
ಸಂಜೆವಾಣಿ ನ್ಯೂಸ್
ಮೈಸೂರು,ಮೇ.22:- ಮುಂದಿನ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆಗಳು ಬರುತ್ತಿದ್ದು ಪರಿಣಾಮಕಾರಿಯಾಗಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಸಿ. ಈ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ಅದಾಲತ್ ನಡೆಸಲು ತೀರ್ಮಾನಿಸಿದ್ದೇವೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್.ಅರುಣ್ ಕುಮಾರ್ ಹೇಳಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿವೆ. ಹೀಗಾಗಿ ಸರ್ಕಾರ ಮತ್ತೆ ಜನರ ಬಳಿಗೆ ಹೋಗಬೇಕಿದೆ. ಈ ನಿಟ್ಟಿನಲ್ಲಿ ಐದು ಗ್ಯಾರಂಟಿಗಳನ್ನು ಶೇ.100ರಷ್ಟು ಜನರಿಗೆ ತಲುಪಿಸಿ. ಅನುಷ್ಠಾನಗೊಂಡ ಯಾವುದೇ ಯೋಜನೆಗಳಿಂದ ಜನರು ವಂಚಿತರಾಗಬಾರದು. ಆಗ ಮಾತ್ರವೇ ನಮ್ಮ ಸರ್ಕಾರ ಯೋಜನೆ ಜಾರಿಗೊಳಿಸಿರುವುದಕ್ಕೂ ಸಾರ್ಥಕ ಆಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಸಮಿತಿ ಸದಸ್ಯರು ಜಿಲ್ಲೆಯಾದ್ಯಂತೆ ಕೆಎಸ್ ಆರ್‍ಟಿಸಿ ಸೇವೆ ಹಾಗೂ ಕೆಲವು ಕೆಎಸ್ ಆರ್‍ಟಿಸಿ ನೌಕರರು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೇ ಚಾಲನೆ ಮಾಡುವುದು ಸೇರಿ ಇತರೆ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಲ್ಲಿ ತಿಳಿಸಿದರಲ್ಲೇ, ಮತ್ತಷ್ಟು ಬಸ್‍ಗಳ ಅವಶ್ಯಕತೆ ಸರ್ಕಾರಕ್ಕೆ ಮನವಿ ಮಾಡುವಂತೆ ಒತ್ತಾಯಿಸಿದರು. ಇನ್ನೂ ಹಾಸನ, ಕೆ.ಆರ್.ನಗರ, ಹುಣಸೂರು ಚಿಕ್ಕಮಗಳೂರು ಭಾಗದಿಂದ ಬರುವ ಬಸ್‍ಗಳ ವೇಗದಿಂದ ಅಪಘಾತ ಸಂಭವಿಸುವ ಆತಂಕವಿದೆ. ಮಾತ್ರವಲ್ಲದೆ, ಕೆಲವು ಬಸ್‍ಗಳು ನಿಲ್ದಾಣದಲ್ಲಿ ನಿಲ್ಲಿಸದೇ ಹೊರಡುವ ಬಗ್ಗೆ ಸದಸ್ಯರೂ ದೂರಿದರು.
ಸರ್ಕಾರದಿಂದ ಸಿಗುವಂತಹ ಪಂಚ ಗ್ಯಾರೆಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ಪ್ರತಿಯೊಂದು ಇಲಾಖೆಯು ಕಾರ್ಯ ನಿರ್ವಹಿಸಬೇಕು. ಎಲ್ಲಾ ಯೋಜನೆಯೋಗಳ ಬಗ್ಗೆ ಫಲಾನುಭವಿಗಳಿಗೆ ತಿಳಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಏನಾದರೂ ಸಮಸ್ಯೆಗಳಿದ್ದರೆ ಅವರಿಗಾಗಿ ದೂರು ಪೆಟ್ಟಿಗೆಯನ್ನು ತೆರೆಯಬೇಕು ಎಂದು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಮಾಡಬೇಕು, ಈ ಯೋಜನೆಯ ಬಗ್ಗೆ ಎಲ್ಲರಿಗೂ ಪ್ರಚಾರ ಮಾಡಿ ಮಾದರಿ ಯೋಜನೆಯನ್ನಾಗಿ ಮಾಡಬೇಕು. ಸಿ.ಡಿ.ಪಿ.ಓ ಗಳು ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಹೋಗಿ ವಿಚಾರಣೆ ಮಾಡಬೇಕು. ಹತ್ತಿರದಲ್ಲಿ ಇರುವಂತಹ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳಿಗೆ ಅನುಕೂಲ ಅಗುತ್ತಿದೆಯೇ ಎಂದು ವಿಚಾರಣೆ ಮಾಡಬೇಕೆಂದರು. ಎರಡು ವರ್ಷದ ಸಾಧನೆಯಲ್ಲಿ ಆರನೇ ಗ್ಯಾರಂಟಿಯನ್ನು ಸಹ ನೀಡಿದ್ದೇವೆ. ಗ್ಯಾರಂಟಿ ಯೋಜನೆ ಸಿಗದಿರುವವರು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿಯೂ ನಮ್ಮ ಪ್ರಾಧಿಕಾರದ ಸದಸ್ಯರನ್ನು ಸಂಪರ್ಕಿಸಿ ಗ್ಯಾರಂಟಿ ಯೋಜನೆ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
ಸಿಇಒ ಯೋಕೇಶ್ ಕುಮಾರ್, ಜಿಪಂ ಲೆಕ್ಕಾಧಿಕಾರಿ ಪ್ರಭುಸ್ವಾಮಿ, ಸಮಿತಿ ಸದಸ್ಯರಾದ ಉಪಾಧ್ಯಕ್ಷರಾದ ಪೆÇ್ರ.ಶಿವಕುಮಾರ್, ಹುಣಸೂರು ಬಸವಣ್ಣ, ಚಂದ್ರಶೇಖರ್, ಸಮಿತಿ ಸದಸ್ಯರಾದ ಕಡಕೊಳ ಶಿವಣ್ಣ, ಬಾ.ಮಾ.ಯೋಗೇಶ್, ಲಲಿತಾ, ಚಾಮರಾಜು, ಕೆ.ಮಾರುತಿ, ಚೆಸ್ಕಾಂ ಸುನೀಲ್‍ಕುಮಾರ್,ಆಹಾರ ಇಲಾಖೆ ಉಪನಿರ್ದೇಶಕಿ ಕುಮುದಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಸವರಾಜು ಇನ್ನಿತರರು ಉಪಸ್ಥಿತರಿದ್ದರು.