ಅಂಚೆ ಕಚೇರಿಗಳಲ್ಲಿ ಕನ್ನಡ ಬಳಕೆಗೆ ಕನ್ನಡ ಆಗ್ರಹ

ಸಂಜೆವಾಣಿ ನ್ಯೂಸ್
ಮೈಸೂರು: ಜ.28:
– ಅಂಚೆ ಕಚೇರಿಗಳಲ್ಲಿ ಅಂಚೆ ಕಚೇರಿಗಳ ಹಣ ತುಂಬುವ ಚಲನ್ ಗಳಲ್ಲಿ ಕನ್ನಡ ಭಾಷೆಯ ಚಲನ್‍ಗಳನ್ನು ಮುದ್ರಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಪ್ರತಿಭಟಿಸಿದರು.

ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ನಾನಾ ಘೋಷಣೆ ಕೂಗಿದ ಸೇನಾಪಡೆಯ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದರು. ಸೇನಾಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್ ಡಿ, ಪಿಪಿಎಫ್ ಹಾಗೂ ಅಂಚೆ ಕಚೇರಿಯ ವಿವಿಧ ಯೋಜನೆಗಳಲ್ಲಿ ತೊಡಗಿಸಿರುವ ಹಣವನ್ನು ಅವಧಿ ಪೂರ್ಣವಾದ ನಂತರ ಹಿಂಪಡೆಯುವ ಯಾವುದೇ ರೀತಿಯ ಅಂಚೆ ಕಚೇರಿಯ ಚಲನ್ ಗಳು ಕನ್ನಡದಲ್ಲಿ ಇಲ್ಲದಿರುವುದು ಅತ್ಯಂತ ಖಂಡನೀಯ. ಚಲನ್ ನ ಒಂದು ಭಾಗದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಹಾಗೂ ಮತ್ತೊಂದು ಭಾಗದಲ್ಲಿ ಹಿಂದಿಯಲ್ಲಿ ಮಾತ್ರ ಮುದ್ರಿತವಾಗಿರುವುದು ಕನ್ನಡಿಗರಿಗೆ ಅತ್ಯಂತ ನೋವಿನ ಸಂಗತಿ. ಇದು ಕನ್ನಡ ವಿರೋಧಿ ಧೋರಣೆಯಾಗಿದೆ. ಇದರಿಂದ ಹಿಂದಿ ಹಾಗೂ ಇಂಗ್ಲೀಷ್ ಬಾರದ ಸ್ಥಳೀಯ ಕನ್ನಡಿಗರು ಚಲನ್ ತುಂಬಲು ಬೇರೆಯವರನ್ನು ಆಶ್ರಯಿಸಬೇಕಾಗಿರುವುದು, ಗೋಗರೆಯಬೇಕಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

ತಮಿಳುನಾಡಿನಲ್ಲಿ ಒಂದು ಭಾಗದಲ್ಲಿ ಇಂಗ್ಲಿಷ್ ಮತ್ತೊಂದು ಭಾಗದಲ್ಲಿ ತಮಿಳು ಭಾಷೆಯಲ್ಲಿ ಚಲನ್ ಮುದ್ರಣವಾಗಿರುತ್ತದೆ. ಒಕ್ಕೂಟದ ವ್ಯವಸ್ಥೆಯಲ್ಲಿ ಪಕ್ಕದ ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲಿ ಚಲನ್ ಮುದ್ರಿತವಾಗಿರುವಾಗ ನಮ್ಮ ರಾಜ್ಯದಲ್ಲಿ ಏಕೆ ಚಲನ್ ಕನ್ನಡದಲ್ಲಿ ಮುದ್ರಿತವಾಗಿಲ್ಲ, ರಾಜ್ಯ ಸರ್ಕಾರ, ರಾಜ್ಯದ ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೌನವೇಕೆ ಈ ಕೂಡಲೇ ಕನ್ನಡದಲ್ಲಿ ಚಾಲನ್‍ಗಳನ್ನು ಮುದ್ರಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗೋಲ್ಡನ್ ಸುರೇಶ್, ಪ್ರಭುಶಂಕರ್, ಪ್ರಜೀಶ್, ಕೃಷ್ಣಪ್ಪ, ಡಾ.ಮೊಗಣ್ಣಾಚಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ಸಿಂಧುವಳ್ಳಿ ಶಿವಕುಮಾರ್, ನೇಹ, ಡಾ. ನರಸಿಂಹೇಗೌಡ, ಭಾಗ್ಯಮ್ಮ, ಮಂಜುಳಾ, ಜ್ಯೋತಿ, ಗೀತಾಗೌಡ, ಇಂದಿರಾ, ಸುಜಾತಾ, ರಾಧಾಕೃಷ್ಣ, ವಾಣಿ, ಗೀತಾ, ತಾಯೂರು ಗಣೇಶ್, ಬಸವರಾಜು, ಪ್ರಭಾಕರ್, ಶಿವರಾಂ, ಶ್ರೀನಿವಾಸ್, ಅಶೋಕ್, ನಾರಾಯಣಗೌಡ, ರಘು ಅರಸ್, ದರ್ಶನ್ ಗೌಡ, ತ್ಯಾಗರಾಜ್, ರವಿ ನಾಯಕ್ ಇನ್ನಿತರರು ಉಪಸ್ಥಿತರಿದ್ದರು.