Home ಜಿಲ್ಲೆ ಮಂಗಳೂರು ಅತೀ ಶೀಘ್ರದಲ್ಲಿ ಹಕ್ಕುಪತ್ರ ಕಡತ ವಿಲೇವಾರಿ- ಶಾಸಕ ರೈ

ಅತೀ ಶೀಘ್ರದಲ್ಲಿ ಹಕ್ಕುಪತ್ರ ಕಡತ ವಿಲೇವಾರಿ- ಶಾಸಕ ರೈ

oplus_262146

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧ ಸಾವಿರ ಬಗರ್‌ಹುಕುಂ ಹಕ್ಕುಪತ್ರದ ಕಡತಗಳು ಬಾಕಿ ಇವೆ. ಇದನ್ನು ಮೂರು ತಿಂಗಳ ಅವಧಿಯಲ್ಲಿ ಹಾಗೂ ಕನ್ವರ್ಷನ್, ೧೧೫ ಇ ಖಾತೆಗಳನ್ನು ಮುಂದಿನ ೪೫ ದಿನದೊಳಗೆ ವಿಲೇವಾರಿ ಮಾಡುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈಗಾಗಲೇ ಫ್ಲಾಟಿಂಗ್‌ಗೆ ನೀಡಿದ ಶೇ.೮೦ ಅರ್ಜಿಗಳು ಸರ್ವೆ ಇಲಾಖೆಗೆ ಬಂದಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ ಸರ್ವೆಯರ್ ಗಳ ನೇಮಕಾತಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಶಾಸಕ ಅಶೋಕ್ ರೈ ಹೇಳಿದರು.
ಅವರು ಶಾಸಕರ ಕಚೇರಿಯಲ್ಲಿ ನಡೆದ ಕಂದಾಯ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸರ್ವೆಯರ್ ಗಳು ಕಳೆದ ೪ ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಫ್ಲಾಟಿಂಗ್ ಮತ್ತಿತರ ವ್ಯವಸ್ಥೆಗಳಿಗೆ ತೊಂದರೆಯಾಗಿದೆ. ಪುತ್ತೂರಿನಲ್ಲಿ ಪ್ರಸ್ತುತ ೧೫ ಮಂದಿ ಸರ್ವೆಯರ್‌ಗಳು ಇದ್ದಾರೆ. ಜತೆಗೆ ಪರವಾನಿಗೆ ಪಡೆದ ಸರ್ವೆಯರ್ ಗಳು ಇದ್ದಾರೆ. ಅವರು ವೇತನ ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸಚಿವರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಹೆಚ್ಚುವರಿಯಾಗಿ ಪರವಾನಿಗೆ ಪಡೆದ ಸರ್ವೆಯರ್ ಗಳನ್ನು ನೇಮಕಾತಿ ಮಾಡಲಾಗುವುದು. ಹಾಗಾಗಿ ಅರ್ಜಿ ಹಾಕಿದವರು ಯಾವುದೇ ಆತಂಕ ಪಡುವುದು ಬೇಡ ಎಂದು ಅವರು ಹೇಳಿದರು.
ಈಗಾಗಲೇ ಕಂದಾಯ ಸಚಿವರು ಸರ್ವೆ ಇಲಾಖೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುವಂತೆ ಆದೇಶ ಮಾಡಿದ್ದಾರೆ. ಹಂತ ಹಂತವಾಗಿ ತಹಶೀಲ್ದಾರ್ ಲಾಗಿನ್ ನಿಂದ ಸರ್ವೆ ಇಲಾಖೆಗೆ ಬಂದ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಸಾರ್ವಜನಿಕರು ಕೂಡಾ ಸರ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಅಧಿಕಾರಿಗಳು ಸರ್ವೆಗೆ ಬಂದಾಗ ವ್ಯರ್ಥ ಕಾರಣ ಹೇಳಿ ವಾಪಾಸು ಕಳಿಸುವ ಕೆಲಸ ಮಾಡಬಾರದು. ಜನತೆ ಸಹಕರಿಸಿದರೆ ಕಂದಾಯ ಇಲಾಖೆಯ ಕಡತಗಳು ಶೀಘ್ರ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ ಎಂದರು. ಸಭೆಯಲ್ಲಿ ಡಿಡಿಎಲ್‌ಆರ್ ಪುಷ್ಪರಾಜ್, ಎಡಿಎಲ್‌ಆರ್, ಸರ್ವೆಯರ್‌ಗಳು, ಲೈಸನ್ಸ್‌ಡ್ ಸರ್ವೆಯರ್‌ಗಳು ಉಪಸ್ಥಿತರಿದ್ದರು.