7ನೇ ದಿನವೂ ಲೋಕಸಭೆ ಮುಂದೂಡಿಕೆ

ನವದೆಹಲಿ, ಮಾ. ೧೩- ಪಿಎನ್‌ಬಿ ಹಗರಣ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸತತ 7ನೇ ದಿನವಾದ ಇಂದು ಕೂಡ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಕೋಲಾಹಲವೆಬ್ಬಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಕಾಂಗ್ರೆಸ್, ಎಐಎಡಿಎಂಕೆ, ಟಿಡಿಪಿ ಮತ್ತು ಟಿಆರ್ಎಸ್ ಸದಸ್ಯರು ಸದನದ ಭಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಕರೆತರಬೇಕೆಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.

ಮತ್ತೊಂದೆಡೆ ಟಿಡಿಪಿ ಸದಸ್ಯರು ಮೈತ್ರಿ ಧರ್ಮ ಪಾಲಿಸುವಂತೆ ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿ ಪಡಿಸಿದರು. ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರೂ ಸ್ಪೀಕರ್ ಮನವಿಗೆ ಪ್ರತಿಪಕ್ಷಗಳು ಸ್ಪಂದಿಸದ ಕಾರಣ ಕಲಾಪವನ್ನು ಮುಂದೂಡಿದರು. ಮತ್ತೆ ಕಲಾಪ ಸಮಾವೇಶಗೊಂಡಗಲು ಪ್ರತಿಪಕ್ಷಗಳು ಗದ್ದಲ ಮುಂದೂವರೆಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಿದರು.

ಇತ್ತ ರಾಜ್ಯಸಭೆಯಲ್ಲೂ ಪಿಎನ್‌ಬಿ ಹಗರಣ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಧರಣಿ ನಡೆಸಿದ್ದವು. ತೃಣ ಮೂಲ ಕಾಂಗ್ರೆಸ್ ಸದಸ್ಯರು ಮತದಾನಕ್ಕೆ ಅವಕಾಶ ಕಲ್ಪಿಸುವ ನಿಯಮಾವಳಿಗಳ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಸಭಾಪತಿ ವೆಂಕಯ್ಯ ನಾಯ್ಡು ಧರಣಿ ನಿರತ ಸದಸ್ಯರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಸಭಾಪತಿಗಳು ಹೇಳಿದರು. ಆದರೆ ಟಿಎಂಸಿ ಸದಸ್ಯರು ಮತದಾನಕ್ಕೆ ಅವಕಾಶ ಕಲ್ಪಿಸುವ 168 ಅಥವಾ 169ರ ನಿಯಮಾವಳಿಗಳ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಮತ್ತೊಂದೆಡೆ ಅಣ್ಣಾ ಡಿಎಂಕೆ ಸದಸ್ಯರು ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಧರಣಿ ನಡೆಸಿದರೆ, ಟಿಡಿಪಿ ಸದಸ್ಯರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಗದ್ದಲವೆಬ್ಬಿಸಿದರು. ಕಲಾಪ ನಿಯಂತ್ರಣಕ್ಕೆ ಬಾರದ ಕಾರಣ ಸಭಾಪತಿ ವೆಂಕಯ್ಯ ನಾಯ್ಡು ಕಲಾಪವನ್ನು 2 ಗಂಟೆಯವರೆಗೂ ಮುಂದೂಡಿದರು.

ಇದಕ್ಕೂ ಮುನ್ನ ಮೆಕ್ಸಿಕೊ ದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಶೂಟಿಂಗ್ ಸ್ಪರ್ಧೆಯಲ್ಲಿ ಅದ್ವೀತಿಯ ಸಾಧನೆ ಮಾಡಿ ಪದಕ ಗಳಿಸಿದ ಶೂಟರ್‌ಗಳಿಗೆ ಸಭಾಪತಿ ಅಭಿನಂದನೆ ಸಲ್ಲಿಸಿದರು.

Leave a Comment