59ನೇ ಟಿಬೇಟಿಯನ್ ಮಹಿಳಾ ಬಂಡಾಯ ದಿನದ ಪ್ರಯುಕ್ತ ಜಾಥಾ

ಮೈಸೂರು, ಮಾ.12- 59ನೇ ಟಿಬೇಟಿಯನ್ ಮಹಿಳಾ ಬಂಡಾಯ ದಿನದ ಪ್ರಯುಕ್ತ ಪ್ರಾಂತೀಯ ಟಿಬೇಟಿಯನ್ ಮಹಿಳಾ ಸಂಘಟನೆ ಬೈಲುಕುಪ್ಪೆ, ಹುಣಸೂರು ಹಾಗೂ ಕೊಳ್ಳೇಗಾಲ ವತಿಯಿಂದ ಟಿಬೇಟಿಯನ್ ಮಹಿಳೆಯರು ಜಾಥಾ ನಡೆಸಿದರು.
ಮೈಸೂರಿನಲ್ಲಿ ನಡೆದ ಜಾಥಾದಲ್ಲಿ ಪಾಲ್ಗೊಂಡ ಟಿಬೇಟಿಯನ್ ಮಹಿಳೆಯರು ಮಾತನಾಡಿ ಚೀನಿಯರು ಟೀಬೇಟನ್ನು ಅಕ್ರಮವಾಗಿ ಆಕ್ರಮಿಸಿದಾಗಿನಿಂದ ಅಸಂಖ್ಯಾತ ವೀರ ಟಿಬೇಟಿಯನ್ನರನ್ನು ಕಳೆದುಕೊಂಡಿದೆ. ಟಿಬೇಟಿಯನ್ ದಬ್ಬಾಳಿಕೆಯ ವಿರುದ್ಧ ಧ್ವನಿಯೆತ್ತಿದ ಪರಿಣಾಮ ಇದುವರೆಗೂ ಮಹಿಳೆಯರನ್ನು ಒಳಗೊಂಡಂತೆ 152 ವೀರ ಟಿಬೇಟಿಯನ್ನರು ಸ್ವಯಂ ಆತ್ಮಾಹುತಿ ಮಾಡಿಕೊಂಡಿದ್ದಾರೆ. ನಾಡಿಗಾಗಿ ಜನ್ಮ ಕಳೆದುಕೊಂಡ ಇಂತಹ ವೀರ ಟಿಬೇಟಿಯನ್ನರ ಆತ್ಮಕ್ಕೆ ಗೌರವ ಅರ್ಪಸುತ್ತೇವೆ ಎಂದರು. ಅಷ್ಟೇ ಅಲ್ಲದೇ ವಿಶ್ವಸಂಸ್ಥೆಯು ಟಿಬೇಟಿಯನ್ ಜ್ವಲಂತ ರಾಜಕೀಯ ಸಮಸ್ಯೆಗಳ ಕುರಿತು ಚರ್ಚಿಸಲು ದಲಾಯಿ ಲಾಮಾರವರ ಪ್ರತಿನಿಧಿಗಳೊಂದಿಗೆ ಸೂಕ್ತ ಮಾತುಕತೆ ನಡೆಸಬೇಕು ಎಂದು ಝಿ.ಜಿನ್ ಪಿಂಗ್ ರನ್ನು ಒತ್ತಾಯಿಸಿದರು. ಟಿಬೇಟಿಯನ್ನರು ತಮ್ಮ ನಾಡಿಗಾಗಿ ಆತ್ಮಾಹುತಿ ಮಾಡಿಕೊಳ್ಳುವುದನ್ನು ತಪ್ಪಿಸಲು ಚೀನಾ ಆಡಳಿತ ಸ್ಪಂದಿಸಬೇಕು. 11ನೇ ಪಂಚನ್ ಲಾಮಾರನ್ನು ಬಿಡುಗಡೆ ಮಾಡಲು ವಿಶ್ವಸಂಸ್ಥೆ ಸಮಿತಿ ಮುಂದಾಗಬೇಕು. ಟಿಬೇಟಿಯನ್ನರ ಬೌದ್ಧ ಬೃಹತ್ ಸಂಸ್ಥೆ ಲಾರಂಗ್ ಗರಂಡ್ ಯಾಚೆನ್ ಗರ್ ಧ್ವಂಸವನ್ನು ತಡೆಗಟ್ಟಬೇಕು. ಅಧ್ಯಕ್ಷ ಝಿ.ಜಿನ್ ಪಿಂಗ್ ಟಿಬೇಟಿಯನ್ನರ ಮಾನವ ಹಕ್ಕು ಹಾಗೂ ಮಾಧ್ಯಮ ಹಕ್ಕುಗಳನ್ನು ಗೌರವಿಸಬೇಕೆಂದು ಒತ್ತಾಯಿಸಿದರು.
ಜಾಥಾದಲ್ಲಿ ನೂರಕ್ಕೂ ಅಧಿಕ ಟಿಬೇಟಿಯನ್ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು.

Leave a Comment