
ಉಡುಪಿ, ಫೆ.೨೮: ಉಡುಪಿ ತಾಲೂಕಿನ ೮೦ ಬಡಗಬೆಟ್ಟು ಗ್ರಾಮದ ಕಬ್ಯಾಡಿ ತಟ್ಟೂರು ವ್ಯಾಪ್ತಿಯ ಸರ್ವೆ ನಂ.೧೧/೧ರಲ್ಲಿ ಇರುವ ೬.೩೦ ಎಕರೆ ಸರಕಾರಿ ಜಾಗದಲ್ಲಿ ನಿಷೇಧಾಜ್ಞೆ ಇದ್ದರೂ ಅಕ್ರಮವಾಗಿ ಶಂಕುಸ್ಥಾಪನೆ ಹಾಗೂ ಪೋಸ್ಟರ್ ಅನಾವರಣ ಕಾರ್ಯಕ್ರಮ ನಡೆಸಿದ ಆರೋಪದಡಿ ಜನಪ್ರತಿನಿಧಿಗಳು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಉಡುಪಿ ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳು ನೀಡಿದ ಪಿರ್ಯಾದಿನಂತೆ, ???? ಜಾಗವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಸರಿನಲ್ಲಿ ಕಂಬಳದ ಕೋಣಗಳ ವಾಹನ ನಿಲುಗಡೆ ಮತ್ತು ಪ್ರಾಣಿಗಳ ಚಿಕಿತ್ಸಾ ಕೇಂದ್ರ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ (ಎ.ಡಿಸ್, ಎಲ್, ಎನ್, ಡಿ/ಪಿ.ಡಿ.ಆರ್(೧)/ಸಿ.ಆರ್/೧೦೭/೨೦೨೩/ಇ೧೩೧೯೯೮, ದಿ:೨೩/೦೯/೨೦೨೫) ಕಾಯ್ದಿರಿಸಲಾಗಿತ್ತು.
ಆದರೆ ಕರ್ನಾಟಕ ರಾಜ್ಯ ಕಂಬಳ ಅಸೋಷಿಯೇಶನ್‌ಗೆ ಮಾನ್ಯತೆ ಹೊಂದಿರುವ ಜಿಲ್ಲಾ ಮಟ್ಟದ “ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ, ಉಡುಪಿ”ಯವರು ಕಾನೂನಿಗೆ ವಿರುದ್ಧವಾಗಿ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಜಮೀನನ್ನು ಸಮತಟ್ಟು ಮಾಡಿದರೆಂದು ದೂರಿನಲ್ಲಿ ಹೇಳಲಾಗಿದೆ. ಫೆ.೨೮ರಂದು ಬೆಳಿಗ್ಗೆ ೧೦.೩೦ರಿಂದ ೧೨.೩೦ರ ನಡುವೆ ಶಂಕುಸ್ಥಾಪನೆ ಹಾಗೂ ಪೋಸ್ಟರ್ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಆರೋಪಿಸಲಾಗಿದೆ.
ಸ್ಥಳೀಯರು, ಕಂಬಳ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದರೂ ಅದನ್ನು ಉಲ್ಲಂಘಿಸಿ ಧ್ವನಿವರ್ಧಕ ಪರವಾನಿಗೆ ಇಲ್ಲದೆ ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮ ಕೂಟ ಸೇರಿಕೊಂಡು ಕಾರ್ಯಕ್ರಮ ನಡೆಸಲಾಗಿದೆ ಎಂದು ಪಿರ್ಯಾದಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು, ಬೆಳ್ತಂಗಡಿ, ಬಂಟ್ವಾಳ ಕ್ಷೇತ್ರಗಳ ಶಾಸಕರು, ಸಂಸದರು, ಎಂಎಲ್‌ಸಿ ಹಾಗೂ ಸ್ಥಳೀಯ ಕಾರ್ಯಕರ್ತರು ಸೇರಿ ಒಟ್ಟು ೩೮ ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.






























