84 ಎಕರೆ ಸರ್ಕಾರಿ ಇನಾಮು ಜಮೀನು ಕಬಳಿಕೆ ಸಾಬೀತು

 ಉಸ್ತುವಾರಿ ಸಚಿವ ನಾಡಗೌಡ ರಾಜೀನಾಮೆಗೆ ಒತ್ತಾಯ
ರಾಯಚೂರು.ಫೆ.12- ನಗರದ ಹೊರ ವಲಯದ ಆಶಾಪೂರು ರಸ್ತೆಯಲ್ಲಿ ಬರುವ ಸರ್ವೆ ನಂ.1359/2, 1362/1ರಲ್ಲಿ 84 ಎಕರೆ 03 ಗುಂಟೆ ಕೋಟ್ಯಾಂತರ ಬೆಲೆ ಬಾಳುವ ಜಮೀನಿನ ಬಗ್ಗೆ 30 ದಿನದೊಳಗೆ ವಿಚಾರಣೆ ನಡೆಸಿ, ಸದರಿ ಆಸ್ತಿಯನ್ನು ಸರ್ಕಾರ ವಶಕ್ಕೆ ಪಡೆಯಲು ಸೂಕ್ತ ಆದೇಶ ಹೊರಡಿಸುವಂತೆ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರು ಆದೇಶಿಸಿದೆಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಅವರು ಹೇಳಿದ್ದಾರೆ.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಜಮೀನಿಗೆ ಸಂಬಂಧಿಸಿ, ಶರಣಪ್ಪ ತಂದೆ ಸಿದ್ದಪ್ಪ ಮರ್ಚೆಟ್ಹಾಳ ಇವರು ಕಲ್ಬುರ್ಗಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ನ್ಯಾಯಾಲಯ ಈ ಕುರಿತು ವಿಚಾರಣೆ ನಂತರ ಪ್ರಾದೇಶಿಕ ಆಯುಕ್ತರಿಗೆ ಈ ಪ್ರಕರಣ ಕುರಿತು ವಿಚಾರಣೆ ನಡೆಸಿ, ಕ್ರಮ ಜರುಗಿಸುವಂತೆ ಸೂಚಿಸಲಾಗಿತ್ತು. ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ಸದರಿ ಜಮೀನು ಪ್ರಕರಣ ವಿಚಾರಣೆ ನಂತರ ಜಮೀನು ಅಕ್ರಮ ಕಬಳಿಕೆ ಸಾಬೀತುಗೊಂಡ ಹಿನ್ನೆಲೆ, 30 ದಿನದಲ್ಲಿ ಈ ಕುರಿತು ಪರಿಶೀಲಿಸಿ, ಸರ್ಕಾರಕ್ಕೆ ವಶಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ.
ಸರ್ವೆ ನಂ.1359/1ರಲ್ಲಿ 50 ಎಕರೆ, ಸರ್ವೆ ನಂ.1359/2 ರಲ್ಲಿ 12.27 ಎಕರೆ ಜಮೀನು ಹಾಗೂ ಸರ್ವೆ ನಂ.1362ರಲ್ಲಿ 21 ಎಕರೆ 16 ಗುಂಟೆ ಸೇರಿ ಒಟ್ಟು 84 ಎಕರೆ 3 ಗುಂಟೆ ಜಮೀನು ಅತಿಕ್ರಮಣಕ್ಕೆ ಗುರಿಯಾಗಿರುವುದು ಸಾಬೀತುಗೊಂಡಿರುವುದು ಕಂಡು ಬರುತ್ತದೆಂದು ವಿಚಾರಣೆಯಲ್ಲಿ ಸ್ಪಷ್ಟಗೊಂಡಿದೆ. ಈ ಹಿನ್ನೆಲೆ, ಸದರಿ ಜಮೀನನ್ನು ಕಾಯ್ದೆ 150 ಕಲಂ 6ರಲ್ಲಿ ಕೇಂದ್ರ ಸರ್ಕಾರವೂ 3/2017 ದಿನಾಂಕ 14-03-2017ರ ರಂದು ಹೊರಡಿಸಿದ ತಿದ್ದುಪಡಿ ಅಧಿಸೂಚನೆಯನ್ವಯ ಸಹಾಯಕ ಆಯುಕ್ತರು ರಾಯಚೂರು ಇವರು 27-2-2016 ರಂದು ಸಲ್ಲಿಸಿದ ವರದಿಯನ್ವಯ ಜಿಲ್ಲಾಧಿಕಾರಿಗಳು ಸದರಿ ಜಮೀನು ಕುರಿತು 30 ದಿನದೊಳಗಾಗಿ ವಿಚಾರಣೆ ಜರುಗಿಸಿ, ಆಸ್ತಿ ಸರ್ಕಾರ ವಶಕ್ಕೆ ಪಡೆಯುವ ಬಗ್ಗೆ ಸೂಕ್ತ ಆದೇಶ ಹೊರಡಿಸಿ, ಈ ಪ್ರತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಲು ಸೂಚಿಸಿದೆ.
84 ಎಕರೆ ಜಮೀನು ಸರ್ಕಾರಿ ಇನಾಮಿ ಜಮೀನಾಗಿದ್ದು, ಇದನ್ನು ಉಸ್ತುವಾರಿ ವೆಂಕಟರಾವ್ ನಾಡಗೌಡ ಅವರು ಸೇರಿದಂತೆ ಇನ್ನಿತರರು ಅತಿಕ್ರಮಿಸಿದ್ದು, ಈಗ ಅಕ್ರಮ ಸಾಬೀತುಗೊಂಡಿದ್ದರಿಂದ ವೆಂಕಟರಾವ್ ನಾಡಗೌಡ ಅವರು ಈ ಪ್ರಕರಣ ಹಿನ್ನೆಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾನಸಯ್ಯ ಅವರು ಸವಾಲ್ ಹಾಕಿದ್ದಾರೆ.
1947 ರಲ್ಲಿ ದೇಶ ವಿಭಜನೆ ಹಿನ್ನೆಲೆಯಲ್ಲಿ ಖಾಜಿ ಮಹ್ಮದ್ ಅಬ್ದುಲ್ ರಸೂಲ್ ಸಿದ್ದೀಖಿ ಹಾಗೂ ಮತ್ತಿತರ ಸದರಿ ಭೂಮಿಯ ಮೂಲ ಇನಾಮುದಾರರಾಗಿರುತ್ತಾರೆ. ಇವರು ದೇಶಬಿಟ್ಟ ಹೋದ ನಂತರ ನಕಲಿ ವರಸುದಾರರಾದ ಮಹ್ಮದ್ ಮಹಿಬೂಬ್ ತಂದೆ ಮಹ್ಮದ್ ಹುಸೇನ್ ನಾಯಬ್ ಮತ್ತಿತರರು ಜಿಪಿಎ ಸೃಷ್ಟಿಸಿಕೊಂಡು ವಾರಸುದಾರರಾಗುತ್ತಾರೆ. ತದನಂತರ 2011 ಮಾರ್ಚ್ 14 ರಂದು ನಕಲಿ ವಾರಸುದಾರರು ಸ್ಥಳೀಯ ಪ್ರಭಾವಿ ನಾಯಕರು ಭೂ ಕಬಳಿಕೆಗೆ ಸಹಕರಿಸುತ್ತಾರೆ. ನಕಲಿ ವಾರಸುದಾರರಾದ ಜಿ.ವಿರುಪಾಕ್ಷಪ್ಪ, ಶರಣು ಭೂಪಾಲ್ ನಾಡಗೌಡ ಜವಳಿಗೇರಾ, ಕಡಗೋಳ ರಾಮಚಂದ್ರ ಎಂಬುವವರಿಗೆ ಜಿಪಿಎ ಮೂಲಕ ನೋಂದಣಿ ಮಾಡಿಸಲಾಗಿತ್ತು.
ಜಿಪಿಎ ಮೂಲಕ ತಮ್ಮ ರಕ್ತ ಸಂಬಂಧಿಗಳಾದ ಸುಧಾ, ಉದಯಕುಮಾರ, ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರ ಪುತ್ರ ಅಭಿಷೇಕ ನಾಡಗೌಡ ಅವರ ಹೆಸರಿಗೆ 21 ಎಕರೆ, ಬಸವರಾಜ ಸಕ್ರಿ ವಕೀಲರು, ಕಡಗೋಳ ಆಂಜಿನೇಯ್ಯ, ಶಿವಾನಂದ ಚುಕ್ಕಿ ಇವರಿಗೆ ಮಾರಾಟ ಮಾಡುತ್ತಾರೆ. ನಕಲಿ ವಾರಸುದಾರರು ಜಿಪಿಎದಾರರು ಹಾಗೂ ನಕಲಿ ಖರೀದಿದಾರರು ಸೇರಿ ಒಟ್ಟು 84 ಅಸಲಿ ಆಸ್ತಿ ಕಬಳಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ವಿರುದ್ಧವೇ ಪತ್ರಿಕಾಗೋಷ್ಠಿ ಮೂಲಕ ಹೋರಾಟ ಚಾರಿತ್ರ್ಯವಧೆ ಮಾಡುವ ತಂತ್ರ ರೂಪಿಸಿದ್ದರು.
ಪ್ರಾದೇಶಿಕ ಆಯುಕ್ತರ ಆದೇಶ ನಂತರ ಉಸ್ತುವಾರಿ ಸಚಿವರು ಸೇರಿ ಇನ್ನಿತರರು ಸರ್ಕಾರಿ ಜಮೀನು ಕಬಳಿಸಿರುವುದು ಸ್ಪಷ್ಟಗೊಂಡಿದೆ. ಈ ಹಿನ್ನೆಲೆ, ವೆಂಕಟರಾವ್ ನಾಡ‌ಗೌಡ ಅವರು, ಸರ್ಕಾರಿ ಜಮೀನು ಕಬಳಿಕೆ ಆರೋಪದ ಹಿನ್ನೆಲೆ, ಪ್ರಾದೇಶಿಕ ಆಯುಕ್ತರ ಆದೇಶ ಫೆ.11 ರಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ಸರ್ಕಾರಿ ಜಮೀನು ವಶಪಡಿಸಿಕೊಳ್ಳುವಂತೆ ಕೋರಲಾಗಿದೆ.
84 ಎಕರೆ ಒತ್ತುವರಿ ಪ್ರದೇಶದಲ್ಲಿ 40 ಎಕರೆ ಜಮೀನು ಹಿಡುವಳಿದಾರರಿಗೆ ನೀಡಿ, ಉಳಿದ 40 ಎಕರೆ ಜಮೀನಿನಲ್ಲಿ ಜಿಲ್ಲಾ ಮಟ್ಟದ ಕಛೇರಿ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಒತ್ತಾಯಿಸಿದರು. ಸರ್ಕಾರದ ಜವಾಬ್ದಾರಿ ಮತ್ತು ಉನ್ನತ ಸ್ಥಾನದಲ್ಲಿರುವ ವೆಂಕಟರಾವ್ ನಾಡಗೌಡ ಅವರು, ಸರ್ಕಾರಿ ಜಮೀನು ರಕ್ಷಿಸುವ ಬದಲಿಗೆ ಅದನ್ನು ಕಬಳಿಸುವ ದುರುದ್ದೇಶ ಹೊಂದಿದ್ದರಿಂದ ಅವರು, ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿ.ಅಮರೇಶ, ನಾಗಲಿಂಗಯ್ಯ, ಶರಣಪ್ಪ, ರವಿ ಉಪಸ್ಥಿತರಿದ್ದರು.

Leave a Comment