
ಪುತ್ತೂರು; ರೈತವರ್ಗದ ಬದುಕಿನ ಬೆಳೆಯಾದ ಅಡಿಕೆ ಬಗ್ಗೆ ಸಾಕಷ್ಟು ಅಪಪ್ರಚಾರಗಳನ್ನು ನಡೆಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತಪ್ಪು ಅಭಿಪ್ರಾಯಗಳನ್ನು ಹರಡಲಾಗುತ್ತಿದೆ. ಭಾರತವೂ ಸೇರಿದಂತೆ ಏಷ್ಯಾದ ಹಲವು ದೇಶಗಳ ಜನತೆ ಸಾವಿರಾರು ವರ್ಷಗಳಿಂದ ಅಡಿಕೆಯನ್ನು ಬಳಕೆ ಮಾಡುತ್ತಿದ್ದಾರೆ. ಅಡಿಕೆ ಬಳಕೆಯಲ್ಲಿ ವಿವಿಧ ವಸ್ತುಗಳ ಸೇರ್ಪಡೆ ಬಳಿಕ ಅಧ್ಯಯನ ನಡೆಸಿ ಅಡಿಕೆ ಹಾನಿಕರ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ೨ ಕೋಟಿ ಕೃಷಿಕರ ಬದುಕು ನಿರ್ಧರಿಸುತ್ತಿರುವ ಅಡಿಕೆ ಬಗ್ಗೆ ಮಾತ್ರ ಪ್ರತ್ಯೇಕವಾದ ಅಧ್ಯಯನ ನಡೆಸಬೇಕು. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಅಖಿಲಭಾರತ ಅಡಿಕೆ ಬೆಳೆಗಾರರ ಸಂಘ ಆಗ್ರಹಿಸಿದೆ.
ಅಡಿಕೆಯನ್ನು ಬಳಕೆ ಮಾಡುವ ಹಂತದಲ್ಲಿ ಅದಕ್ಕೆ ಬೇರೆ ಬೇರೆ ವಸ್ತುಗಳನ್ನು ಸೇರಿಸಲಾಗುತ್ತಿದೆ. ಈ ತನಕ ನಡೆದ ಅಧ್ಯಯನ, ವಿಶ್ಲೇಷಣೆ ಹಾಗೂ ಇತರ ವೈಜ್ಞಾನಿಕ ಅಂಶಗಳು ಈ ಸೇರ್ಪಡೆಯ ನಂತರವೇ ಆಗಿದೆ. ಕೇವಲ ಅಡಿಕೆಯನ್ನೇ ಅಧ್ಯಯನ ಮಾಡಿದಾಗ ಅಡಿಕೆ ಹಾನಿಕರವೇ ಇಲ್ಲವೇ ಎಂಬ ವಿಚಾರ ಸ್ಪಷ್ಟವಾಗುತ್ತದೆ. ಏಷ್ಯಾ ಖಂಡದ ಸಾಕಷ್ಟು ದೇಶಗಳ ಪರಂಪರಾಗತವಾಗಿ ಅಡಿಕೆಯನ್ನು ಬಳಕೆ ಮಾಡುತ್ತಲೇ ಬಂದಿವೆ. ಕೇವಲ ಅಡಿಕೆಯನ್ನು ಸೇವಿಸಿ ಆರೋಗ್ಯಕ್ಕೆ ಹಾನಿಯಾಗಿರುವ ಯಾವುದೇ ಉದಾಹರಣೆಗಳಿಲ್ಲ. ೧೯೮೪ರಿಂದ ಅಡಿಕೆ ಬೆಳೆಗೆ ಸಾಕಷ್ಟು ಪ್ರೋತ್ಸಾಹವೂ ಸರ್ಕಾರಗಳಿಂದ ದೊರೆತಿದೆ. ಕೇವಲ ಡಬ್ಲ್ಯುಎಚ್‌ಒ ಹೇಳಿದ್ದನ್ನೇ ಅಂತಿಮ ಎಂದು ಭಾವಿಸುವ ಬದಲು ಸರ್ಕಾರ ಅಡಿಕೆ ನಿಜಕ್ಕೂ ಹಾನಿಕರವೇ ಎಂಬ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿ ವೆಂಕಟಗಿರಿ ಸಿ.ವಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯಾವುದೇ ಸ್ಪಷ್ಟವಾದ ಆಧಾರಗಳಿಲ್ಲದೆ ಅಡಿಕೆ ಬಗ್ಗೆ ತಪ್ಪು ಅಭಿಪ್ರಾಯ ಹರಡುವ ಪ್ರಯತ್ನ ಖಂಡನೀಯವಾಗಿದೆ. ಸಾವಿರಾರು ವರ್ಷಗಳಿಂದ ಈ ಅಡಿಕೆ ಬೆಳೆಯುವ ಹಾಗೂ ಸೇವನೆ ಮಾಡುವ ಜನರಿಗೆ ಕೇವಲ ಅಡಿಕೆಯಿಂದ ತೊಂದರೆ ಉಂಟಾಗಿದೆ ಎಂಬುವುದನ್ನು ಈ ತಪ್ಪು ಕಲ್ಪನೆ ಹರಡುವ ಮಂದಿ ಸಾಬೀತು ಮಾಡಿಲ್ಲ. ಅಡಿಕೆ ಹಾನಿಕರ ಎಂಬ ತಪ್ಪು ಮಾಹಿತಿಯನ್ನು ಹರಡುವ ಕೆಲಸ ನಿರಂತರವಾಗಿ ನಡೆಸಲಾಗುತ್ತಿದೆ. ಇದರಿಂದ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾದರೆ ಅಡಿಕೆಯನ್ನೇ ನಂಬಿರುವ ದೊಡ್ಡ ಕ್ಷೇತ್ರಕ್ಕೆ ವಿಪರೀತವಾದ ಅನಾಹುತ ಉಂಟಾಗಬಹುದಾಗಿದೆ. ಹಾಗಾಗಿ ಅಡಿಕೆ ಯನ್ನು ಮಾತ್ರ ಅಧ್ಯಯನಕ್ಕೆ ಬಳಿಸಿಕೊಂಡು ಸರಿಯಾದ ತೀರ್ಮಾನಕ್ಕೆ ಸರ್ಕಾರ ಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ.




























