
ಮಂಗಳೂರು-ಬಕ್ರೀದ್ ಹಬ್ಬದ ದಿನಗಳಲ್ಲಿ ಅನಧಿಕೃತ ಒಂಟೆ/ಜಾನುವಾರುಗಳ ಸಾಗಾಣಿಕೆ ಹಾಗೂ ಹತ್ಯೆಗಳನ್ನು ತಡೆಗಟ್ಟಲು ರಚಿಸಲಾದ ಜಿಲ್ಲಾ ಸಮಿತಿ ಸಭೆಯು ಸೋಮವಾರ ಜಿಲ್ಲಾಧಿಕಾರಿ ಡಾ. ಆನಂದ್ ಕೆ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾಂಸ ಮಾರಾಟ ಅಂಗಡಿಗಳಿಗೆ ಅಗತ್ಯ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಅಕ್ರಮ ಒಂಟೆ/ಜಾನುವಾರು ವಧೆ ಮತ್ತು ಸಾಗಾಟವನ್ನು ನಿಯಂತ್ರಿಸಲು ಆಯಕಟ್ಟಿನ ಜಾಗದಲ್ಲಿ ಚೆಕ್ ಪೊ?ಸ್ಟ್ ಸ್ಥಾಪಿಸಲು ಹಾಗೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ತಂಡಗಳನ್ನು ರಚಿಸಲು ಸೂಚಿಸಲಾಯಿತು. ಯಾವುದೇ ಬಗೆಯ ಅಕ್ರಮ ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆ ೧೧೨ ಕರೆ ಮಾಡುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮತ್ತು ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲು ಸೂಚಿಸಲಾಯಿತು. ಹಬ್ಬದ ಸಂದರ್ಭದಲ್ಲಿ ಅನಧಿಕೃತ ಒಂಟೆ/ಜಾನುವಾರು ವಧೆ, ಸಾಗಾಟ ಹಾಗೂ ಅನಧಿಕೃತ ಮಾಂಸ ಮಾರಾಟವನ್ನು ತಡೆಗಟ್ಟುವಂತೆ ಕ್ರಮವಹಿಸಲು ಸೂಚಿಸಿದರು.
ಅನಧಿಕೃತ ಜಾನುವಾರು ವಧೆ ಹಾಗೂ ಜಾನುವಾರುಗಳ ಅಕ್ರಮ ಸಾಗಾಣಿಕೆಯಲ್ಲಿ ತೊಡಗಿಕೊಂಡವರಿಗೆ ೩-೧೦ ವರ್ಷಗಳ ಕಾರಾಗೃಹ ಶಿಕ್ಷೆ ಅಥವಾ ರೂ. ೧೦ ಲಕ್ಷದವರೆಗಿನ ಜುಲ್ಮಾನೆಯಂತಹ ಕಠಿಣ ಶಿಕ್ಷೆಗಳು ಹಾಗೂ ಯಾವುದೇ ಕಟ್ಟಡಗಳಲ್ಲಿ ಅನಧಿಕೃತ ಒಂಟೆ/ಜಾನುವಾರು ವಧೆ ಕಂಡು ಬಂದಲ್ಲಿ ಅಂತಹ ಕಟ್ಟಡಗಳನ್ನು ಜಪ್ತಿ ಮಾಡುವ ಅವಕಾಶ ಇರುವುದನ್ನು ಸಾರ್ವಜನಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.