63 ನೇ ಕನ್ನಡ ರಾಜ್ಯೋತ್ಸವ: ಸಚಿವರಿಂದ ಧ್ವಜಾರೋಹಣ

 ಡಾ.ಸರೋಜಿನಿ ಮಹಿಷಿ ವರದಿ ಸರಕಾರ ಪರಿಶೀಲನೆ
ರಾಯಚೂರು.ನ.1- ಕನ್ನಡಿಗರಿಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸುವ ಕುರಿತು ರಚಿಸಿರುವ ಡಾ. ಸರೋಜಿನಿ ಮಹಿಷಿ ವರದಿ ಪರಿಷ್ಕೃತ ಕರಡು ಸರಕಾರ ಪರಿಶೀಲಿಸಲಿದೆ ಎಂದು ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಅವರಿಂದು ಸ್ಥಳೀಯ ಪೊಲೀಸ್ ಜಿಲ್ಲಾ ಪರೇಡ್ ಮೈದಾನದಲ್ಲಿ 63 ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಹಾಗೂ ಗೌರವ ವಂದನೆ ಸ್ವೀಕರಿಸಿ, ಮಾತನಾಡಿದ ಅವರು ಖಾಸಗಿ ಕ್ಷೇತ್ರಗಳಲ್ಲಿ 6 ಕೋಟಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ಡಾ.ಸರೋಜಿನಿ ಮಹಿಷಿ ವರದಿ ಪರಿಶೀಲಿಸಿ, ಜಾರಿಗೊಳಿಸಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು. ರಾಜ್ಯದ ಗಡಿ ಭಾಗಗಳಲ್ಲಿ ನೆಲೆಸಿರುವ ಜನರು ತಮ್ಮ ಮನೆ ಮಾತು ಬೇರೆಯಾದರೂ, ಕನ್ನಡವನ್ನು ಅಪ್ಪಿ, ಒಪ್ಪಿಕೊಂಡು ಜೀವಿಸುತ್ತಿರುವುದು ಹೆಮ್ಮೆಯ ಸಂಗತಿ.
ಕನ್ನಡ ಭಾಷೆ ಅಭಿವೃದ್ಧಿಗೆ ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೆ. ಕನ್ನಡದಲ್ಲಿಯೇ ಎಲ್ಲಾ ಕಡತಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಈಗಾಗಲೇ ಸೂಚಿಸಿದ್ದಾರೆ. ರಾಜ್ಯ ಸರಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಮಾಧ್ಯಮದಲ್ಲಿ ವಿಧ್ಯಾಭ್ಯಾಸ ಮಾಡಿ, ಎಸ್ಎಸ್ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನಗದು ಮತ್ತು ಪ್ರಶಸ್ತಿ ನೀಡಲಾಗುತ್ತಿದೆ.
ಪ್ರತಿ ತಾಲೂಕಿನ ಮೂರು ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 9 ಸಾವಿರ, ತೃತಿಯ ಬಹುಮಾನ 8 ಸಾವಿರ ಹಾಗೂ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ, ಪಂಗಡದ ತಲಾ ಒಬ್ಬರಿಗೆ 10 ಸಾವಿರ ರೂ. ಬಹುಮಾನ ನೀಡಲಾಗುತ್ತಿದೆ. ರಾಜ್ಯದ ಗಡಿ ಭಾಗಗಳಾದ ಮಹಾರಾಷ್ಟ್ರ, ಗೋವಾ, ಕೇರಳಾ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕನ್ನದ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ ಎಂದರು.
ಹೊರ ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ 25 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಆಡಳಿತದಲ್ಲಿ ಕನ್ನಡ ಪದ ಬಳಸಲು ಅನುಕೂಲವಾಗುವ ನಿಟ್ಟಿನಲ್ಲಿ ಕನ್ನಡ ಪದಗಳ ಕಾಪರ್ಸ್ ನಿಗಂಟು ಕನ್ನಡ ಗಣಕ ಪರಿಷತ್‌ನಿಂದ ಸಿದ್ಧಪಡಿಸಲಾಗುತ್ತದೆ. ರಾಜ್ಯದ ನ್ಯಾಯಾಂಗ ಕಲಾಪವನ್ನು ಕನ್ನಡದಲ್ಲಿ ಪಾದಿಸುವ ನ್ಯಾಯಾಧೀಶರಿಗೆ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದರು.
ಗ‌ಡಿ ಭಾಗಗಳಲ್ಲಿ ಕನ್ನಡ ಪರ ಕಾರ್ಯಕ್ರಮ ಆಯೋಜಿಸಲು ಕನ್ನಡ ಭವನ ನಿರ್ಮಾಣಕ್ಕೆ ಹೋಬಳಿ ಮಟ್ಟಕ್ಕೆ 10 ಲಕ್ಷ ರೂ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ 15 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಕನ್ನಡ ಭಾಷೆಯು ಅತ್ಯಂತ ಪ್ರಾಚೀನವಾಗಿದ್ದು, 2 ಸಾವಿರ ವರ್ಷಗಳ ಇತಿಹಾಸವಿದೆ. ದೇಶದಲ್ಲಿಯೇ 8 ಜನ ಕನ್ನಡಿಗರಿಗೆ ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.
ಕನ್ನಡ ಸಾಹಿತ್ಯ, ಪಠ್ಯ ಪುಸ್ತಕಗಳಲ್ಲಿ ಡಿಜಿಟಲೀಕರಣಗೊಳಿಸಿ, ಇ-ಲೈಬ್ರರಿ, ಪುಸ್ತಕಗಳ ಪರಿಕಲ್ಪನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಸಾಮಾಜಿಕ ಜಾಲತಾಣಗಳಾದ ಯೂಟೂಬ್ ಸೇರಿದಂತೆ ಇತರ ವೆಬ್‌ಸೈಟ್‌ಗಳ ಮೂಲಕ ಅನಿವಾಸಿ ಕನ್ನಡಿಗರಿಗೆ ಕನ್ನಡ ಕಲಿಕೆ ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಆಕರ್ಷಕ ಪಥಸಂಚಲನ ಹಾಗೂ ವಿವಿಧ ಶಾಲಾ ಮಕ್ಕಳಿಂದ ಕನ್ನಡ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ, ನೆರೆದಿರುವ ಜನರ ಮನ ರಂಜಿಸಿದರು. ಜಿಲ್ಲಾಧಿಕಾರಿ ಬಿ.ಶರತ್, ಜಿಪಂ. ಸಿಇಓ ನಲೀನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಶಾಸಕರಾದ ಡಾ.ಶಿವರಾಜ ಪಾಟೀಲ್, ದದ್ದಲ ಬಸನಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಪಾಟೀಲ್, ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಸಹಾಯಕ ಆಯುಕ್ತೆ ಶಿಲ್ಪಾಶರ್ಮಾ, ಐಎ‌ಎಸ್ ಪ್ರೋಬೇಷನರಿ ಅಧಿಕಾರಿ, ಜಿ. ಪಂ.ಸದಸ್ಯರಾದ ಮಹಾಂತೇಶ ಪಾಟೀಲ್ ಅತ್ತನೂರು, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಖಾಸೀಂ ನಾಯಕ, ಜಯವಂತರಾವ್ ಪತಂಗೆ, ಶಿವಶಂಕರ ವಕೀಲರು ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment