500 ಮನೆಗಳ ನಿರ್ಮಾಣಕ್ಕೆ ಖರ್ಗೆ ಶಂಕುಸ್ಥಾಪನೆ

(ನಮ್ಮ ಪ್ರತಿನಿಧಿಯಿಂದ)

ಕಲಬುರಗಿ,ಸೆ.11-ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಪ್ರಧಾನಮಂತ್ರಿ ಆವಾಸ್ (ಸರ್ವರಿಗೂ ಸೂರು) ಯೋಜನೆಯಡಿಯಲ್ಲಿ ನಗರದ ಕಪನೂರ ಮತ್ತು ತಾರಫೈಲ್ ಕೊಳಗೇರಿ ಪ್ರದೇಶಗಳಲ್ಲಿ 24.90 ಕೋಟಿ ರೂಪಾಯಿ ವೆಚ್ಚದಲ್ಲಿ  500 ಮನೆಗಳ ನಿರ್ಮಾಣಕ್ಕೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಶಂಕು ಸ್ಥಾಪನೆ ನೆರವೇರಿಸಿದರು.

ನಗರದ ಕಪನೂರ ಸಮುದಾಯ ಭವನ ಮತ್ತು ತಾರಫೈಲ್ ಬಡಾವಣೆಯಲ್ಲಿಂದು ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕಪನೂರ ಕೊಳಗೇರಿ ಪ್ರದೇಶದಲ್ಲಿ 7.47 ಕೋಟಿ ರೂಪಾಯಿ ವೆಚ್ಚದಲ್ಲಿ 150 ಮನೆ ಮತ್ತು ತಾರಫೈಲ್ ಬಡಾವಣೆಯಲ್ಲಿ 17.43 ಕೋಟಿ ರೂಪಾಯಿ ವೆಚ್ಚದಲ್ಲಿ 350 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಮನೆಗಳ ನಿರ್ಮಾಣ ಕಾಮಗಾರಿ  18 ತಿಂಗಳ ಒಳಗಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಒಂದು ಮನೆ ನಿರ್ಮಾಣಕ್ಕೆ 4.98 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದು ಪ್ರಧಾನಮಂತ್ರಿ ಆವಾಸ್ ಯೋಜನೆಯಾಗಿದ್ದರೂ ರಾಜ್ಯ ಸರ್ಕಾರ ಒಂದು ಮನೆ ನಿರ್ಮಾಣಕ್ಕೆ 1.20 ಲಕ್ಷ ರೂಪಾಯಿ ನೀಡುತ್ತದೆ ಎಂದು ಹೇಳಿದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮನೆಗಳನ್ನು ಸರಿಯಾದ ರೀತಿಯಲ್ಲಿ ನಿರ್ಮಾಣ ಮಾಡಬೇಕು, ಕಳಪೆ ಗುಣಮಟ್ಟದ ಮನೆಗಳು ನಿರ್ಮಾಣವಾಗದಂತೆ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.

ದೇಶದಲ್ಲಿ ಸೂರು ಇಲ್ಲದವರು ಕೋಟ್ಯಾಂತರ ಜನರಿದ್ದಾರೆ. ಆದರೆ ರಾಜ್ಯದಲ್ಲಿ ಸೂರು ಇಲ್ಲದವರಿಗೆ ಸೂರು ಕಲ್ಪಿಸಲು 1972ರಲ್ಲಿ ಡಿ.ದೇವರಾಜ ಅರಸು ಅವರ ಕಾಲದಲ್ಲಿಯೇ ಪೀಪಲ್ಸ್ ಹೌಸಿಂಗ್ ಸ್ಕೀಮ್ ಜಾರಿಗೆ ತಂದು ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ಯೋಜನೆ ಜಾರಿ ಮಾಡಲಾಗಿತ್ತು. ಮುಂದೆ ಜನತಾ ಹೌಸಿಂಗ್ ಸ್ಕೀಮ್, ರಾಜೀವ್ ಆವಾಸ್ ಯೋಜನೆ, ಇಂದಿರಾ ಆವಾಸ್ ಯೋಜನೆ ಈಗ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸೂರು ಇಲ್ಲದವರಿಗೆ ಸೂರು ಕಲ್ಪಿಸಲಾಗುತ್ತಿದೆ ಎಂದರು.

ಸಂಘಾನಂದ ಭಂತೇಜಿ ಅವರು ಸಮಾರಂಭದ ಸಾನಿಧ್ಯವಹಿಸಿದ್ದರು. ಜಿಲ್ಲಾ ಉಸ್ತುವಾರಿ ಮತ್ತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕಿ ಕನೀಜ್ ಫಾತಿಮಾ, ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಅಭಿಯಂತರ ಎಂ.ಎ.ಖಯ್ಯೂಮ್, ಸಹಾಯಕ ಕಾರ್ಯಪಾಲಕ ಅಭಿಯಂತರ ಅರುಣಕುಮಾರ ಮಹಾಶೆಟ್ಟಿ, ಪಾಲಿಕೆ ಸದಸ್ಯರಾದ ರಾಜು ಕಪನೂರ, ಲಕ್ಷ್ಮೀ ಬಸವರಾಜ ಖಂಡು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಕಾಂಗ್ರೆಸ್ ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರ, ಭಾಗಣ್ಣಗೌಡ ಪಾಟೀಲ ಸಂಕನೂರ, ಅಲ್ಲಮಪ್ರಭು ಪಾಟೀಲ, ಬಸವರಾಜ ಭೀಮಳ್ಳಿ, ಜಿ.ಪಂ.ಸದಸ್ಯ ರಾಜೇಶ ಗುತ್ತೇದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Comment