5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಸಾಂಸ್ಕೃತಿಕ ನಗರಿ ಮೈಸೂರು ಸಜ್ಜು
ಮೈಸೂರು. ಜೂ.19: ಜಿಲ್ಲಾಡಳಿತ ಮೈಸೂರು, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಮುಡಾ, ಮೈಸೂರು ನಗರ ಪೊಲೀಸ್ ಯೋಗ ಫೆಡರೇಷನ್ ಆಫ್ ಮೈಸೂರು ಸಂಯುಕ್ತಾಶ್ರಯದಲ್ಲಿ ಜೂ.21 ರಂದು ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬಹುದೊಡ್ಡಮಟ್ಟದಲ್ಲಿ ಮೈಸೂರು ರೇಸ್ ಕೋರ್ಸ್ – ಗಾಲ್ಫ್ ಕ್ಲಬ್ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು ಈ ಹಿನ್ನಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಸಕಲ ರೀತಿಯಲ್ಲೂ ಸಜ್ಜು ಗೊಂಡಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಅವರಿಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಯೋಗದಿನದ ಕುರಿತು ಮಾಹಿತಿ ನೀಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀನಿರ್ಮಲಾನಂದ ಸ್ವಾಮೀಜಿ, ಶ್ರೀಗಣಪತಿಸಚ್ಚಿದಾನಂದ ಸ್ವಾಮೀಜಿ, ರೆ.ಡಾ.ಕೆ.ಎ.ವಿಲಿಯಂ, ಬಿಷಪ್ ಮತ್ತು ಸರ್ ಖಾಜಿ ಜನಾಬ್ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಬ್ ರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಯೋಗದಿನಾಚರಣೆಗೆ ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಯೋಗಪಟುಗಳು ಸೇರುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಮೈಸೂರು, ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕಾರ್ಯಕ್ರಮದ ಆಯೋಜನೆಗಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 60ಲಕ್ಷ, ಆಯುಷ್ ಇಲಾಖೆಯಿಂದ 2 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಿದ್ದು, ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮದ ವತಿಯಿಂದ 15 ಲಕ್ಷಗಳನ್ನು ಪ್ರಾಯೋಜಕತ್ವದ ಮೊತ್ತವಾಗಿ ಜಿಲ್ಲಾಡಳಿತಕ್ಕೆ ನೀಡಿರುತ್ತಾರೆ ಎಂದು ತಿಳಿಸಿದರು.
ಬೆಳಿಗ್ಗೆ 5 ಗಂಟೆಯಿಂದಲೇ ನಗರದ ಎಲ್ಲಾ ವಿವಿಧ ಭಾಗಗಳಿಂದ ಮೈಸೂರು ನಗರ ಸಾರಿಗೆ ಬಸ್ ಗಳು ರೇಸ್ ಕೋರ್ಸ್ ಗೆ ಯೋಗಪಟುಗಳನ್ನು ಶುಲ್ಕ ಸಹಿತವಾಗಿ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ರೇಸ್ ಕೋರ್ಸ್ ಗೆ ಒಟ್ಟು 6 ಗೇಟ್ ಗಳಿದ್ದು, ಗೇಟ್ ನಂಬರ್ 1 ರಿಂದ 5 ಗೇಟ್ ಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ಹಾಗೂ ಗೇಟ್ ನಂಬರ್ 6 ನ್ನು ವಿಐಪಿ ಗಳ ಪ್ರವೇಶಕ್ಕೆ ನಿಗದಿಪಡಿಸಲಾಗಿದೆ. ಯೋಗಪಟುಗಳು ಶ್ವೇತವಸ್ತ್ರಧಾರಿಗಳಾಗಿ ಆಗಮಿಸಬೇಕು. ಕಡ್ಡಾಯವಾಗಿ ಯೋಗ ಮ್ಯಾಟ್ ತರಬೇಕು. ಪೊಲೀಸ್ ಇಲಾಖೆ ನಿಗದಿಪಡಿಸಿದ ವಾಹನ ನಿಲ್ದಾಣದಲ್ಲಿಯೇ ವಾಹನ ನಿಲ್ಲಿಸಿ ಬೆಳಿಗ್ಗೆ 6ಗಂಟೆಯ ಒಳಗಾಗಿ ಮೈದಾನಕ್ಕೆ ಆಗಮಿಸಿ ಆಸೀನರಾಗಬೇಕು. ತಮ್ಮ ಪಾದರಕ್ಷೆಗಳನ್ನು ಇರಿಸಲು ಚಿಕ್ಕ ಕೈಚೀಲ ತರಬೇಕು. ಯೋಗತರಬೇತುದಾರರು ನೀಡುವ ಸೂಚನೆಗಳನ್ವಯ ಯೋಗಾಭ್ಯಾಸ ಮಾಡಬೇಕು. ಮೈದಾನದಲ್ಲಿ ಶಾಂತತೆ ಹಾಗೂ ಸಂಯಮದಿಂದ ವರ್ತಿಸಿ, ಸ್ವಚ್ಛತೆ ಕಾಪಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆ.ಜ್ಯೋತಿ, ಪಾಲಿಕೆಯ ಆಯುಕ್ತೆ ಶಿಲ್ಪನಾಗ್ ಪೊಲೀಸ್ ಅಧಿಕಾರಿಗಳು, ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment