
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.18: ಇತ್ತೀಚೆಗೆ ನಗರದ ಲಾಲ ಕಮಾನ್ ಸ್ಟೋರ್ ನಲ್ಲಿ ರಾತ್ರಿವೇಳೆ ನಡೆಯುತ್ತಿದ್ದ ಅಕ್ರಮ ಅಕ್ಕಿ ದಂಧೆ ಮೇಲೆ ದಾಳಿ ಮಾಡಿದ್ದ ಕಂದಾಯ ಇಲಾಖೆಯ ಎಸಿ ರಾಜೇಶ್ ಹೆಚ್.ಡಿ.ಅವರು ನಿನ್ನೆ ರಾತ್ರಿ ಅಕ್ರಮ ಮರಳು ಸಾಗಾಣೆಯ ದಂಧೆ ಮೇಲೆ ದಾಳಿ ಮಾಡಿ 23 ಎತ್ತಿನ ಬಂಡಿ ಮತ್ತು ಒಂದು ಟ್ರಾಕ್ಟರ್ ಸೀಜ್ ಮಾಡಿದ್ದಾರೆ.
ತಾಲೂಕಿನ ಮೋಕ, ಮತ್ತು ರೂಪನಗುಡಿ ಗ್ರಾಮದ ಬಳಿ ಹಗರಿ ನದಿಯಿಂದ ಬಳ್ಳಾರಿಗೆ ಎತ್ತಿನ ಬಂಡಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿತ್ತು. ಇದು ಕಳೆದ ಅನೇಕ ತಿಂಗಳಿಂದಲೂ ನಡೆಯುತ್ತಿತ್ತು.
ಈ ಮೊದಲು ಎತ್ತಿನ ಬಂಡಿಯಲ್ಲಿ ಹಗರಿ ನದಿ ದಂಡೆಯ ಗ್ರಾಮಗಳ ಕೆಲ ಜನತೆ ತಮ್ಮ ಗ್ರಾಮಗಳಿಗೆ ತಂದು ಸಂಗ್ರಹಿಸಿಕೊಂಡು 500 ರೂ ಗೆ ಒಂದು ಬಂಡಿಯಂತೆ ಮಾರಾಟ ಮಾಡುತ್ತಿದ್ದರು. ಇದು ಹಗಲು ವೇಳೆಯಲ್ಲಿಯೇ ಸಣ್ಣದಾಗಿ ನಡೆಯುತ್ತಿತ್ತು.
ಇದಕ್ಕೆ ಅಧಿಕಾರಿಗಳಿಂದ ಆಕ್ಷೇಪ ಬರದ ಕಾರಣ ಇದನ್ನೇ ದಂಧೆಯಾಗಿ ಜನಪ್ರತಿನಿಧಿಗಳ ಬೆಂಬಲಿಗರು ಮರಳನ್ನು ಬಳ್ಳಾರಿ ನಗರದ ಸುತ್ತಮುತ್ತಲ ಪ್ರದೇಶಕ್ಕೆ ತರುವಂತೆ ಮಾಡಿ. ಒಂದು ಬಂಡಿಗೆ 2 ವರೆ ಸಾವಿರದಿಂದ 3 ಸಾವಿರ ರೂಗೆ ನೀಡ ತೊಡಗಿದರು. ಈ ಮೊದಲು ಹಗಲು ವೇಳೆ ನಡೆಯುತ್ತಿದ್ದುದು. ದಿನಕ್ಕ ಎರೆಡು ಮೂರು ಬಂಡಿ ಸಾಗಾಣೆ ಮಾಡಲು ಈ ದಂಧೆ ರಾತ್ರಿ ಶುರುವಾಯ್ತು. ಇದರಿಂದ ಹಳ್ಳಿ ಜನತೆ ದುಡಿಮೆ ಹೆಚ್ಚಿಸಿಕೊಂಡರು.
ಬಳ್ಳಾರಿ ಸುತ್ತಮುತ್ತ ತಂದು ಹಾಕುತ್ತಿದ್ದ ಮರಳನ್ನು ದಂಧೆ ಕೋರರು ನಂತರ ನಗರಕ್ಕೆ ಸಾಗಾಟ ಮಾಡುತ್ತಿದ್ದರು. ಹಾಗೆ ಮಾಡುವಾಗ ಕೆಳಗಡೆ ಮರಳು ಹಾಕಿ ಮೇಲ್ಭಾಗದ ಒಂದು ಪದರು ಮಾತ್ರ ಸ್ಟೋನ್ ಡಸ್ಟ್ ಹಾಕಿರುತ್ತಿದ್ದರು.
ಲಾಭದಾಯಕವಾಗಿ ನಡೆಯುತ್ತಿದ್ದ ಈ ದಂಧೆಯನ್ನು ಪ್ರಶ್ನಿಸಿ ಮೋಕಾ ಮತ್ತು ಹಗರಿ ಪೊಲೀಸ್ ಠಾಣೆಯ ಪೊಲೀಸರು ತಮಗಿಷ್ಟು ಎಂದು ನಿಗಧಿ ಮಾಡಿಕೊಂಡರು.
ಎಗ್ಗಿಲ್ಲದೆ ನಡೆಯುತ್ತಿದ್ದ ಈ ಅಕ್ರಮ ದಂಧೆಗೆ ಜಮೀನಿನಲ್ಲಿ ದುಡಿಯಬೇಕಾದ ಎತ್ತುಗಳನ್ನು ಬಳಸಿ ಅವುಗಳಿಗೂ ಹಿಂಸೆ ಮಾಡಲಾಗುತ್ತಿತ್ತು.
ಈ ಬಗ್ಗೆ ಅರಿತುಕೊಂಡ ಎಸಿ ರಾಜೇಶ್ ಹೆಚ್.ಡಿ.ಅವರು ನಿನ್ನೆ ರಾತ್ರಿ ತಾಲೂಕಿನ ಮೋಕಾ ರಸ್ತೆಯ ಟೋಲ್ ಬಳಿ ತಮ್ಮ ಸಿಬ್ಬಂದಿ ಜೊತೆ ದಾಳಿಮಾಡಿ. 23 ಎತ್ತಿನ ಬಂಡಿಗಳನ್ನು ಮತ್ತು ಒಂದು ಟ್ಯಾಕ್ಟರ್ ಅನ್ನು ಮರಳು ಸಮೇತ ಸೀಜ್ ಮಾಡಿದ್ದಾರೆ.
ಎತ್ತಿನ ಬಂಡಿಯಲ್ಲಿ ಮರಳು ಸಾಗಾಟ ಮಾಡುತ್ತಿದ್ದವರನ್ನು ವಿಚಾರಿಸಿದರೆ ಸಿದ್ದಪ್ಪ, ಉಮೇಶ್ ಎಂಬುವವರು ಇದರ ಸೂತ್ರದಾರರು ಎಂದು ಹೇಳಿದ್ದಾರೆ.
6500 ದಂಡ:
ಸೀಜ್ ಮಾಡಿದ ಎತ್ತಿನ ಬಂಡಿಗಳಿಗೆ ತಲಾ 6500 ದಂಡ ವಿಧಿಸಿ ಬಿಡುಗಡೆ ಮಾಡುತ್ತಿದೆ. ಮತ್ತೆ ಇದೇ ದಂದೆ ಮಾಡಿದರೆ ಹೆಚ್ಚಿನ ದಂಡ ಮತ್ತು ಬಂಡಿಯನ್ನು ಸೀಜ್ ಮಾಡಲಿದೆಂಬ ಎಚ್ಚರಿಕೆ ನೀಡಲಾಗಿದೆಯಂತೆ.
ಅನುಮತಿ ಇಲ್ಲ:
ಸಂಜೆವಾಣಿ ಜೊತೆ ಮಾತನಾಡಿದ ಎಸಿ ರಾಜೇಶ್ ಅವರು ಮರಳನ್ನು ಎತ್ತಿನ ಬಂಡಿಯಲ್ಲಿ ಸಾಗಾಣೆಗೆ ಯಾವುದೇ ವಿನಾಯ್ತಿ ಇಲ್ಲ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದಿದ್ದಾರೆ.
ರೂಪನಗುಡಿ ರಸ್ತೆಯಲ್ಲೂ ಇದೇ ರೀತಿದಂದೆ ನಡೆಯುತ್ತಿದೆ. ಹಗರಿಯಿಂದ ತಂದ ಮರಳನ್ನು ಆಂದ್ರಾಳು ಬಳಿಯ ಬೈಪಾಸ್ ರಸ್ತೆಯಲ್ಲಿ ಸಂಗ್ರಹಿಸಿ ನಗರಕ್ಕೆ ಸಾಗಾಟ ಮಾಡಲಾಗುತ್ತದೆ. ಇದಕ್ಕೂ ಬ್ರೇಕ್ ಹಾಕಬೇಕಿದೆ.
























