6 ವರ್ಷದ ಮಕ್ಕಳಿಗೆ ಆನ್‍ಲೈನ್ ತರಗತಿ ಸಾಧ್ಯವಿಲ್ಲ

ಮೈಸೂರು, ಮೇ 29: ಆರು ವರ್ಷದ ಒಳಗಿನ ಮಕ್ಕಳವರೆಗೆ ಆನ್‍ಲೈನ್ ತರಗತಿ ನಡೆಸಲು ಸಾಧ್ಯವಿಲ್ಲ ಎಂದು ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಸಚಿವ ಸುರೇಶ್‍ ಕುಮಾರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂಗಿಗೆ ಮಾತನಾಡಿದ ಅವರು ಶೈಕ್ಷಣಿಕ ವರ್ಷದ ಆರಂಭದ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆನ್‍ಲೈನ್ ಮೂಲಕ 1 ರಿಂದ 7ನೇ ತರಗತಿವರೆಗೆ ಸಾಮಾಜಿಕ ಜಾಲತಾಣದಲ್ಲಿ ತರಗತಿ ನಡೆಸುವ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಶೇ. 90ರಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿಲ್ಲ. ಹಾಗಾಗಿ ಜೂನ್ 1ರ ನಂತರ ಕೇಂದ್ರದ ಮಾರ್ಗಸೂಚಿ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನೀಡುವ ಬಗ್ಗೆ ಕೆಲವೆಡೆ ವಿರೋಧ ವ್ಯಕ್ತವಾಗಿದೆ. ಆನ್‍ಲೈನ್‍ನಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಮಾನಸಿಕವಾಗಿ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ನಿಮ್ಹಾನ್ಸ್‍ನ ಹಿರಿಯ ವೈದ್ಯರು ತಮ್ಮ ಅಭಿಪ್ರಾಯ ನೀಡಿದ್ದಾರೆ. ಆದ್ದರಿಂದ ಆನ್‍ಲೈನ್ ಶಿಕ್ಷಣದ ಬಗ್ಗೆ ಯಾವುದೇ ದೃಢ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಬೆಂಗಳೂರಿನ ಮೇಲ್ಸೇತುವೆಗೆ ಸಾವರಕರ್ ಹೆಸರು ಇಡುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಾವರಕರ್ ಹೆಸರನ್ನಿಡಲು ಬಿಬಿಎಂಪಿಯು ಸಿದ್ಧವಿದೆ. ಸಾವರಕರ್ ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ಕೊಟ್ಟ ಮೇರು ವ್ಯಕ್ತಿ. ಅಂತಹ ವ್ಯಕ್ತಿಯ ಬಗ್ಗೆ ಸರಿಯಾಗಿ ಅರ್ಥೈಸಿಕೊಳ್ಳದೆ ವಿರೋಧ ಪಕ್ಷದವರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸುವುದು ಸರಿಯಲ್ಲ ಎಂದು ತಿಳಿಸಿದರು.
ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಜೊತೆಗೆ ಅಂತಹ ಸಭೆ ನಡೆದಿದೆ ಎಂದು ನನಗನಿಸುವುದಿಲ್ಲ. ಈಗ ಏನಿದ್ದರೂ ಕೊರೊನಾ ವಿರುದ್ಧದ ಹೋರಾಟವೇ ಹೊರತು, ರಾಜಕೀಯ ವಿಷಯದ ಬಗ್ಗೆ ಚರ್ಚಿಸುವುದಲ್ಲ. ನಮಗೆ ಕೊರೊನಾ ನಿಭಾಯಿಸಲು ಸಮಯವಿಲ್ಲದಿರುವಾಗ ಪ್ರತ್ಯೇಕ ಸಭೆ ನಡೆಸುವುದು ಎಲ್ಲಂದ ಸಾಧ್ಯ ಎಂದು ಪ್ರಶ್ನಿಸಿದರು.
ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಪರಿಷತ್ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಅದಕ್ಕೂ ಮೊದಲೇ ಆಪರೇಶನ್ ಹಸ್ತ ಎಂಬ ವಿಚಾರ ಪ್ರಸ್ತಾಪವಾಗುತ್ತಿರುವುದು ಸತ್ಯಕ್ಕೆ ದೂರವಾದದ್ದು. ಇಲ್ಲಸಲ್ಲದ ವಿಚಾರಗಳ ಬಗ್ಗೆ ಟೀಕಿಸುವ ಬದಲು ಎಲ್ಲ ಪಕ್ಷದವರು ಕೊರೊನಾ ವಿರುದ್ಧದ ಹೋರಾಟದತ್ತ ಗಮನಹರಿಸಬೇಕಿದೆ ಎಂದು ಹೇಳಿದರು.

Share

Leave a Comment