9 ಕೋಟಿ ರೂ. ಅಕ್ರಮ ಗುತ್ತಿಗೆ ಪತ್ತೆ

ಬೆಂಗಳೂರು, ಜ. ೧೧-ದಕ್ಷಿಣ ವಲಯದ ಜಂಟಿ ಆಯುಕ್ತರ ಅನುಮೋದನೆಯನ್ನು ಪಡೆಯದೆ ಸಹಾಯಕ ಹಣಕಾಸು ನಿಯಂತ್ರಕರು ಸುಮಾರು 9 ಕೋಟಿ ರೂ. ಗಳನ್ನು ಕಾನೂನು ಬಾಹಿರವಾಗಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರುವ ಹಗರಣವನ್ನು ಬಿಬಿಎಂಪಿ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರು ಇಂದು ಪತ್ತೆ ಹಚ್ಚಿದ್ದಾರೆ.
ಇಂದು ಮಧ್ಯಾಹ್ನ ದಕ್ಷಿಣ ವಲಯ ಜಂಟಿ ಆಯುಕ್ತರಿಗೆ ಕಚೇರಿಗೆ ಸಮಿತಿಯ ಸದಸ್ಯರೊಂದಿಗೆ ತೆರಳಿದ ಅಧ್ಯಕ್ಷೆ ನೇತ್ರಾ ನಾರಾಯಣರವರು ಸಹಾಯಕ ಹಣಕಾಸು ನಿಯಂತ್ರಕ ಸತ್ಯಮೂರ್ತಿ ಅವರ ಗೈರು ಹಾಜರಿಯಲ್ಲಿಯೇ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿ ಅಚ್ಚರಿ ವ್ಯಕ್ತಪಡಿಸಿದರು.
ಕೇವಲ 2 ತಿಂಗಳ ಅವಧಿಯಲ್ಲಿ ಜಂಟಿ ಆಯುಕ್ತರ ಅನುಮೋದನೆಯನ್ನು ಪಡೆಯದೆ ಕಮೀಷನ್ ಪಡೆದು ಬೇರೆ ಬೇರೆ ಖಾತೆಗಳಿದ್ದ ಹಣವನ್ನು ಕಸಗುತ್ತಿಗೆದಾರರಿಗೆ ಹಾಗೂ ರಸ್ತೆಗುಂಡಿ ಮುಚ್ಚುವ ಗುತ್ತಿಗೆದಾರರಿಗೆ 9 ಕೋಟಿ ರೂಪಾಯಿಗಳನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡಿದ್ದು, ದಾಖಲೆಗಳಲ್ಲಿರುವುದನ್ನು ಕಂಡು ಸದಸ್ಯರು ದಿಗ್ಭ್ರಮೆ ಒಳಗಾದರು.
ಈ ಕಡತಗಳಿಗೆ ಜಂಟಿ ಆಯುಕ್ತರು ಎಇ‌ಇ, ಸಿಇ ಅಧಿಕಾರಿಗಳು ಮೊದಲು ಸಹಿ ಮಾಡಬೇಕು. ಆದರೆ ಎಸಿಎಫ್ ಅವರು ಹಣ ಬಿಡುಗಡೆಯಾದ ಬಳಿಕ ಜಂಟಿ ಆಯುಕ್ತರು ಸಹಿ ಮಾಡಿರುವುದು ಕಂಡು ಬಂದಿದೆ.
ಸಂಬಂಧಪಟ್ಟ ಕೆಲ ಕಡತಗಳು ಬಿಬಿಎಂಪಿ ಕೇಂದ್ರ ಕಚೇರಿಯ ಹಣಕಾಸು ಇಲಾಖೆಗೆ ಕೊಂಡೊಯ್ಯಲಾಗಿದೆ ಎಂಬ ಮಾಹಿತಿಯನ್ನು ಪಡೆದ ಅಧ್ಯಕ್ಷರು ಕೂಡಲೇ ಅಲ್ಲಿರುವ ಕಡತಗಳು ಹಾಗೂ ದಕ್ಷಿಣ ವಲಯ ಕಛೇರಿಯಲ್ಲಿರುವ ಎಲ್ಲಾ ಕಡತಗಳನ್ನು ತಮ್ಮ ಕಚೇರಿಗೆ ತರುವಂತೆ ನೇತ್ರಾ ನಾರಾಯಣರವರು ಅಧಿಕಾರಿಗಳಿಗೆ ಸೂಚಿಸಿದರು.
ಸಂಬಂಧಪಟ್ಟ ಕಡತಗಳನ್ನು ಸಮಗ್ರವಾಗಿ ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳುವಂತೆ ಆಯುಕ್ತರಾದ ಮಂಜುನಾಥ್ ಪ್ರಸಾದ್‌ರವರಿಗೆ ಶಿಫಾರಸ್ ಪತ್ರವನ್ನು ಬರೆಯುವುದಾಗಿ ಅವರು ತಿಳಿಸಿದರು.
ನಂತರ ಸ್ಥಾಯಿಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಚಿಕ್ಕಪೇಟೆ ಉಪವಿಭಾಗಕ್ಕೆ ಭೇಟಿ ನೀಡಿದಾಗ ಅಲ್ಲಿನ ಕಛೇರಿಯನ್ನು ತುರ್ತು ಅನುದಾನದಡಿ 10 ಲಕ್ಷ ರೂ. ವೆಚ್ಚ ಮಾಡಿ ಕಚೇರಿಯನ್ನು ನವೀಕೃತಗೊಳಿಸಲಾಗಿತ್ತು. ಆದರೆ ವಾಸ್ತವವಾಗಿ ತುರ್ತು ಅನುದಾನದಡಿ ಕಟ್ಟಡ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಬೇಕು. ಆದರೆ ಈ ವಿಭಾಗದ ಎಂಜಿನಿಯರ್‌ಗಳು, ಕಚೇರಿಯನ್ನು ನವೀಕೃತಗೊಳಿಸಿದ್ದಾರೆ. ಇದು ಕಾನೂನಿಗೆ ವಿರುದ್ಧವಾದದ್ದು ಎಂದವರು ತಿಳಿಸಿದರು.
ಸಂಬಂಧಪಟ್ಟ ಕಡತಗಳನ್ನು ಕಚೇರಿಗೆ ತಂದೊಪ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಮಾಲತಿ ಸೋಮಶೇಖರ್, ಶ್ಯಾಮಲ, ಉಮಾ, ಸವಿತ, ಮತ್ತಿತರರು ಉಪಸ್ಥಿತರಿದ್ದರು.

Leave a Comment