55 ದಿನ ವೇತನ ಹೆಚ್ಚಳ ಮುಷ್ಕರ ಯಶಸ್ವಿ

ದಿ.18 ತುಂಗಭದ್ರ ಕಾರ್ಮಿಕರ ವಿಜಯೋತ್ಸವ
ರಾಯಚೂರು.ಸೆ.13- ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕರು ಕನಿಷ್ಟ ವೇತನ ಪಾವತಿಸಬೇಕೆಂದು ಆಗ್ರಹಿಸಿ ಕಳೆದ 55 ದಿನಗಳ ಕಾಲ ಯಶಸ್ವಿಯಾಗಿ ಮುಷ್ಕರ ನಡೆಸಿದ ಫಲವಾಗಿ ಸರ್ಕಾರ ವೇತನ ಹೆಚ್ಚಳ ಆದೇಶ ಹೊರಡಿಸಿರುವುದರಿಂದ ದಿ.18 ರಂದು ತುಂಗಭದ್ರ ಕಾರ್ಮಿಕರ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆಂದು ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರ ನೀರಾವರಿ ಕಾರ್ಮಿಕರು ಕಳೆದ ಅನೇಕ ವರ್ಷಗಳಿಂದ ಬಿಡಿಗಾಸಿನಲ್ಲಿ ದುಡಿಯುತ್ತಿರುವುದರಿಂದ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸಬೇಕೆಂದು ಆಗ್ರಹಿಸಿ ಮಾರ್ಚ್ 13 ರಿಂದ ಮೇ 12 ರವರೆಗೆ ಸ್ಥಳೀಯ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ 55 ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ನೀರಾವರಿ ಕಾರ್ಮಿಕರು ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 9.6 ಲಕ್ಷ ಎಕರೆ ಭೂಮಿಗೆ ನೀರು ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಕನಿಷ್ಟ ವೇತನ ಪಾವತಿಸದೆ ವಂಚಿಸುತ್ತಿರುವುದನ್ನು ಸಂಘ ಗಂಭೀರವಾಗಿ ಪರಿಗಣಿಸಿ 55 ದಿನಗಳ ಕಾಲ ಕೆಲಸದಿಂದ ಕಾರ್ಮಿಕರು ದೂರ ಉಳಿದು ಪ್ರತಿಭಟನೆಗಿಳಿದು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಯಿತು.
ತುಂಗಭದ್ರ ನೀರಾವರಿ ಕಾರ್ಮಿಕರಿಗೆ ಕನಿಷ್ಟ ವೇತನ ಪಾವತಿಸುವುದು ಅಸಾಧ್ಯವಾದದ್ದು. ಶೀಘ್ರ ಕಾರ್ಮಿಕರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಮರಳಿದಿದ್ದಲ್ಲಿ ವಜಾಗೊಳಿಸಬೇಕಾಗುತ್ತದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೂ, ಜಿಲ್ಲಾಧಿಕಾರಿಗಳ ಆದೇಶ ಧಿಕ್ಕರಿಸಿ ಹೋರಾಟ ಮುಂದುವರೆಸಲಾಗಿತ್ತು. ಹಂಗಾಮಿ ಕಾರ್ಮಿಕರ ಕನಿಷ್ಟ ವೇತನ ಪಾವತಿಗೆ ಒತ್ತಾಯಿಸಿ 19 ದಿನ ಧರಣಿ, ಹೆದ್ದಾರಿ ತಡೆ ಚಳುವಳಿ ಹಾಗೂ ಕಚೇರಿ ಮುತ್ತಿಗೆ ಸೇರಿ ಉಗ್ರ ಹೋರಾಟ ನಡೆಸಲಾಯಿತು.
ತುಂಗಭದ್ರದಿಂದ ಬೆಂಗಳೂರಿನವರೆಗೆ 8 ದಿನಗಳ ಕಾಲ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಜಾಥವೂ ಬೆಂಗಳೂರು ತಲುಪುವ ಮುನ್ನವೇ ತುಮಕೂರಿನಲ್ಲಿ ಸರ್ಕಾರ ಪೊಲೀಸ್ ಬಲ ಪ್ರಯೋಗಿಸಿ ಹೋರಾಟವನ್ನು ದಮನ ಮಾಡಿ ಕಾರ್ಮಿಕರನ್ನು ಬಂಧಿಸಲಾಗಿತ್ತು. ಆದಾಗ್ಯೂ ಹೋರಾಟವನ್ನು ಕೈಬಿಡದೆ ಮುಂದುವರೆಸಿದ ಫಲವಾಗಿ ಸರ್ಕಾರ ಮೇ.12 ರಂದು ತುಂಗಭದ್ರ ಮುಖ್ಯ ಇಂಜಿನಿಯರ್ ಧರಣಿ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ವೇತನ ಹೆಚ್ಚಳ ಆದೇಶ ಪತ್ರ ನೀಡಿದ ಫಲವಾಗಿ 1,934 ಕಾರ್ಮಿಕರಿಗೆ ಪ್ರತಿ ತಿಂಗಳು 5 ಸಾವಿರ ರೂ.ದಿಂದ 7 ಸಾವಿರರೂ.ವರೆಗೆ ವೇತನ ಹೆಚ್ಚಳಗೊಂಡಿದೆ.
55 ದಿನಗಳ ಕಾಲ ಮುಷ್ಕರದಲ್ಲಿ ನಿರತರಾಗಿದ್ದ ಕಾರ್ಮಿಕರು ವೇತನ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆಂದರು. ತುಂಗಭದ್ರ ಕಾರ್ಮಿಕರ ವಿಜಯೋತ್ಸವವನ್ನು ಸಿಪಿಐ (ಎಂಎಲ್) ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ 1.30 ರಿಂದ ಟಿಪ್ಪು ಸುಲ್ತಾನ ಉದ್ಯಾನವನದಿಂದ ಆರಂಭಗೊಂಡ ಮೆರವಣಿಗೆ ನಗರದ ವಿವಿಧ ಪ್ರಮುಖಗಳಲ್ಲಿ ಸಂಚರಿಸಿ ರಂಗಮಂದಿರಕ್ಕೆ ತಲುಪಲಿದೆ. ಈ ವಿಜಯೋತ್ಸವದಲ್ಲಿ ಕನಿಷ್ಟ ವೇತನ ಪಾವತಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲರಾಗುತ್ತಿರುವ ಕುರಿತು ಚರ್ಚೆ ನಡೆಯಲಿದೆಂದರು. ಈ ಸಂಬಂಧ ಎಲ್ಲಾ ಕಾರ್ಮಿಕ ಮುಖಂಡರು, ಪ್ರಗತಿಪರ ಸಂಘಟನೆಗಾರರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಜಿ.ಅಡವಿರಾವ್, ಜಿ.ಅಮರೇಶ, ಸಿದ್ದಪ್ಪಗೌಡ, ಅಮರೇಶಗೌಡ ಉಪಸ್ಥಿತರಿದ್ದರು.

Leave a Comment