ಅಕಾಲಿಕ ಮಳೆ ಬೆಳೆ ನಷ್ಟ ಪ್ರದೇಶಕ್ಕೆಬಿಜೆಪಿ ರೈತ ಮೋರ್ಚಾ ಭೇಟಿ ಪರಿಶೀಲನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.30:
ಜಿಲ್ಲೆಯಾದ್ಯಂತ ಇತ್ತೀಚಿಗೆ ಬಿದ್ದ ಅಕಾಲಿಕ ಮಳೆಯಿಂದ ಉಂಟಾದ ಬೆಳೆಹಾನಿ ಬಗ್ಗೆ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಗಣಪಾಲ ಐನಾಥ ರೆಡ್ಡಿ ಮತ್ತವರ ತಂಡ
ನಿನ್ನೆ ಭೇಟಿ ನೀಡಿ ಪರಿಶೀಲನ ಮಾಡಿತು.
ಜಿಲ್ಲೆಯ ಸಿರುಗುಪ್ಪ ತಾಲ್ಲೂಕು ಬಾಗೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ರಾಹಿಂಪುರ ಗ್ರಾಮದ ರೈತ ಹುಸೇನ್ ಸಾಬ್ ಅವರ ಭತ್ತದ ಬೆಳೆಯು ಸಂಪೂರ್ಣ ನೆಲಕ್ಕಚ್ಚಿ ನಾಶವಾಗಿ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.
ಇದೇ ರೀತಿ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಕಟಾವಿಗೆ ಬಂದ ಆರ್ ಎನ್ ಆರ್ ತಳಿಯ ಭತ್ತದ ಬೆಳೆಯು ಸಂಪೂರ್ಣವಾಗಿ ನೆಲಕ್ಕಚ್ಚಿ ನಾಶವಾಗಿದೆ.
ಸಿರುಗುಪ್ಪ ತಾಲ್ಲೂಕಿನ ಕೊಂಚಿಗೇರಿ ಗ್ರಾಮದ ರೈತ ಕೋರಿ ವೀರಪ್ಪ ಅವರ 6 ಎಕರೆ ಜಮೀನಿನಲ್ಲಿ ತೊಗರಿ ಬೆಳೆಯ ಹೂವು ಸಂಪೂರ್ಣವಾಗಿ ಉದುರಿಹೋಗಿ ಬೆಳೆ ನಾಶವಾಗಿದೆ. ಇದೇ ಗ್ರಾಮದ ರೈತ ಪೂಜಾರಿ ಪ್ರಹ್ಲಾದ ಅವರ 3 ಎಕರೆ ಜಮೀನಿನಲ್ಲಿ ಕಟಾವಿಗೆ ಬಂದ ಈರುಳ್ಳಿ ಬೆಳೆಯು ಸಹ ಸಂಪೂರ್ಣವಾಗಿ ಕೊಳೆತುಹೋಗಿ ತೀವು ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.
ಈ ಅಕಾಲಿಕ ಮಳೆಯಿಂದ ಜಿಲ್ಲೆಯ ರೈತರು ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸುವಂತಾಗಿದ್ದು ರೈತರ ಸ್ಥಿತಿ ಶೋಚನೀಯವಾಗಿರುತ್ತದೆ. ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಐನಾಥ ರೆಡ್ಡಿ ಸ್ಥಳದಲ್ಲಿಯೇ ದೂರವಾಣಿ ಮೂಲಕ ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ, ಅಧಿಕಾರಿಗಳೊಂದಿಗೆ ಮಾತನಾಡಿ ಬೆಳೆ ಹಾನಿ ಸಂಭವಿಸಿದ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಬಗ್ಗೆ, ಸಮೀಕ್ಷೆ ನಡೆಸಿ ತ್ವರಿತಗತಿಯಲ್ಲಿ ಸರ್ಕಾರದ ವತಿಯಿಂದ ಬೆಳೆ ನಷ್ಟ ಪರಿಹಾರ ದೊರೆಯುವಂತೆ ಮಾಡಲು ಮನವಿ ಮಾಡಿದರು.
ತುಂಗಭದ್ರ ಆಣೆಕಟ್ಟಿನಲ್ಲಿ ಪ್ರಸ್ತುತ 80 TMC ನೀರು ಸಂಗ್ರಹವಿದ್ದು ಹಾಗೂ ಪ್ರತಿದಿನ 15 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಉಂಟಾಗುವ ಸಂಭವಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹವಾಗುವುದರಿಂದ ಎರಡನೇ ಬೆಳೆಗೆ ನೀರು ಪೂರೈಕೆ ಮಾಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ವೇಳೆ ಸಿರುಗುಪ್ಪ ತಾಲ್ಲೂಕು ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಕಾರ್ಯದರ್ಶಿ ಮೆಹಬೂಬ್ ಬಾಷ, ಮಲ್ಲಯ್ಯ ನಾಯ್ಕ, ಕೃಷ್ಣಪ್ಪ ನಾಯ್ಕ, ರೈತರಾದ ಆಲಂಬಾಷ, ನಬೀಸಾಬ್, ಬಸವನಗೌಡ, ಬಸವರಾಜ, ಸಿದ್ದಪ್ಪ, ಸಿದ್ದಮ್ಮನಹಳ್ಳಿ ಗ್ರಾಮದ ರೈತ ಶ್ರೀನಿವಾಸ ರೆಡ್ಡಿ, ವದ್ದಟ್ಟಿ ಗ್ರಾಮದ ರೈತ ತಿಮ್ಮಾರೆಡ್ಡಿ, ಕೊಂಚಿಗೇರಿ ಗ್ರಾಮದ ರೈತರಾದ ಎನ್. ಸೋಮಶೇಖರ್, ಸಿರಿಗೇರಿ ಕುಮಾರಪ್ಪ, ದಾಸಾಪುರದ ಎನ್. ಮಾಳೇಶ, ಎನ್. ರಾಮಾಂಜಿನಿ, ಸಿರಿಗೇರಿ ಮಂಜುನಾಥಗೌಡ ಹಾಗೂ ಗ್ರಾಮದ ಇತರ ಹಿರಿಯ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.