5 ಲಕ್ಷ ಸಸಿ ನೆಡುವ ಪೊಲೀಸ್ ಕಾಳಜಿ ಮಾದರಿ

ಸಂರಕ್ಷಣೆ – ಸಾಮಾಜಿಕ ಅರಣ್ಯಾಧಿಕಾರಿಗಳ ಇಲಾಖೆ ನಿರ್ಲಕ್ಷ್ಯ
ರಾಯಚೂರು.ಜ.28- ದಿನನಿತ್ಯ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಹಾಗೂ ಇನ್ನಿತರ ಬಂದೋಬಸ್ತ್ ಕೆಲಸ ಕಾರ್ಯದ ಮಧ್ಯೆ ನಗರದಲ್ಲಿ ಹಸಿರು ಪರಿಸರ ರಕ್ಷಣೆ ಮತ್ತು ಅಭಿವೃದ್ಧಿಗೆ ಪೊಲೀಸ್ ಇಲಾಖೆ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿದೆ. ವಿವಿಧ ಸಂಘ ಸಂಸ್ಥೆಗಳೊಂದಿಗೆ ನಗರದ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆ ವಿರುದ್ಧ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಈಗ ಮುಂದಿನ ಅವಧಿಗೆ ಜಿಲ್ಲೆಯಾದ್ಯಂತ 5 ಲಕ್ಷ ಸಸಿ ನೆಡುವ ಮೂಲಕ ಬಿಸಿಲು ನಾಡಿನಲ್ಲಿ ಹಸಿರು ಮೂಡಿಸುವ ಸಂಕಲ್ಪಕ್ಕೆ ಮುಂದಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಾ.ಸಿ.ಬಿ.ವೇದಮೂರ್ತಿ ಅವರು, ಪೊಲೀಸ್ ಕಾನೂನು ಸಂರಕ್ಷಣೆಯೊಂದಿಗೆ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು.
ಬೇಸಿಗೆ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಸಿರು ಪರಿಸರ ವಿಸ್ತರಿಸುವ ಆಂದೋಲನವನ್ನು ಕೈಗೆತ್ತಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಇಲ್ಲಿವರೆಗೂ ಪೊಲೀಸ್ ಎಂದರೇ, ಕೇವಲ ಕಾನೂನು ಸಂರಕ್ಷಣೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಪರಿಸರ ರಕ್ಷಣೆಗೂ ಮುಂದಾಗಿರುವುದು ವಿಶೇಷವಾಗಿದೆ. ಈಗಾಗಲೇ ಪೊಲೀಸ್ ಇಲಾಖೆ 5 ಲಕ್ಷ ಸಸಿ ನೆಡುವ ಕಾರ್ಯಕ್ಕೆ ಪೂರ್ವವಾಗಿ ಸಸಿ ಸಿದ್ಧಗೊಳಿಸುವ ಕಾರ್ಯದಲ್ಲಿ ತೊಡಗಿದೆ.
ನಗರಸಭೆ ಸಂಯೋಜನೆಯೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಸಾರ್ವಜನಿಕರು ಒಳ್ಳೊಣ್ಣೆ ಮತ್ತು ಹಾಲಿನ ಪಾಕೇಟ್ ಬಳಸಿಕೊಂಡು ಸಸಿ ಸಿದ್ಧಪಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ತ್ಯಾಜ್ಯ ರೂಪದಲ್ಲಿ ಎಸೆಯುವ ಅಧಿಕೃತ ಬಳಕೆ ಈ ಪ್ಲಾಸ್ಟಿಕ್‌ಗಳನ್ನು ಸಸಿ ಸಂಸ್ಕರಣಕ್ಕೆ ಉಪಯೋಗಿಸಲಾಗುತ್ತಿದೆ. ಈಗಾಗಲೇ ಅಸಂಖ್ಯಾತ ಸಸಿ ಸಿದ್ಧಪಡಿಸಿ ಇರಿಸಲಾಗಿದೆ.
ಜಿಲ್ಲಾ ಪೊಲೀಸ್ ಇಲಾಖೆ ಈ ಕಾರ್ಯಕ್ಕೆ ಜಿಲ್ಲೆಯ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಗೊಂಡಿದೆ. ಪರಿಸರ ಪ್ರೇಮಿಗಳು ಪೊಲೀಸರ ಈ ಕಾಳಜಿಯನ್ನು ಶ್ಲಾಘಿಸಿದ್ದಾರೆ. ಜಿಲ್ಲೆಯಲ್ಲಿ ಕೇವಲ ಶೇ.4 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಜಿಲ್ಲೆಯಲ್ಲಿ ಅರಣ್ಯ ವಿಸ್ತರಣೆ ಮತ್ತು ಅಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕಾದ ಅರಣ್ಯ ಸಂರಕ್ಷಣಾ ಮತ್ತು ಸಾಮಾಜಿಕ ಅರಣ್ಯ ಇಲಾಖೆಗಳು ಈ ಬಗ್ಗೆ ಯಾವುದೇ ಸಮರ್ಪಕ ಕಾಳಜಿ ವಹಿಸದ ಕಾರಣ ಜಿಲ್ಲೆ ಬಿಸಿಲ ನಾಡು ಎನ್ನುವ ಖ್ಯಾತಿ ಹೊಂದಿದೆ.
ಕೋಟ್ಯಾಂತರ ರೂ. ಅನುದಾನ ಬಿಡುಗಡೆಗೊಂಡರೂ ಇದನ್ನು ಸಮರ್ಪಕವಾಗಿ ಬಳಸದೇ, ದುರುಪಯೋಗ ಪಡೆಸಿಕೊಳ್ಳುತ್ತಿರುವ ಇಲಾಖಾಧಿಕಾರಿಗಳು ಪೊಲೀಸ್ ಇಲಾಖೆಯ ಈ ಸಾಮಾಜಿಕ ಕಳಕಳಿಯಿಂದ ಪ್ರೇರಣೆ ಹೊಂದಿ, ಅರಣ್ಯ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಿ, ಕಾರ್ಯ ನಿರ್ವಹಿಸುವವೇ?

Leave a Comment