67000 ಅಧಿಕಾರಿಗಳ ಕಾರ್ಯಕ್ಷಮತೆ ಪರಿಶೀಲನೆಗೆ ಕೇಂದ್ರ ಸರ್ಕಾರದ ಕ್ರಮ

ನವದೆಹಲಿ, ಜೂ. ೧೮ – ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳೂ ಸೇರಿದಂತೆ ಸುಮಾರು 67 ಸಾವಿರ ನೌಕರರ ಕಾರ್ಯಕ್ಷಮತೆ ಗುರುತಿಸಲು ಅವರ ಸೇವಾ ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ.

ಸೇವೆಗಳ ವಿತರಣೆ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರಬೇಕೆಂಬ ಸರ್ಕಾರದ ಪ್ರಯತ್ನಗಳು ಒಂದು ಭಾಗವಾಗಿ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ. ಅಧಿಕಾರಿಗಳಿಗೆ ನಿಗದಿಪಡಿಸಲಾದ ಸಂಹಿತೆಯನ್ನು ಪಾಲಿಸುತ್ತಿದ್ದಾರೆಯೇ, ಇಲ್ಲವೆ ಎಂಬುದನ್ನು ಪರಿಶೀಲಿಸಲಾಗುವುದು. ಲೋಪವಾಗಿದ್ದಲ್ಲಿ ಶಿಕ್ಷೆ ವಿಧಿಸಲು ಈ ಪ್ರಕ್ರಿಯೆ ಸಹಕಾರಿಯಾಗಲಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಮಾರು 67 ಸಾವಿರ ಕೇಂದ್ರ ಸರ್ಕಾರಿ ನೌಕರರ ಸೇವಾ ದಾಖಲಾತಿಗಳನ್ನು ಪರಿಶೀಲಿಸಿ ಅವರ ಕಾರ್ಯಕ್ಷಮತೆಯನ್ನು ಅಳೆಯಲು ಈ ಪ್ರಕ್ರಿಯೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.  ಐಎಎಸ್, ಐಪಿಎಸ್ ಮತ್ತು ಐಆರ್‌ಎಸ್ ಅಧಿಕಾರಿಗಳೂ ಸೇರಿದಂತೆ ಅಖಿಲ ಭಾರತೀಯ ಸೇವೆ ಮತ್ತು ಗ್ರೂಪ್ ‘ಎ’ ದರ್ಜೆಯ ಸುಮಾರು 25 ಸಾವಿರ ಅಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಭ್ರಷ್ಟಾಚಾರ ನಿಗ್ರಹಿಸಲು ಒಂದೆಡೆ ಅತ್ಯುನ್ನತ ಮಟ್ಟದ ದಕ್ಷತೆ ಕಾಪಾಡಿಕೊಳ್ಳುವುದು ಮತ್ತು ಶೂನ್ಯ ಸಹನೆ ತತ್ವ ಪಾಲಿಸುವ ತೀರ್ಮಾನ, ಮತ್ತೊಂದೆಡೆ ಪ್ರಾಮಾಣಿಕ ಅಧಿಕಾರಿಗಳಿಗೆ ಕಾರ್ಯಸ್ನೇಹಿ ವಾತಾವರಣ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಅಧಿಕಾರಿಗಳ ದಕ್ಷತೆಯನ್ನು ಕಾಲ ಕಾಲಕ್ಕೆ ಸರ್ಕಾರ ಪರಿಶೀಲಿಸುತ್ತಾ ಬಂದಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಲು ಇದು ಸಹಕಾರಿಯಾಗಲಿದೆ ಎಂದರು.  ಕಳೆದ 3 ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ವರ್ಗಾವಣೆ ನೀತಿಯ ನಿಯಮಗಳನ್ನು ಸಡಿಲಗೊಳಿಸಿದೆ ಮತ್ತು ರಜೆ ಸಹಿತ ಸಾಲಿಗೆ ಭತ್ಯೆ ಒದಗಿಸುವುದೂ ಸೇರಿದಂತೆ ಹಲವಾರು ರಿಯಾಯ್ತಿಗಳನ್ನು ಘೋಷಿಸಿದೆ ಎಂದು ಸಿಂಗ್ ಹೇಳಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸದೆ ಅದಕ್ಷತೆ ತೋರಿದ ಐಎಎಸ್ ಮತ್ತು ಐಪಿಎಸ್ ಸೇರಿದಂತೆ 129 ಅಧಿಕಾರಿಗಳಿಗೆ ಖಡ್ಡಾಯ ನಿವೃತ್ತಿ ಪಡೆಯುವಂತೆ ಸೂಚಿಸಲಾಗಿದೆ. ಇತ್ತೀಚಿನ ವರದಿ ಪ್ರಕಾರ 48.85 ಲಕ್ಷ ಕೇಂದ್ರ ಸರ್ಕಾರಿ ನೌಕರರು ಇದ್ದಾರೆ ಎಂದು ಹೇಳಲಾಗಿದೆ.

Leave a Comment