9 ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶ: ರೈತರ ಮುಖದಲ್ಲಿ ಮಂದಹಾಸ

ಬೆಳಗಾವಿ, ಜೂ 18: ಸಕ್ಕರೆ ನಾಡು ಬೆಳಗಾವಿಯಲ್ಲಿ ರೈತರು ಹಗಲಿರುಳು ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಕಬ್ಬಿಗೆ ಬಾಕಿ ಪಾವತಿಸದೇ ಇರುವ ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶಿಸಲಾಗಿದ್ದು, ಸದ್ಯ ರೈತರು ನಿಟ್ಟುಸಿರು ಬಿಟ್ಟಂತಾಗಿದೆ.
ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸದೇ ಇರುವ ಸಕ್ಕರೆ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದು, ರೈತರ ಮೊಗದಲ್ಲಿ ಅಲ್ಪಮಟ್ಟಿಗೆ ಮಂದಹಾಸ ಮೂಡಿದೆ.
ನಗರದಲ್ಲಿಂದು ನುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಎಫ್.ಆರ್.ಪಿ ಪ್ರಕಾರ ರೈತರು ಬೆಳೆದ ಕಬ್ಬನ್ನು ಖರೀದಿಸಿ ದರ ಪಾವತಿಸದ ಕಾರಣ ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶ ಹೊರಡಿಸಿದ್ದಾರೆ.
ಶಾಸಕ ಶ್ರೀಮಂತ ಪಾಟೀಲ ಒಡೆತನದ ಅಥಣಿ ಶುಗರ್ಸ್, ಲಕ್ಷ್ಮಣ ಸವದಿ ಒಡೆತನದ ಕೃಷ್ಣಾ ಶುಗರ್ಸ್ ಕಂಪನಿ, ಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ, ರೇಣುಕಾ ಶುಗರ್ಸ್, ಉಮೇಶ್ ಕತ್ತಿ ಒಡೆತನದ ವಿಶ್ವರಾಜ ಶುಗರ್ಸ್ ಕಂಪನಿ, ಕೊಳವಿಯ ಗೋಕಾಕ್ ಶುಗರ್ಸ್, ಉಗಾರ ಶುಗರ್ಸ್, ಎಮ್.ಕೆ. ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಬೈಲಹೊಂಗಲದ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸೇರಿದಂತೆ ಒಟ್ಟು 9 ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಯಾ ತಹಶೀಲ್ದಾರರಿಗೆ ಸಕ್ಕರೆ ಕಾಖಾನೆಗಳನ್ನು ಮುಟ್ಟುಗೋಲು ಹಾಕಲು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಾದ್ಯಂತ ರೈತರು ಕಬ್ಬನ್ನು ಬೆಳೆದು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿ ಹಲವಾರು ದಿನಗಳು ಕಳೆದಿದ್ದರೂ ಸಹ ಕಾರ್ಖಾನೆಯ ಮಾಲೀಕರು ಇದಕ್ಕೆ ಕ್ಯಾರೇ ಎನ್ನದೆ ಕುಳಿತಿದ್ದರು. ಇದಕ್ಕೆ ಬೇಸತ್ತ ರೈತರು ಡಿ.ಸಿ ಕಛೇರಿಯ ಮುಂದೆ ಹಗಲಿರುಳೆನ್ನದೇ ಧರಣಿ ಸತ್ಯಾಗ್ರಹಗಳನ್ನು ಸಹ ಮಾಡಿದ್ದರು.
ಸದ್ಯ ಜಿಲ್ಲಾಧಿಕಾರಿಗಳು ನೀಡಿರುವ ಆದೇಶದಿಂದ ರೈತರು ಕೊಂಚ ನೆಮ್ಮದಿ ಕಾಣುವಂತಾಗಿದ್ದು, ಡಿ.ಸಿ ಅವರ ಈ ಆದೇಶ ಕೇವಲ ಆದೇಶವಾಗಿ ಉಳಿಯದೆ ಕಾರ್ಯೋನ್ಮುಖವಾದರೆ ಅನ್ನದಾತನ ಮುಖದಲ್ಲಿ ನಗೆ ಕಂಡೀತು. ಇಲ್ಲದಿದ್ದರೆ ವiತ್ತೇ ಆತ ಹೋರಾಟಕ್ಕೆ ಬೀದಿಗಿಳಿಯಬೇಕಾದ ಪರಿಸ್ಥಿತಿ ಬಂದೊದಗಲಿದೆ.

Leave a Comment