70 ವರ್ಷಗಳ ನಂತರ ಆಸೀಸ್ ನೆಲದಲ್ಲಿ ಭಾರತಕ್ಕೆ ಚಾರಿತ್ರಿಕ ಸರಣಿ ಜಯ

ಸಿಡ್ನಿಯಲ್ಲಿಂದು ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಸರಣಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭಾರತೀಯ ಆಟಗಾರರು ಪ್ರಶಸ್ತಿ ಹಿಡಿದುಕೊಂಡು ವಿಜಯೋತ್ಸವ ಆಚರಿಸಿದರು.

ಸಿಡ್ನಿ, ಜ ೭- ಸತತ ಏಳು ದಶಕಗಳ ನಂತರ ಇದೇ ಮೊದಲ ಬಾರಿಗೆ ಭಾರತ, ಕಾಂಗರೂಗಳ ನಾಡಿನಲ್ಲಿ  ಟೆಸ್ಟ್ ಕ್ರಿಕೆಟ್ ಸರಣಿ ಗೆಲ್ಲುವ ಮೂಲಕ ಚಾರಿತ್ರಿಕ ಸನ್ನಿವೇಶಕ್ಕೆ ಮುನ್ನುಡಿ ಬರೆಯಿತು.  ಭಾರೀ ಮಳೆಯಿಂದಾಗಿ ಸಿಡ್ನಿಯಲ್ಲಿ  ನಡೆದ ನಾಲ್ಕನೇ ಪಂದ್ಯ ಮಳೆ ಆಹುತಿಯಾಗಿದೆ. ಈ ಹಿನ್ನೆಲೆಯಲ್ಲಿ ಅಂತಿಮ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಈ ಮೂಲಕ ಕೊಹ್ಲಿ ಪಡೆ ೨-೧ ಅಂತರದಿಂದ  ಸರಣಿಯನ್ನು ಗೆದ್ದು ಬೀಗಿತು. ಆಸೀಸ್ ನೆಲದಲ್ಲಿ ಸರಣಿ ಗೆಲುವು ಸಾಧಿಸಲಾಗಿಲ್ಲ ಎಂಬ ಹಣೆ ಪಟ್ಟಿಯನ್ನು ಅಳಿಸಿ ಹಾಕಿತು.

  • ಸ್ಕೋರ್ ವಿವರ
  • ಭಾರತ ಮೊದಲ ಇನ್ನಿಂಗ್ಸ್ ೭ ವಿಕೆಟ್ ನಷ್ಟಕ್ಕೆ ೬೨೨ಕ್ಕೆ ಡಿಕ್ಲೇರ್
  • ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ೩೦೦ ರನ್ ಆಲೌಟ್
  • ಎರಡನೇ ಇನ್ನಿಂಗ್ಸ್ ವಿಕೆಟ್ ನಷ್ಟವಿಲ್ಲದೆ ೬ರನ್
  • ಸಿಡ್ನಿ ಪಂದ್ಯ ಡ್ರಾನಲ್ಲಿ ಅಂತ್ಯ
  • ಭಾರತಕ್ಕೆ  2-1 ರಿಂದ ಸರಣಿ ಗೆಲುವು

7cricket3ಈಗಾಗಲೇ ಹಲವು ದಾಖಲೆಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿರುವ ನಾಯಕ  ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಸರಣಿ ಗೆಲುವು ಸಾಧಿಸಿದ ಭಾರತದ ಮೊದಲ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಯಶಸ್ವಿ ನಾಯಕನ ಪಟ್ಟಿಗೂ ಕೊಹ್ಲಿ ಸೇರ್ಪಡೆಯಾಗಿದ್ದಾರೆ.

ಲಾಲಾ ಅಮರನಾಥ್ ನೇತೃತ್ವದ ತಂಡ ೧೯೪೭=೪೮ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಭಾರತದ ಪಾಲಿಗೆ ಆಸ್ಟ್ರೇಲಿಯಾ ಮಣ್ಣಿನಲ್ಲಿ ಗೆಲುವು ಮರೀಚಿಕೆಯಾಗಿತ್ತು. ೧೯೯೬-೯೭ರಲ್ಲಿ  ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಯನ್ನು  ಬಾರ್ಡರ್-ಗವಾಸ್ಕರ್ ಸರಣಿ ಎಂದು ಮರು ನಾಮಕರಣ ಮಾಡಲಾಗಿತ್ತು. ಆದರೆ ಈ ಐತಿಹಾಸಿ ಸರಣಿ ಜಯ ದಾಖಲಿಸಲು ೭ ದಶಕಗಳು ಬೇಕಾಯಿತು.

ನಿನ್ನೆ ಆಸ್ಟ್ರೇಲಿಯಾ ತಂಡದ ಮೇಲೆ ಪ್ರವಾಸಿ ತಂಡ ಫಾಲೋ ಆನ್ ಏರಿತ್ತು. ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಆಸೀಸ್ ವಿಕಟ್ ನಷ್ಟವಿಲ್ಲದೆ ೬ ರನ್‌ಗಳಿಸಿತ್ತು. ಮಳೆಯಿಂದಾಗಿ ಆಟಕ್ಕೆ ಅಡ್ಡಿಯಾಯಿತು. ಅಂತಿಮ ದಿನವಾದ ಇಂದೂ ಕೂಡ ಮಳೆಯರಾಯನ ಕಾಟ ಮುಂದುವರೆಯಿತು. ಈ ಹಿನ್ನೆಲೆಯಲ್ಲಿ  ಬಾರ್ಡರ್-ಗವಾಸ್ಕರ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. ಈ ಪಂದ್ಯವನ್ನು ಭಾರತ  ಕೈವಶ ಮಾಡಿಕೊಳ್ಳುವ ಎಲ್ಲ ಅವಕಾಶವಿತ್ತು. ಆದರೆ ವರುಣ ತಣ್ಣೀರು ಎರಚಿದ. ಆದರೆ ಆಸ್ಟ್ರೇಲಿಯಾಕ್ಕೆ ಇಂದು ವರದಾನವಾಯಿತು. ಈ ಪಂದ್ಯದಲ್ಲಿ ಸೋತಿದ್ದರೆ ೩-೧ ಅಂತರದಿಂದ ತೀವ್ರ ಮುಖಭಂಗ ಅನುಭವಿಸಬೇಕಾಗಿತ್ತು. ವರುಣವ ಕೃಪೆ  ತೋರಿದ್ದರಿಂದ ಸೋಲಿನ ದವಡೆಯಿಂದ ಪಾರಾಯಿತು.

ಅಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ೩೧ ಹಾಗೂ ಮೆಲ್ಬೋರ್ನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ೧೩೭ ರನ್‌ಗಳಿಂದ ಗೆದ್ದುಕೊಂಡಿತ್ತು. ಸಿಡ್ನಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತ, ಆಸೀಸ್ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿ, ಅತಿಥೇಯ ತಂಡಕ್ಕೆ ೩೧ ವರ್ಷಗಳ ಬಳಿಕ ಫಾಲೋ ಆನ್ ಏರಿತ್ತು.

ಒಟ್ಟಾರೆ ಈ ಐತಿಹಾಸಿಕ ಸರಣಿ ಜಯ ಗಳಿಸಲು ಯಶಸ್ವಿಯಾಗಿರುವ ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಪಂದ್ಯ ಪುರುಷೋತ್ತಮ

ಸಿಡ್ನಿಯಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಕೇವಲ ೭ ರನ್ ಗಳಿಂದ ದ್ವಿಶತಕ ವಂಚಿತರಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಸರಣಿಯುದ್ದಕ್ಕೂ ಅದ್ವಿತೀಯ ಬ್ಯಾಟಿಂಗ್ ಪ್ರದರ್ಶನ ನೀಡಿ ಆಸೀಸ್ ಬೌಲರ್‌ಗಳನ್ನು ಸಿಂಹಸ್ವಪ್ನವಾಗಿ ಕಾಡಿದ ಪೂಜಾರ್ ಈ ಸರಣಿಯಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯೂ ಅವರಿಗೆ ಒಲಿದಿದೆ. ಇದರ ಜತೆಗೆ ಆಸ್ಟ್ರೇಲಿಯಾ ನೆಲದಲ್ಲಿ ಹೆಚ್ಚು ಎಸೆತಗಳನ್ನು ಎದುರಿಸುವ ಮೂಲಕ ಪೂಜಾರ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ನನ್ನ ಬದುಕಿನ ಅತ್ಯುತ್ತಮ ಸಾಧನೆ; ಕೊಹ್ಲಿ

ಆಸ್ಟ್ರೇಲಿಯಾ ನೆಲದಲ್ಲಿ ಇದೇ ಮೊದಲ ಬಾರಿಗೆ ಚಾರಿತ್ರಿಕ ಗೆಲುವು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಶ್ರೇಷ್ಠ ಸಾಧನೆಯಾಗಿದೆ ಎಂದು ಭಾರತೀಯ ಕ್ರಿಕೆಟ್ ತಂಡ ನಾಯಕ ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ, ಟೆಸ್ಟ್ ಸರಣಿ ಗೆದ್ದಿರುವು ವಿಶ್ವಕಪ್ ಜಯಕ್ಕಿಂತ ಮಿಗಿಲಾದುದು ಎಂದು ಹೇಳಿದ್ದಾರೆ.

ಪಂದ್ಯ ಮುಗಿದ ನಂತರ ಪ್ರತಿಕ್ರಿಯೆ ನೀಡಿರುವ ಅವರು, ಅಭೂತಪೂರ್ವ ಸಾಧನೆಗೆ ತಂಡದ ಆಟಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.  ನಾನು ತಂಡದ ಸಾರಥ್ಯ ವಹಿಸಿಕೊಂಡ ಬಳಿಕ ಅಭಿಯಾನ ಅರಂಭವಾಯಿತು. ೧೨ ತಿಂಗಳಿನಿಂದ ಗೆಲುವು ಸಾಧಿಸುವ ಸಂಸ್ಕೃತಿಯನ್ನು ವೃದ್ಧಿಸಿಕೊಂಡು ಬರುತ್ತಿದ್ದೇವೆ. ಈ ಸಂದರ್ಭದಲ್ಲಿ ಒಂದೇ ಮಾತನ್ನು ಹೇಳುತ್ತೇನೆ. ತಂಡದ ಆಟಗಾರರು ಹೆಮ್ಮೆಯ ಸಾಧನೆ ಮಾಡಿದ್ದಾರೆ ಎಂದಷ್ಟೇ ಹೇಳುತ್ತೇನೆ ಎಂದರು.

Leave a Comment