
ಮಂಗಳೂರು: ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಭೇದಿಸಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು ೧೧ ಲಕ್ಷ ರೂಪಾಯಿ ಮೌಲ್ಯದ ೨೨ ಕೆ.ಜಿ ೨೫೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ ಜಲಗಾಂ ಜಿಲ್ಲೆಯ ಕರಣ್ ಬಾಬು ರಾಂ ಜಾದವ್ (೨೭), ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಸಮೀರ್ ಶಾ (೧೯), ಉಡುಪಿ ಹೆಜಮಾಡಿ ಕೋಡಿಯ ಎಂ.ಹೆಚ್. ಮಯ್ಯದಿ (೪೮) ಮತ್ತು ಮಂಗಳೂರು ಕುದ್ರೋಳಿಯ ಇಬ್ರಾಹಿಂ ಕಲೀಲ್ (೪೭) ಎಂದು ಗುರುತಿಸಲಾಗಿದೆ.
ಶನಿವಾರ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಹೊರರಾಜ್ಯದಿಂದ ಗಾಂಜಾ ತಂದು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು ಉತ್ತರ ಉಪ ವಿಭಾಗದ ಎ.ಸಿ.ಪಿ. ನೇತೃತ್ವದ ತಂಡ ಹಾಗೂ ಪಣಂಬೂರು ಠಾಣಾ ಪೊಲೀಸರು ಜಂಟಿ ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಒಟ್ಟು ೧೧,೧೨,೫೦೦ ರೂ. ಮೌಲ್ಯದ ಗಾಂಜಾ, ೧೮,೦೦೦ ರೂ. ಮೌಲ್ಯದ ೬ ಮೊಬೈಲ್ ಫೋನ್ಗಳು ಹಾಗೂ ಸಾಗಾಟಕ್ಕೆ ಬಳಸಿದ್ದ ಎರಡು ಸ್ಕೂಟರ್ಗಳನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಒಟ್ಟು ಸ್ವತ್ತಿನ ಮೌಲ್ಯ ಸುಮಾರು ೧೨,೩೦,೫೦೦ ರೂಪಾಯಿ ಎಂದು ಅಂದಾಜಿಸಲಾಗಿದೆ.
ಆರೋಪಿಗಳಾದ ಕರಣ್ ಬಾಬು ಮತ್ತು ಸಮೀರ್ ಶಾ ಅವರು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಗಾಂಜಾ ತಂದು ಇಲ್ಲಿನ ಮಯ್ಯದಿ ಮತ್ತು ಇಬ್ರಾಹಿಂ ಕಲೀಲ್ಗೆ ಪೂರೈಸುತ್ತಿದ್ದರು. ಈ ಇಬ್ಬರು ಮಂಗಳೂರು ನಗರದ ಪ್ರಮುಖ ಸ್ಥಳಗಳು ಸೇರಿದಂತೆ ಪಣಂಬೂರು, ಸುರತ್ಕಲ್, ಮುಲ್ಕಿ ಹಾಗೂ ಉಡುಪಿ ಜಿಲ್ಲೆಯ ಮಲ್ಪೆ, ಕಾರ್ಕಳದಾದ್ಯಂತ ಚಿಲ್ಲರೆ ಮಾರಾಟ ಮಾಡುತ್ತಿದ್ದರು. ಈ ಹಿಂದೆ ಕೂಡ ಹಲವು ಬಾರಿ ಇವರು ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ (ಓಆPS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






























