ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಕಂಕಣ ಬದ್ಧರಾಗೋಣ:ಗಾದೆಪ್ಪ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.02:
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 1958 ರಲ್ಲಿ ನಡೆದ ಸಮ್ಮೇಳನ 68 ವರ್ಷಗಳ ನಂತರ ಬಳ್ಳಾರಿಗೆ ಬಂದಿದ್ದು ಅದನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಕಂಕಣ ಬದ್ಧರಾಗೋಣ ಎಂದು ಮೇಯರ್ ಪಿ.ಗಾದೆಪ್ಪ ಕರೆ ನೀಡಿದ್ದಾರೆ.
ಅವರು ನಿನ್ನೆ ಸಂಜೆ ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ  ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ವಿವಿಧ ಹುದ್ದೆಗಳನ್ನಲಂಕರಿಸಿದ ಮತ್ತು ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಗೆ ಬಂದಿರುವ ಸಂದರ್ಭದಲ್ಲಿಯೇ ನಾನು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರನಾಗಿ ಆಯ್ಕೆಯಾಗಿರುವುದು ನನ್ನ ಸುದೈವವೆಂದು ಭಾವಿಸುತ್ತೇನೆ. ಜಿಲ್ಲೆಯ ಜನಪ್ರತಿನಿಧಿಗಳು, ಎಲ್ಲಾ ಸಂಘ-ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಎಲ್ಲರೂ ಒಗ್ಗೂಡಿ ಕನ್ನಡ ಸಾಹಿತ್ಯ ಸರಸ್ವತಿಯ ತೇರನ್ನು ಎಳೆಯೋಣ ಎಂದರು.
 ಕ.ಸಾ.ಪ ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿ, ಗಡಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಪಸರಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು  ಕಾರ್ಯನಿರ್ವಹಿಸುತ್ತಿದೆ.‌ ಅಖಂಡ ಬಳ್ಳಾರಿ ಜಿಲ್ಲೆಯ ಜನತೆ ಬಹುದಿನದಿಂದ ನಿರೀಕ್ಷಿಸುತ್ತಿರುವ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಡಳಿತಾತ್ಮಕ ಮತ್ತು ತಾಂತ್ರಿಕ ಕಾರಣಗಳಿಂದ ವಿಳಂಬವಾದರೂ ಬಳ್ಳಾರಿ ಜಿಲ್ಲೆಯಲ್ಲಿಯೇ ನಡೆಯಲಿದೆ ಈ ಕುರಿತು ಯಾವುದೇ ಅನುಮಾನ ಬೇಡ. ಸರ್ಕಾರ ಈಗಾಗಲೇ 2025-26 ನೇ ಸಾಲಿನ ಆಯವ್ಯಯದಲ್ಲಿ 10 ಕೋಟಿ ರೂಪಾಯಿಗಳ ಅನುದಾನವನ್ನು ಬಳ್ಳಾರಿಯಲ್ಲಿ ಜರುಗುವ ಸಾಹಿತ್ಯ ಸಮ್ಮೇಳನಕ್ಕೆ  ಮೀಸಲಿರಿಸಿದೆ ಎಂದು ಹೇಳಿದರು.


ಬಳ್ಳಾರಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ನೂತನ ಅಧ್ಯಕ್ಷ ಅವ್ವಾರು  ಮಂಜುನಾಥ, ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ವೆಂಕಟೇಶ್ ಹೆಗಡೆ, ಉತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಪೊಂಪನಗೌಡ, ಬಳ್ಳಾರಿ ಜಿಲ್ಲಾ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ  ಜನತಾ ಬಜಾರ್ ನ ಮಾಜಿ ಅಧ್ಯಕ್ಷ ಜಿ. ನೀಲಕಂಠಪ್ಪ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಬ್ದುಲ್ ಹೈ ತೋರಣಗಲ್ಲು ಇವರನ್ನು ಸನ್ಮಾನಿಸಿ ಗೌರವಿಸಲಾಯ್ತು.


ಕಸಾಪ ಮಾಜಿ  ಜಿಲ್ಲಾ ಅಧ್ಯಕ್ಷ ಹೆಚ್ ಹಂಪನಗೌಡ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾ. ಕೆ ಶಿವಲಿಂಗಪ್ಪ ಹಂದಿಹಾಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಮಾಡಿದರು. ಇವರುಗಳನ್ನು ಸಹ ಪರಿಷತ್ ನಿಂದ ಗೌರವಿಸಿ ಅಭಿನಂದಿಸಲಾಯಿತು.
ಕಸಾಪ ಕೋಶಾಧ್ಯಕ್ಷ ಬಸವರಾಜ ಗದಗಿನ, ಮಹಿಳಾ ಪ್ರತಿನಿಧಿ ಡಾ. ಎ.‌ಎನ್. ಸಿದ್ದೇಶ್ವರಿ, ಸಂಘಟನಾ ಕಾರ್ಯದರ್ಶಿಗಳಾದ ಸಿದ್ದರಾಮಪ್ಪ ಸಿರಿಗೇರಿ, ಬಸವರಾಜ ಬಿಸಿಲಹಳ್ಳಿ, ಸಂಚಾಲಕರಾದ ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರಿ, ಬಿ.ಎಸ್ ಪ್ರಭುಕುಮಾರ್ ಮತ್ತಿತರರು ಇದ್ದರು. ಶಿಕ್ಷಕ ಸತ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು, ಕಸಾಪ ಗ್ರಾಮೀಣ ಘಟಕದ ಅಧ್ಯಕ್ಷ ಎರ್ರಿಸ್ವಾಮಿ ಸ್ವಾಮಿಹಳ್ಳಿ ಅವರು ಪ್ರಾರ್ಥನೆ ಸಲ್ಲಿಸಿದರು.
ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಹುಸೇನಸಾಬ್ ಮತ್ತು ಜಡೇಶ ಎಮ್ಮಿಗನೂರು ಕನ್ನಡ ಗೀತ ಗಾಯನ ನಡೆಸಿಕೊಟ್ಟರು.