Home Uncategorized ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮಾ.09: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ರಾಯಲ್ ಸರ್ಕಲ್ ಬಳಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಈ ಸಭೆಯನ್ನುದ್ದೇಶಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷರಾದ ಶಾಂತಾ ರವರು  ಮಾತನಾಡುತ್ತಾ, ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನ, 1910ರಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ, 8ಗಂಟೆಗಳ ಕಾಲ ಕೆಲಸದ ಅವಧಿ , ಕೆಲಸ ಮಾಡುವ ಸ್ಥಳದಲ್ಲಿ ಭದ್ರತೆ ಒಳ್ಳೆಯ ವಾತಾವರಣ, ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಮತದಾನ ಹಕ್ಕು, ಹೆರಿಗೆ ರಜೆ,, ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿ ನಿಷೇಧ ಇತ್ಯಾದಿ ಬೇಡಿಕೆಗಳಿಗೆ ಆಗ್ರಹಿಸಿ ನಡೆದಂತ ಹೋರಾಟ ಪ್ರಪಂಚದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ, ಸಂಚಲನವನ್ನು ಸೃಷ್ಟಿಸಿತ್ತು. ಕ್ಲಾರಾ ಜಟ್ಕಿನ್ ರವರ ನೇತೃತ್ವದಲ್ಲಿ, 1910ರಲ್ಲಿ ಡೆನ್ಮಾರ್ಕ್ ನ ಕೋಪನ್ ಹೇಗನ್‍ನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಜರ್ಮನಿಯ ಸಾಮಾಜಿಕ ಕಾರ್ಯಕರ್ತೆ ಕ್ಲಾರಾ ಜೆಟ್ಕಿನ್ ರವರು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಬೇಕೆಂದು ಪ್ರಸ್ತಾಪಿಸಿದರು. ಸುಮಾರು 17 ದೇಶಗಳ ಮಹಿಳಾ ಪ್ರತಿನಿಧಿಗಳು ಈ ಪ್ರಸ್ತಾಪವನ್ನು ಒಪ್ಪಿಕೊಂಡರು. ಅಂದಿನಿಂದ ಇಂದಿನವರೆಗೂ ಪ್ರಪಂಚದಾದ್ಯಂತ ಎಲ್ಲಾ ವರ್ಗದ ಮಹಿಳೆಯರು ಆಚರಿಸುತ್ತಾರೆ. ಇಂದಿನ ಸರ್ಕಾರಗಳು, ಮಹಿಳಾ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಇಂತಹ ಸಮಸ್ಯೆಗಳ ಜೊತೆಗೆ ಆಶಾ ಕಾರ್ಯಕರ್ತೆಯರನ್ನು ತರ್ಕಬದ್ಧ ಗೊಳಿಸುವ ನೆಪದಲ್ಲಿ, ಕೆಲಸದಿಂದ ವಜಾಗೊಳಿಸುವುದನ್ನು ವಿರೋಧಿಸುತ್ತೇವೆ. ಮಹಿಳೆಯರ ಪರ ಎನ್ನುವ ಸರ್ಕಾರಗಳಿಗೆ ಮಹಿಳೆಯರ ಬಗ್ಗೆ ನೈಜ ಕಾಳಜಿ ಇದ್ದಲ್ಲಿ, ವೃತ್ತಿಯಲ್ಲಿ ಅವರನ್ನು ಮುಂದುವರಿಸಲು ಒತ್ತಾಯಿಸುತ್ತಾ, ಮುಂದಿನ ದಿನಗಳಲ್ಲಿ ಪ್ರಭಲ ಹೋರಾಟಕ್ಕೆ ಸಜ್ಜಾಗಿ ಎಂದು ಕರೆ ನೀಡಿದರು.

ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ (ಬಿ.ಎನ್.ಎಚ್.ಎಸ್) ಸಂಚಾಲಕರಾದ ಸೋಮಶೇಖರ್ ಗೌಡ ರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, 1990ರ ದಶಕದಲ್ಲಿ ಜಾರಿಗೆ ತಂದ, ಜಾಗತೀಕರಣ ಉದಾರೀಕರಣ ಖಾಸಗೀಕರಣ ನೀತಿಗಳಿಂದ ಆರೋಗ್ಯ ಕ್ಷೇತ್ರದ ಕಾರ್ಪೋರೇಟೀಕರಣ, ಶಿಕ್ಷಣ ಖಾಸಗೀಕರಣ, ಉದ್ಯೋಗಗಳು ಕಾಂಟ್ರಾಕ್ಟ್ ಗಳ ಕೈಗೆ, ಹೀಗೆ ಸಾರ್ವಜನಿಕ ಕ್ಷೇತ್ರವು ಸಂಪೂರ್ಣ ಕಡೆಗಣಿಸಲ್ಪಟ್ಟು, ಆರೋಗ್ಯವು ಸೇರಿದಂತೆ ಎಲ್ಲಾ ಕ್ಷೇತ್ರಗಳು ಉದ್ಯಮವಾಗಿ ಪರಿವರ್ತಿತವಾದವು. ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಕಾರ್ಪೋರೇಟ್ ಪರ ನೀತಿಗಳನ್ನು ಜಾರಿಗೆ ತಂದು ಅವರ ರಕ್ಷಣೆಗೆ ಪಣತೊಟ್ಟು ನಿಂತಿವೆ. ಹಾಗಾಗಿ ಮಹಿಳೆಯರ ಪರ, ಜನಪರ ಯೋಜನೆಗಳನ್ನು ತರುವುದು ಸಾಧ್ಯವಿಲ್ಲ. ಈ ನೀತಿಗಳು ಹೆಣ್ಣು ಮಕ್ಕಳ ಇಂದಿನ ಪರಿಸ್ಥಿತಿಗೆ ಮೂಲ ಕಾರಣವಾಗಿವೆ.  ಆದ್ದರಿಂದ, ಮಹಿಳಾ ಕಾರ್ಮಿಕರು, ಮಹಿಳಾ ಸಮುದಾಯದ ಮೂಲಭೂತ ಹಕ್ಕುಗಳಾದ, ಶಿಕ್ಷಣ, ಆರೋಗ್ಯ, ಉದ್ಯೋಗದ ಭದ್ರತೆ ಗಳಿಸಿಕೊಳ್ಳಲು ಬಲಿಷ್ಠ ಪ್ರಜಾತಾಂತ್ರಿಕ ಹೋರಾಟಗಳನ್ನು ಕಟ್ಟುವುದು ಈ ಘಳಿಗೆಯ ಅವಶ್ಯಕತೆಯಾಗಿದೆ ಎಂದರು. ಬಳ್ಳಾರಿ ನಗರ ಅಧ್ಯಕ್ಷರಾದ ಶ್ರೀಮತಿ. ರೇಷ್ಮಾ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಎಂದು ಜಿಲ್ಲಾಧ್ಯಕ್ಷೆ ಎಂ..ಗೀತಾ ತಿಳಿಸಿದ್ದಾರೆ.