‘ಪ್ರಜಾ’ಕೀಯ ನ‌ಡೆ ಗುಟ್ಟುಬಿಡದ ಉಪೇಂದ್ರ

ಬೆಂಗಳೂರು, ಆ. ೧೨- ರಾಜಕೀಯ ಸೇರ್ಪಡೆಗೆ ಉತ್ಸಾಹ ತೋರಿರುವ ನಟ ಹಾಗೂ ನಿರ್ದೇಶಕ ಉಪೇಂದ್ರ ಮುಂದಿನ ರಾಜಕೀಯ ಬಗ್ಗೆ ಬಾಯಿ ಬಿಡದೆ ರಹಸ್ಯ ಕಾಪಾಡಿಕೊಂಡಿದ್ದಾರೆ.

ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿರುವ ಉಪೇಂದ್ರ ಅದಕ್ಕಾಗಿ `ಪ್ರಜಾಕೀಯ’ ವೇದಿಕೆ ನಿರ್ಮಾಣ ಮಾಡಿದ್ದಾರೆ. ಹಣಬಲ, ತೋಳ್ಬಲ, ಜಾತಿ ಬೆಂಬಲವಿಲ್ಲದೆ ರಾಜಕೀಯ ಮಾಡಲು ಮುಂದಾಗಿದ್ದೇನೆ. ನನ್ನ ತತ್ವದಲ್ಲಿ ನಂಬಿಕೆ ಇರುವವರು ಎಲ್ಲರೂ ಬರಬಹುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ.

ನಾನು ಜನನಾಯಕನೂ ಅಲ್ಲ, ಜನ ಸೇವಕನೂ ಅಲ್ಲ, ನಾನೊಬ್ಬ ಕಾರ್ಮಿಕ. ಪ್ರಜೆಗಳ ಹಿತಕ್ಕಾಗಿ ದುಡಿಯುವವನು, ನನ್ನೊಂದಿಗೆ ಬರುವವರು ಇದೇ ರೀತಿಯ ಮನಸ್ಥಿತಿ ಹೊಂದಿರಬೇಕು. ಅಲ್ಲದೆ ಎಲ್ಲರೂ ಖಾದಿಯ ಬದಲು ಖಾಕಿಯನ್ನು ಧರಿಸಬೇಕು. ಖಾಕಿ ದುಡಿಮೆಯ ಸಂಕೇತ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ, ರಾಜಕಾರಣಿಗಳು ರಾಜರಾಗಿದ್ದಾರೆ. ಪ್ರಭುಗಳನ್ನು ಗುಲಾಮರ ರೀತಿ ನೋಡಿಕೊಳ್ಳುತ್ತಿದ್ದಾರೆ. ಜನರು ಕಟ್ಟುವ ತೆರಿಗೆಯಿಂದ ಫ್ಲಾಟಿನಲ್ಲಿ ವಾಸ ಮಾಡಿ, ಫ್ಲೈಟ್‌ನಲ್ಲಿ ಹಾರಾಡುತ್ತಾರೆ. ಜನರ ಪ್ರತೀ ತೆರಿಗೆ ಹಣಕ್ಕೆ ಲೆಕ್ಕ ಕೊಡಬೇಕು. ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದೇನೆ. ಇದಕ್ಕೆ ಯಾವುದೇ ಡೆಡ್‌ಲೈನ್ ಇಟ್ಟುಕೊಂಡಿಲ್ಲ. ನನ್ನದ್ದೇನಿದ್ದರೂ ಲೈಮ್ ಲೈನ್, ಜನರು ಬಂದ ನಂತರ ಅವರೊಂದಿಗೆ ಚರ್ಚಿಸಿ ಆನಂತರ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ ಎಂದರು.

ಹೊಸ ಪಕ್ಷ ಸ್ಥಾಪನೆಗೆ ಪಕ್ಷದ ಹೆಸರು, ಚಿಹ್ನೆ ಎಲ್ಲವೂ ಬೇಕು. ಹಾಗಾಗಿಯೇ ಒಂದೊಂದು ಕ್ಷೇತ್ರಗಳಲ್ಲಿ ಒಂದೊಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉಪಾಯ ನೀಡಿದ್ದಾರೆ. ಅವುಗಳನ್ನು ಮುಂದಿಟ್ಟುಕೊಂಡು ಯಾರು ಬೇಕಾದರೂ ಬರಬಹುದು. ನಯಾಪೈಸೆ ದುಡ್ಡಿಲ್ಲದೆ ಪಕ್ಷ ಕಟ್ಟಿ ರಾಜಕಾರಣ ಮಾಡಬೇಕೆನ್ನುವುದು ನನ್ನ ಉದ್ದೇಶ ಎಂದರು.

ಜನರಿಂದ ದೇಣಿಗೆ ಎತ್ತಿ ಇಲ್ಲವೆ ಇನ್ಯಾವುದೇ ಮೂಲದಿಂದ ಹಣ ಸಂಗ್ರಹಿಸಿ ಪಕ್ಷ ಕಟ್ಟಬಹುದು. ಆದರೆ, ಪಕ್ಷ ಕಟ್ಟಿದ ಮೇಲೆ ಪಕ್ಷಕ್ಕಾಗಿ ದುಡಿದವರಿಗೆ ಸಹಾಯ ಮಾಡಬೇಕು. ಆಗ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಭ್ರಷ್ಟಾಚಾರವಿಲ್ಲದೆ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತದಲ್ಲಿ ಭಾಗಿಯಾಗಬೇಕು ಎಂಬುದು ನನ್ನ ಉದ್ದೇಶ. ಜನ ಮುಂದೆ ಯಾವ ರೀತಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೋ ಅದಕ್ಕೆ ಮನ್ನಣೆ ನೀಡಿ ಆಕಡೆ ಹೆಜ್ಜೆ ಹಾಕುತ್ತೇನೆ ಎನ್ನುವ ಮೂಲಕ ಬೇರೆ ರಾಜಕೀಯ ಪಕ್ಷಕ್ಕೆ ಹೋಗುವ ಸುಳಿವನ್ನೂ ನೀಡಿದ್ದಾರೆ.

ಜನಸಾಮಾನ್ಯರು ಅಸಮಾನ್ಯರು ಎನ್ನುವುದನ್ನು ಆಳುವ ರಾಜಕಾರಣಿಗಳು ಅರ್ಥ ಮಾಡಿಕೊಂಡಿಲ್ಲ. ಹೀಗಾಗಿಯೇ ಸಮಸ್ಯೆಗಳು ಬೆಟ್ಟದಷ್ಟಿವೆ. ಅವುಗಳಲ್ಲಿ ಸ್ವಲ್ಪವಾದರೂ ಕಡಿಮೆ ಮಾಡಬೇಕು ಎನ್ನುವುದು ನನ್ನ ಉದ್ದೇಶ. ಹೀಗಾಗಿ ಪ್ರಜಾಕೀಯವನ್ನು ಆರಂಭಿಸಿದ್ದೇನೆ. ಇದಕ್ಕೆ ಮುಕ್ತ ಮನಸ್ಸಿರುವವರು ಎಲ್ಲರೂ ತಮ್ಮ ಅಭಿಪ್ರಾಯ, ಸಲಹೆ, ಸೂಚನೆಯನ್ನು ನೀಡಬಹುದು ಎಂದು ಹೇಳಿದರು.

ಮಧ್ಯದಲ್ಲಿ ಕೈಬಿಡುವುದಿಲ್ಲ

ಸಂಪೂರ್ಣ ರಾಜಕೀಯದಲ್ಲೇ ತೊಡಗಿಸಿಕೊಳ್ಳಲು ಮುಂದಾಗಿದ್ದೇನೆ. ಇದಕ್ಕಾಗಿಯೇ ಕನ್ನಡ ಮತ್ತು ತೆಲುಗಿನಲ್ಲಿ ಅವಕಾಶಗಳನ್ನು ಬಿಟ್ಟಿದ್ದೇನೆ. ಹೀಗಾಗಿ ಸದ್ಯ ಆರಂಭಿಸಿರುವ ಪ್ರಜಾಕೀಯವನ್ನು ಮಧ್ಯದಲ್ಲಿ ಬಿಡುವುದಿಲ್ಲ. ನಂಬಿ ಬಂದ ಜನರಿಗೆ ಮೋಸ ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ.

ಕನ್ನಡ ಧ್ವಜಕ್ಕೆ ಬೆಂಬಲ

ರಾಜ್ಯದಲ್ಲಿ ಇತ್ತೀಚೆಗೆ ಕೇಳಿ ಬರುತ್ತಿರುವ ಪ್ರತ್ಯೇಕ ಕನ್ನಡ ಧ್ವಜ ವಿಚಾರಕ್ಕೆ ನಟ ಹಾಗೂ ನಿರ್ದೇಶಕ ಉಪೇಂದ್ರ ಬೆಂಬಲ ವ್ಯಕ್ತಪಡಿಸಿದ್ದಾರೆ. ಜನರು ಏನು ಬಯಸುತ್ತಾರೋ ಅದಕ್ಕೆ ತಮ್ಮ ಬೆಂಬಲ ಇದೆ. ಹೀಗಾಗಿ ಕನ್ನಡಕ್ಕೆ ಪ್ರತ್ಯೇಕ ಧ್ವಜ ಬೇಕು ಎನ್ನುವ ಜನರ ನಿಲುವಿಗೆ ತಮ್ಮ ಬೆಂಬಲವಿದೆ ಎಂದು ಹೇಳಿದರು.

 

Leave a Comment