಗು ತಾಲ್ಲೂಕು ಪಂಚಾಯತಿ ವತಿಯಿಂದ ಏರ್ಪಡಿಸಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಕಂದಾಯ ಗ್ರಾಮಗಳಾಗಲು ಎದುರಾಗಿದ್ದ ಸಮಸ್ಯೆಗಳನ್ನು ಸರಳೀಕರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ನಾನು ಶಾಸಕನಾದ ಮೊದಲ ಅಧಿವೇಶನದಿಂದಲೂ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ವಿವಿಧ ಹಂತದ ಅಧಿಕಾರಿಗಳು ಹಾಗೂ ಕಂದಾಯ ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಪರಿಣಾಮ ಕಂದಾಯ ಸಚಿವರು ಕೈಗೊಂಡ ಸೂಕ್ತ ನಿರ್ಣಯದ ಪರಿಣಾಮ ರಾಜ್ಯದಲ್ಲಿ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಅರಣ್ಯ ವ್ಯಾಪ್ತಿಯ ಹಾಗೂ ನದಿಗಳ ಶೀತಪ್ರದೇಶದಲ್ಲಿದ್ದ ಗ್ರಾಮಗಳನ್ನು ಹಿಂದೆ ಸರ್ಕಾರಗಳು ಸ್ಥಳಾಂತರ ಮಾಡಿದ್ದು ಆ ಗ್ರಾಮಗಳ ಜನರಿಗೆ ತಮ್ಮ ಮನೆ, ಜಮೀನಿನ ಹಕ್ಕುಬಾದ್ಯತೆಗಳನ್ನು ಒದಗಿಸಿಕೊಡಲು ಸಾದ್ಯವಾಗಿರಲಿಲ್ಲ. ಆದರೆ ಇದರ ಬಗ್ಗೆ ದ್ವನಿ ಎತ್ತಿದ ಪರಿಣಾಮ ಸರ್ಕಾರ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ.
ತಾಲ್ಲೂಕು ಹಂತದ ವಿವಿಧ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿತು ಕೆಲಸ ಮಾಡಬೇಕು. ಕಾನೂನು ಬದ್ದವಾಗಿರುವ ಕೆಲಸಗಳನ್ನು ಮಾಡಲು ಹಿಂದೆಮುಂದೆ ನೋಡಬೇಡಿ. ಹಾಗೂ ರೈತರನ್ನು ವಿನಾಕಾರಣ ಅಲೆದಾಡಿಸಬೇಡಿ. ಅನ್ನದಾತ ಕ್ಷೇಮವಾಗಿದ್ದರೆ ಈ ನಾಡು ಕ್ಷೇಮವಾಗಿರುತ್ತದೆ. ಹಳ್ಳಿಗಳ ಅಭಿವೃದ್ದಿಯೇ ನಾಡಿನ ಅಭಿವೃದ್ದಿಯಾಗಿದ್ದು ನಿಮ್ಮ ಸೇವಾವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಎಂದಿಗೂ ಉದಾಸೀನ ಮಾಡಬೇಡಿ. ಬದ್ದತೆ, ಶಿಸ್ತನ್ನು ಅಳವಡಿಸಿಕೊಂಡು ಕೆಲಸ ಮಾಡಿದಾಗ ನಿಮ್ಮನ್ನು ಸಾರ್ವಜನಿಕರು ನೆನೆದುಕೊಳ್ಳುತ್ತಾರೆ ಎಂದು ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ಬಂದಿರುವ ಸವಲತ್ತುಗಳನ್ನು ವಿತರಣೆ ಮಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ರದ್ದುಗೊಳಿಸುವಿಕೆ ಕೈಬಿಡಿ:-
ರಾಜ್ಯದಲ್ಲಿ ಈಗ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧಾರ ಮಾಡಿದ್ದು ಇದು ಸಾರ್ವಜನಿಕರ ಆರೋಗ್ಯ ಸೇವೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಳ್ಳಿಗಳಲ್ಲಿದ್ದ ಸಾರ್ವಜನಿಕರು ತಮ್ಮ ಸಮೀಪದಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಹಲವು ಕಾರಣಗಳನ್ನು ಜಾರಿಗೆ ತಂದು ಆರೋಗ್ಯ ಕೇಂದ್ರಗಳನ್ನು ಮುಚ್ಚಲು ಹೊರಟಿರುವುದನ್ನು ಎಲ್ಲಾ ಶಾಸಕರೂ ಸಹ ವಿರೋಧಿಸಿದ್ದು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದು ಸರ್ಕಾರವನ್ನು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ತಹಶಿಲ್ದಾರ್ ಡಾ.ಎಸ್.ಯು.ಅಶೋಕ್, ತಾ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಷ್ಮಾ, ಎಡಿಎಲ್‍ಆರ್ ಸಿದ್ದಯ್ಯ, ಗಂಜಿಗೆರೆ ಸೊಸೈಟಿ ಅಧ್ಯಕ್ಷ ಕುರುಬಹಳ್ಳಿನಾಗೇಶ್, ತಾ.ಪಂ.ಮಾಜಿ ಸದಸ್ಯ ಯಳವೇಗೌಡ, ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ್, ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ರಾಮಚಂದ್ರ, ಜೆಡಿಎಸ್ ರಾಜ್ಯ ಪದಾಧಿಕಾರಿ ರಾಜೇನಹಳ್ಳಿಕುಮಾರಸ್ವಾಮಿ, ಗಂಜಿಗೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮುದುಗೆರೆಪರಮೇಶ್, ಗಂಜಿಗೆರೆ ಸೊಸೈಟಿ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ವಿಜಯ್ ಕುಮಾರ್, ಟಿ.ಎಚ್.ಓ ಡಾ.ಅಜಿತ್,ಅರಣ್ಯಾಧಿಕಾರಿ ಅನಿತಾ,ಚೆಸ್ಕಾಂ ಎಇಇ ಪುಟ್ಟಸ್ವಾಮಿ, ಪಶುಇಲಾಖೆಯ ಡಾ.ದೇವರಾಜು, ಸಮಾಜಕಲ್ಯಾಣಾಧಿಕಾರಿ ದಿವಾಕರ್, ಶಿವಕುಮಾರ್, ಬಿಸಿಎಂ ಅಧಿಕಾರಿ ವೆಂಕಟೇಶ್, ತೋಟಗಾರಿಕೆ ಅಧಿಕಾರಿ ಲೋಕೇಶ್, ಉಪತಹಶಿಲ್ದಾರ್ ಜಗದೀಶ್, ರಾಜಸ್ವ ನಿರೀಕ್ಷಕಿ ಚಂದ್ರಕಲಾ, ಕೃಷಿ ಇಲಾಖೆ ಅಧಿಕಾರಿ ಸಂತೋಷ್, ವಿಠಲಾಪುರ ಪಿಡಿಓ ರವಿಕುಮಾರ್, ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಧ್ರುವಕುಮಾರ್, ಕುಮಾರಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.























