50 ಸಾವಿರ ಬಡವರಿಗೆ ಆಹಾರ ಧಾನ್ಯದ ಕಿಟ್ ತಲುಪಿಸುವ ಗುರಿ : ಚಿಂಚೋರೆ

ಧಾರವಾಡ ಮೇ.24-: ನಗರದ ಸೈದಾಪುರ, ಕೊಪ್ಪದಕೇರಿ, ಗೊಲ್ಲರ ಕಾಲನಿ, ಮೆಹಬೂಬ ನಗರ, ಮಾಳಾಪುರ, ಬಾರಾ ಇಮಾಮ್ ಗಲ್ಲಿ,ಚುರಮುರಿ ಬಟ್ಟಿ, ಮದಿಹಾಳ, ಮಣಕಿಲ್ಲಾ, ರೋಣದಪುರ ಮಸೀದ ಬಡಾವಣೆ, ತೇಜಸ್ವಿನಗರ ಸೇರಿದಂತೆ ಧಾರವಾಡದ ವಿವಿಧ ಬಡಾವಣೆಗಳ ಸುಮಾರು 25 ಸಾವಿರಕ್ಕೂ ಅಧಿಕ ಬಡಜನರಿಗೆ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಅವರು ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯವನ್ನು ಯಾವುದೇ ಸದ್ದಿಲ್ಲದೆ ಮಾಡುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ  ತಮ್ಮ ಮನೆ ಬಾಗಿಲಿಗೆ ಪ್ರತಿನಿತ್ಯ ಬರುವ ಸಾವಿರಾರು ಜನರಿಗೆ ಅಕ್ಕಿ, ತೋಗರಿ ಬೆಳೆ, ಸಕ್ಕರೆ, ಎಣ್ಣೆ ಹಾಗೂ ಶ್ಯಾವಿಗೆ ಇರುವ ಕಿಟ್ ವಿತರಿಸಲಾಗುತ್ತಿದ್ದು, ಕರೋನಾ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಕೂಲಿ ಕಾರ್ಮಿಕರು, ಆಟೋ ರೀಕ್ಷಾ ಚಾಲಕರು, ಮನೆ ಕೆಲಸದವರು, ಮೇಕ್ಯಾನಿಕ್, ಗೌಂಡಿಗಳು ಹೀಗೆ ವಿವಿಧ ಸ್ತರದ ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಬಡವರು ಅದನ್ನು ಸರದಿ ಸಾಲಿನಲ್ಲಿ ನಿಂತು ಪಡೆದುಕೊಳ್ಳುತ್ತಿದ್ದಾರೆ.
ಈ ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯ ಇನ್ನೂ ಹಲವು ದಿನಗಳ ಕಾಲ ಮುಂದುವರೆಯಲಿದ್ದು ಈಗಾಗಲೇ 25 ಸಾವಿರ ಜನರಿಗೆ ತಲುಪಿದೆ. ಇನ್ನೂ 25 ಸಾವಿರ ಜನರಿಗೆ  ವಿತರಣೆ ಮಾಡಲಾಗುವುದು. ಕನಿಷ್ಟ 50 ಸಾವಿರ ಜನರಿಗೆ ಸಹಾಯ ಹಸ್ತ ಚಾಚಬೇಕೆನ್ನುವ ಮಹತ್ವಾಂಕ್ಷೆ ಇಟ್ಟುಕೊಂಡಿದ್ದೇವೆ. ಆ ಮೂಲಕ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ತಿಳಿಸಿದರು.ಕಳೆದ ಎರಡು ತಿಂಗಳಿಂದ ಬಡ ಜನತೆ ಲಾಕ್ ಡೌನ್ ನಿಂದಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವರ ಕಣ್ಣೀರು ಒರೆಸುವ ಸದುದ್ದೇಶದಿಂದ ಈ ಕಾರ್ಯ ಮಾಡಲಾಗುತ್ತಿದೆ. ಅವರೊಂದಿಗೆ ನಾವಿದ್ದೇವೆ ಎಂಬ ಸಮಾಧಾನ, ಧೈರ್ಯ ತುಂಬುತ್ತಿದ್ದೇವೆ ಎಂದು ವಿವರಿಸಿದರು.
ಹಿಂದು-ಮುಸ್ಲಿಂ, ಕ್ರಿಶ್ಚಿಯನ್ ಎನ್ನದೆ ಎಲ್ಲಾ ಸಮಾಜದಲ್ಲಿರುವ ಬಡವರಿಗೆ ಆಹಾರ ಕಿಟ್ ವಿತರಿಸಿ ಕೋಮು ಸೌಹಾರ್ದತೆ ಸಾರಲಾಗಿದೆ.  ಆ ಮೂಲಕ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ  ಮೂಡಿಸಿ, ಆ ಮೂಲಕ ಮಹಾಮಾರಿ ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಒಂದಾಗಿ  ಏಕತೆಯನ್ನು ಸಾಧಿಸುತ್ತಿದ್ದೇವೆ  ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ತಿಳಿಸಿದರು.

Share

Leave a Comment