
ಪುತ್ತೂರು: ಸಂಸದೆ ಹಾಗೂ ಸುಪ್ರೀಂ ಕೋರ್ಟಿನ ವಕೀಲೆ ಬಾನ್ಸುರಿ ಸ್ವರಾಜ್ ಪುತ್ತೂರಿಗೆ ಭೇಟಿ ನೀಡಿದ ಸಂದರ್ಭ ಅವರಿಗೆ ಜಿಲ್ಲೆಯ ರೈತರ ಜೀವನಾಡಿ ಬೆಳೆಯಾದ ಅಡಿಕೆ ಸಮಸ್ಯೆಗಳು ಮತ್ತು ಕ್ಯಾಂಪ್ಕೋ ಸಂಸ್ಥೆಯ ಕುರಿತು ಮಾಹಿತಿ ನೀಡಲಾಯಿತು. ವಿಶ್ವಆರೋಗ್ಯ ಸಂಸ್ಥೆ ಅಡಿಕೆಯನ್ನು ನಿರ್ಬಂಧಿತಗೊಳಿಸುವ ಚಿಂತನೆ ನಡೆಸುತ್ತಿರುವುದನ್ನೂ ಅವರ ಗಮನಕ್ಕೆ ತರಲಾಯಿತು. ಅಡಿಕೆಯನ್ನು ನಂಬಿಕೊಂಡು ರಾಜ್ಯದ ಸುಮಾರು ೨೮ ಜಿಲ್ಲೆಯ ರೈತರು ಬದುಕುತ್ತಿದ್ದು, ದಕ, ಉಡುಪಿ ಜಿಲ್ಲೆಗಳಿಗೆ ಅಡಿಕೆ ಬೆಳೆಯೇ ಪ್ರಮುಖವಾಗಿದೆ. ವಿಶ್ವ ಆರೋಗ್ಯಸಂಸ್ಥೆ ಪ್ರಸ್ತುತ ಅಡಿಕೆ ಸೇವನೆ ನಿಯಂತ್ರಣಕ್ಕೆ ಮುಂದಾದರೆ ಲಕ್ಷಾಂತರ ರೈತರ ಬದುಕು ಅಸಹನೀಯವಾಗಲಿದೆ ಎಂದು ಕ್ಯಾಂಪ್ಕೋ ನಿರ್ದೇಶಕ ನ್ಯಾಯವಾದಿ ಮುರಳೀಕೃಷ್ಣ ಕೆ.ಎನ್ ಅವರು ಬಾನ್ಸುರಿ ಸ್ವರಾಜ್ ಅವರ ಗಮನಕ್ಕೆ ತಂದರು. ಪ್ರಸ್ತಾಪಿತ ಸೇವನೆ ನಿಯಂತ್ರಣದಿಂದ ಅಡಿಕೆ ರೈತರು ಎದುರಿಸುತ್ತಿರುವ ವಿವಿಧ ಸವಾಲುಗಳು, ಉಪಕ್ರಮಗಳು ಹಾಗೂ ಮಾರ್ಗಸೂಚಿಗಳು ರೈತರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವ ಮಾಹಿತಿಯನ್ನೂ ಅವರಿಗೆ ನೀಡಲಾಯಿತು.
ಈ ಬಗ್ಗೆ ಸಂಸದೆ ಬಾನ್ಸುರಿ ಸ್ವರಾಜ್ ಅವರು ಸಂಸತ್ ನಲ್ಲಿ ವಿಚಾರವನ್ನು ಪ್ರಸ್ತಾಪಿಸುವ ಭರವಸೆ ನೀಡಿದರು. ಜತೆಗೆ ಸಂಸದ ಬ್ರಿಜೇಶ್ ಚೌಟ ಮತ್ತು ಇತರ ನಾಯಕರ ನೇತೃತ್ವದಲ್ಲಿ ಕೃಷಿಸಚಿವಾಲಯದಲ್ಲೂ ಪ್ರಸ್ತಾಪಿಸುವುದಾಗಿ ತಿಳಿಸಿದರು. ಬಾನ್ಸುರಿಸ್ವರಾಜ್ ಅವರಿಗೆ ಕ್ಯಾಂಪ್ಕೋ ಚಾಕಲೇಟ್ ನೀಡಲಾಯಿತು.
ಈ ಸಂದರ್ಭದಲ್ಲಿ ಡಾ.ಸುಧಾ ಎಸ್ ರಾವ್, ಅಚ್ಯುತ ನಾಯಕ್, ವಿಶ್ವಾಸ್ ಶೆಣೈ, ರವೀಂದ್ರ ರೈ ಉಪಸ್ಥಿತರಿದ್ದರು.

























