7ನೇ ಆರ್ಥಿಕ ಗಣತಿ : “ಡಿಜಿಟಲ್ ಇಂಡಿಯಾ” ಮೊಬೈಲ್ ಆಪ್‌ ಬಿಡುಗಡೆ

ಮೈಸೂರು. ಜ.22: ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯ ಇವರು ರಾಜ್ಯಾದ್ಯಂತ 7ನೇ ಆರ್ಥಿಕ ಗಣತಿಯನ್ನು ನವೆಂಬರ್ 2019ರಿಂದ ಮಾರ್ಚ್ 2020 ರವರೆಗಿನ ಅವಧಿಯಲ್ಲಿ ಕೈಗೊಳ್ಳಲು ತೀರ್ಮಾನಿಸಿದ್ದು, 6/11/2019 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 7ನೇ ಆರ್ಥಿಕ ಗಣತಿಗೆ ಸ್ವಯಂ ಮಾಹಿತಿ ನೀಡುವ ಮೂಲಕ ರಾಜ್ಯ ಮಟ್ಟದಲ್ಲಿ ಚಾಲನೆ ನೀಡಿದ್ದಾರೆ. ಅದರಂತೆ ಮೈಸೂರು ಜಿಲ್ಲಾ ಮಟ್ಟದಲ್ಲಿ ಇದೇ ಮೊದಲ ಬಾರಿಗೆ “ಡಿಜಿಟಲ್ ಇಂಡಿಯಾ” ಕಾರ್ಯಕ್ರಮದಡಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸುವ ಸಲುವಾಗಿ ಮೊಬೈಲ್ ಆ್ಯಪ್‌ನ್ನು ಇಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಬಿಡುಗಡೆ ಮಾಡಿದರು.
ಪಾಲಿಕೆಯ ಕಛೇರಿ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಬಳಿಕ ಆರ್ಥಿಕ ಗಣತಿಯ ಕುರಿತು ಮಾಹಿತಿ ನೀಡಿದ ಅವರು 7ನೇ ಆರ್ಥಿಕ ಗಣತಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಂತ ಉಪಯೋಗಕ್ಕಲ್ಲದ ಕೃಷಿ ಮತ್ತು ಕೃಷಿಯೇತರ ಸರಕುಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವೆ ಮುಂತಾದ ಯಾವುದೇ ಆರ್ಥಿಕ ಚಟುವಟಿಕೆಗಳಲ್ಲಿ ಸಂಘಟಿತ ಮತ್ತು ಅಸಂಘಟಿತ ಆರ್ಥಿಕ ವಲಯದ ಎಲ್ಲಾ ಉದ್ದಿಮೆಗಳ ಗಣತಿ ಕಾರ್ಯವನ್ನು ಕೈಗೊಳ್ಳಲಾಗುವುದು. ಪ್ರಸ್ತುತ ಗಣತಿಯಲ್ಲಿ ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಖಾಸಗಿ ಸಿಬ್ಬಂದಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಗಣತಿದಾರರು ಪ್ರತಿ ಕಟ್ಟಡಕ್ಕೆ ಭೇಟಿ ನೀಡಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತಾರೆ ಎಂದರು.
ಪ್ರಸ್ತುತ ಗಣತಿಯು 7ನೇ ಆರ್ಥಿಕ ಗಣತಿಯಾಗಿದ್ದು, ಪ್ರತಿ 5 ವರ್ಷಗಳಿಗೊಮ್ಮ ಆರ್ಥಿಕ ಗಣತಿಯನ್ನು ನಡೆಸಲಾಗುತ್ತಿದೆ. ಈ ಹಿಂದಿನ ಗಣತಿಗಳನ್ನು ಸರ್ಕಾರಿ/ಅರೆ ಸರ್ಕಾರಿ ಸಿಬ್ಬಂದಿಯವರಿಂದ ನಡೆಸಲಾಗಿದ್ದು, 2014 ರಲ್ಲಿ ನಡೆದ 6ನೇ ಆರ್ಥಿಕ ಗಣತಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಒಟ್ಟು 1,40,232 (ಗ್ರಾಮೀಣ 88062 ಮತ್ತು ಪಟ್ಟಣ/ನಗರ 52170) ಉದ್ದಿಮೆಗಳನ್ನು ಗುರುತಿಸಲಾಗಿದೆ.
ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MOSPI) ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (NSSO) & ಕೇಂದ್ರ ಸರ್ಕಾರದ ಇ-ಆಡಳಿತ (Ministry of Electronics & Information Technology) ಅಡಿಯಲ್ಲಿ ನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ (Common Service Centre) ಸಹಯೋಗದಲ್ಲಿ ಖಾಸಗಿ ಗಣತಿದಾರರನ್ನು ನೇಮಕಾತಿ ಮಾಡಿ ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸದರಿ ಗಣತಿಯಲ್ಲಿ ಕೃಷಿ/ ಪ್ಲಾಂಟೇಷನ್ ಮೂಲಕ ಬೆಳೆಗಳನ್ನು ಬೆಳೆಯುವುದನ್ನು ಉದ್ದಿಮ ಎಂದು ಪರಿಗಣಿಸಿರುವುದಿಲ್ಲ. ಆದರೆ ಬೆಳೆಗಳನ್ನು ಕೊಂಡು ಮಾರಾಟ ಮಾಡುವುದನ್ನು ಉದ್ದಿಮೆ ಎಂದು ಪರಿಗಣಿಸಲಾಗಿದೆ.
ಉದ್ದಿಮೆಗಳನ್ನು ಗಣತಿ ಮಾಡುವಾಗ ಕಟ್ಟಡಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಆಯಾ ಸ್ಥಳದಲ್ಲಿಯೇ ಗಣತಿ ಮಾಡಲಾಗುವುದು. ರಸ್ತೆ ಬದಿಯಲ್ಲಿ, ಬೀದಿಗಳಲ್ಲಿ, ಬಯಲು ಪ್ರದೇಶದಲ್ಲಿ ಮುಂತಾದ ಯಾವುದೇ ಕಟ್ಟಡವಲ್ಲದ ಪ್ರದೇಶಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಆಯಾ ಉದ್ದಿಮೆಯ ಮಾಲೀಕನ ಮನೆಯಲ್ಲಿಯೇ ಗಣತಿ ಮಾಡಲಾಗುವುದು.
ಗಣತಿದಾರರು ಮನೆಗಳಿಗೆ. ಉದ್ದಿಮೆಗಳಿಗೆ ಭೇಟಿ ನೀಡಿದಾಗ ಉದ್ದಿಮೆಯ ಮಾಲೀಕರು ಹಾಗೂ ಸಾರ್ವಜನಿಕರು ಅಗತ್ಯವಾದ ಎಲ್ಲಾ ವಿವರಗಳನ್ನು ಒದಗಿಸಬೇಕು ಎಂದರು. ಗಣತಿಯಲ್ಲಿ ಸಂಗ್ರಹಿಸಲಾಗುವ ಮಾಹಿತಿಗಳು ಮುಂದಿನ ವರ್ಷಗಳಲ್ಲಿ ಯೋಜನೆಗಳನ್ನು ತಯಾರಿಸಲು ಹಾಗೂ ಹಾಲಿ ಇರುವ ಉದ್ದಿಮೆಗಳ ಸ್ಥಿತಿಗತಿಗಳನ್ನು ಅರಿತು ಅವುಗಳಿಗೆ ಪ್ರೋತ್ಸಾಹ, ಮಾರುಕಟ್ಟೆ, ಆರ್ಥಿಕ ಸಹಾಯ ಮುಂತಾದ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಅನುಕೂಲವಾಗುತ್ತದೆ, ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲಕರವಾಗುವುದರಿಂದ ಸಾರ್ವಜನಿಕರು ಆದಷ್ಟು ನಿಖರವಾದ ಮಾಹಿತಿಗಳನ್ನು ಒದಗಿಸಲು ಸಲಹೆ ನೀಡಿದರು. ಅಲ್ಲದೇ ಕೃಷಿ ಕಂದಾಯ, ಶಿಕ್ಷಣ ಮುಂತಾದ ಇಲಾಖೆಗಳ ಗ್ರಾಮ ಮಟ್ಟದ ಇಲಾಖಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಯವರು ಗಣತಿ ಕಾರ್ಯದಲ್ಲಿ ಸಂಪೂರ್ಣವಾಗಿ ಸಹಕಾರ ನೀಡಲು ಸೂಚಿಸಿದರು.
ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ದಿಮೆಗಳನ್ನು ಗುರುತಿಸಲು ಗ್ರಾಮಲೆಕ್ಕಾಧಿಕಾರಿ/ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ನಗರ/ಪಟ್ಟಣ ಪ್ರದೇಶಗಳಲ್ಲಿ ನಗರಪಾಲಿಕೆ/ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿ ಅಧಿಕಾರಿಗಳು/ಬಿಲ್ ಕಲೆಕ್ಟರ್ ಗಳು ಸಮೀಕ್ಷೆಯ ಗಣತಿದಾರರಿಗೆ ಸಂಪೂರ್ಣ ಸಹಕಾರ ನೀಡಲು ಸೂಚಿಸಿದರು.
ಕಾಮನ್ ಸರ್ವೀಸ್ ಸೆಂಟರ್ (CSC) ರವರು ಗಣತಿಗಾಗಿ ಸಮರ್ಥರಾದ ಸಿಬ್ಬಂದಿಯನ್ನು ನೇಮಿಸಿ, ತರಬೇತಿ ನೀಡಿ ಜಿಲ್ಲೆಯಲ್ಲಿ ಯಾವುದೇ ಕಟ್ಟಡ/ ಉದ್ದಿಮೆ ಬಿಟ್ಟು ಹೋಗದಂತೆ ನಿಖರವಾಗಿ ಗಣತಿ ಕಾರ್ಯವನ್ನು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಸಕಾಲದಲ್ಲಿ ಕೈಗೊಳ್ಳಲು ಸೂಚನೆ ನೀಡಿದರು.
ಗಣತಿಕಾರ್ಯವನ್ನು ಕೈಗೊಳ್ಳುವ ಗಣತಿದಾರರು/ಮೇಲ್ವಿಚಾರಕರಿಗೆ ಕಾಮನ್ ಸರ್ವೀಸ್ ಸೆಂಟರ್ (CSC)ರವರು ಕಡ್ಡಾಯವಾಗಿ ಗುರುತಿನ ಪತ್ರವನ್ನು ನೀಡಲು ಮತ್ತು ಸಮೀಕ್ಷಾ ಸಮಯದಲ್ಲಿ ಗಣತಿದಾರರು ಗುರುತಿನ ಪತ್ರವನ್ನು ಧರಿಸಲು ಸೂಚಿಸಿದ್ದೇವೆ. ಅಲ್ಲದೆ ಸಮೀಕ್ಷಾ ಸಮಯದಲ್ಲಿ ಗಣತಿದಾರರಿಗೆ ಅಗತ್ಯವಿರುವಲ್ಲಿ ಸೂಕ್ತ ಭದ್ರತೆ/ರಕ್ಷಣೆಯನ್ನು ನೀಡಲು ಪೊಲೀಸ್ ಇಲಾಖೆಯವರನ್ನು ಒದಗಿಸಲು ಸೂಚಿಸಿದರು.
ಗಣತಿಯು 3 ತಿಂಗಳುಗಳ ಕಾಲ ನಡೆಯಲಿದ್ದು, 2020ರ ಜನವರಿ ಮಾಹಯಿಂದ ಮಾರ್ಚ್ 2020ರ ಮಾಹೆಯಲ್ಲಿ ಅಂತ್ಯಗೊಳ್ಳಬೇಕಾಗಿದೆ. ಜಿಲ್ಲೆಯಲ್ಲಿನ ಪ್ರತಿ ಕಟ್ಟಡಕ್ಕೆ ಸಮೀಕ್ಷಾಗಾರರು ಭೇಟಿ ನೀಡಿ ಅದರಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ನಡೆಯುತ್ತಿದ್ದಲ್ಲಿ ಅವುಗಳ ವಿವರಗಳನ್ನು ಗಣತಿ ಕಾರ್ಯದಲ್ಲಿ ಸಂಗ್ರಹಿಸುತ್ತಾರೆ. ಗಣತಿದಾರರಿಗೆ ಸೂಕ್ತವಾದ ತರಬೇತಿಯನ್ನು ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯಿಂದ 28-6-2019 ರಂದು ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಮೀಕ್ಷೆ ಸುಗಮವಾಗಿ ನಡೆಯಲು ಅಗತ್ಯ ಸೂಚನೆ ಹಾಗೂ ಸಲಹೆಗಳನ್ನು ನೀಡಲು ಮತ್ತು ಕ್ಷೇತ್ರ ಕಾರ್ಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲಿಸಿ ದೃಢೀಕರಿಸಲು ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ.
ಜಿಲ್ಲಾ ಸಮಿತಿಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕಧಿಕಾರಿಗಳು, ಕೈಗಾರಿಕೆ, ಕಾರ್ಮಿಕ, ಕೃಷಿ, ತೋಟಗಾರಿಕೆ, ವಾಣಿಜ್ಯ ತೆರಿಗೆ, ಪೊಲೀಸ್, ಶಿಕ್ಷಣ, ಕಾರ್ಖಾನೆ ಮತ್ತು ಬಾಯ್ಲರ್, ಸಹಕಾರ ಮುಂತಾದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಅಲ್ಲದೆ ಉಪವಿಭಾಗಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಆಯುಕ್ತರು/ಮುಖ್ಯಾಧಿಕಾರಿಗಳು, ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಸದಸ್ಯರಾಗಿರುತ್ತಾರೆ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ರಾಷ್ಟ್ರದಲ್ಲಿ ಪ್ರಪ್ರಥಮ ಬಾರಿಗೆ ಕೇಂದ್ರ ಸರ್ಕಾರದ Digital India ಕಾರ್ಯಕ್ರಮದಡಿ ವೆಬ್ ತಂತ್ರಾಂಶದ ಮೂಲಕ ಮೊಬೈಲ್ ಆ್ಯಪ್ ಬಳಸಿ ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಮೊಬೈಲ್ ಆ್ಯಪ್ ತಂತ್ರಾಂಶವು ಈ ವಿಳಾಸದಲ್ಲಿ http://45.64.104.188/census ಲಭ್ಯವಿರುತ್ತದೆ.
ಪ್ಲಾಂಟೇಷನ್ ಬೆಳೆಗಳನ್ನು ಸೇರಿದಂತೆ, ಋತುಕಾಲಿಕ, ವಾರ್ಷಿಕ/ಬಹು ವಾರ್ಷಿಕ ಬೆಳೆಗಳನ್ನು ಬೆಳೆಯುವ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರ್ವಜನಿಕ ಇಲಾಖೆಗಳ ಆಡಳಿತ ಕಛೇರಿಗಳು, ರಕ್ಷಣಾ ಮಂತ್ರಾಲಯದ ಕಛೇರಿಗಳು, ಸ್ಥಳೀಯ ಸಂಸ್ಥೆಗಳ ಆಡಳಿತ ಕಛೇರಿಗಳು ಮುಂತಾದವುಗಳನ್ನು ಹಾಗೂ ಸರ್ಕಾರದಿಂದ ಕಾನೂನು ಬಾಹಿರ ಎಂದು ಘೋಷಿಸಲ್ಪಟ್ಟ ಮತ್ತು ಪಂದ್ಯ ಕಟ್ಟುವ ಚಟುವಟಿಕೆಗಳಲ್ಲಿ ತೊಡಗಿರುವ ಉದ್ದಿಮೆಗಳನ್ನು ಗಣತಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದರು.

Leave a Comment