ಅಜೆಕಾರಿನಲ್ಲಿ ಪಾದಚಾರಿಗೆ ಕಾರು ಡಿಕ್ಕಿ: ಮೃತ್ಯು

ಅಜೆಕಾರು- ಬೆಳ್ಳಣ್ ಸಮೀಪದ ಕಾಂಜರಕಟ್ಟೆ ಪೆರಳ್‌ಪಾದೆಯಲ್ಲಿ ಕಾರು ಢಿಕ್ಕಿಯಾಗಿ ಪಾದಚಾರಿ ಕಾಂಜರಕಟ್ಟೆ ಬಳಿಯ ನಿವಾಸಿ ಸುರೇಶ್ (೪೫) ಅವರು ಮೃತಪಟ್ಟಿರುವುದಲ್ಲದೆ ಕಾರು ಪಲ್ಟಿಯಾದ ಕಾರಣ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಕಾರಿನಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ಐವರು ಎಂಬಿಎ ವಿದ್ಯಾರ್ಥಿಗಳು ಮಂಗಳೂರಿನತ್ತ ಪ್ರಯಾಣಿಸುತ್ತಿದ್ದರು. ಪೇರಾಲ್ ಪಾದೆ ಬಳಿ ರಸ್ತೆ ಅಂಚಿನಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸುರೇಶ್ ಅವರಿಗೆ ಢಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದಾರಿಯಲ್ಲಿ ಕೊನೆಯುಸಿರೆಳೆದರು.
ಸ್ವಯಂ ಶೆಟ್ಟಿ, ರಿಯಾನ್, ರಕ್ಷಣ್, ಅಮನ್, ಸಮರ್ಥ ಗಾಯಗೊಂಡವರು. ಅವರಲ್ಲಿ ಸ್ವಯಂ ಶೆಟ್ಟಿ ಹಾಗೂ ರಕ್ಷಣ್ ಗಂಭೀರ ಗಾಯಗೊಂಡಿದ್ದು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.