42.6 ಡಿ.ಸೆ.ಉಷ್ಣಾಂಶ  ಕಾದು ಕೆಂಡವಾದ ಕಲಬುರಗಿ

 

ಕಲಬುರಗಿ,ಮೇ.22-ಬಿಸಿಲೂರು ಎಂದೇ ಖ್ಯಾತಿ ಪಡೆದ ಕಲಬುರಗಿ ಈಗ ಅಕ್ಷರಶ: ಕಾದ ಕೆಂಡವಾದಂತಾಗಿದೆ. ಹವಮಾನ ಇಲಾಖೆ ಮಾಹಿತಿ ಅನುಸಾರ ಗುರುವಾರ ಜಿಲ್ಲೆಯಲ್ಲಿ 42.6 ದಾಖಲೆಯ ಉಷ್ಣಾಂಶ ದಾಖಲಾಗಿದ್ದು, ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಬಿಸಿಲ ತಾಪ 2.3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ರಾತ್ರಿ ತಾಪಮಾನದಲ್ಲಿಯೂ ಏರಿಕೆಯಾಗಿದ್ದು, ರಾತ್ರಿ ತಾಪಮಾನ 27.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸದರೆ 1.7 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ. ಹಗಲು ಬಿರುಬಿಸಿಲ ತಾಪ ಮತ್ತು ರಾತ್ರಿ ಧಗೆಯ ಕಾರಣಕ್ಕೆ ಜಿಲ್ಲೆಯ ಜನ ಬಸವಳಿದು ಹೋಗುವಂತಾಗಿದೆ. ಬೆಂಕಿಯಂತಹ ಬಿಸಿಲ ಕಾರಣಕ್ಕೆ ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಜನ ಹೆದರುತ್ತಿದ್ದು, ಸಾಯಂಕಾಲ ಬಿಸಿಲ ತಾಪಮಾನ ಸ್ವಲ್ಪ ಕಡಿಮೆಯಾದ ಮೇಲೆ ಮನೆಯಿಂದ ಹೊರಬರುವಂತಾಗಿದೆ. ಇನ್ನು ಹಗಲು ಮತ್ತು ರಾತ್ರಿ ಹೊತ್ತು ಎ.ಸಿ., ಏರ್ ಕೂಲರ್ ಮತ್ತು ಫ್ಯಾನ್ ಬಳಕೆ ಹೆಚ್ಚಾಗಿದೆ. ಕೊರೊನಾ ಭೀತಿಯಿಂದಾಗಿ ಜನ ಮಕ್ಕಳು ಸೇರಿದಂತೆ ದೊಡ್ಡವರು ಸಹ ಹೊರಗಡೆ ಓಡಾಡುವುದು ಕಡಿಮೆಯಾಗಿದ್ದು, ಮನೆಯೊಳಗಡೆ ಹೆಚ್ಚಿನ ಸಮಯ ಕಳೆಯುವಂತಾಗಿದೆ. ಜಿಲ್ಲೆಯಲ್ಲಿ ಮಾರ್ಚ್, ಏಪ್ರಿಲ್ ಮೇ ತಿಂಗಳಲ್ಲಿ ಬಿಸಿಲು ಏರಿಕೆಯಾಗುತ್ತಿದ್ದಂತೆಯೇ ಜನ ತಂಪು ಪಾನಿಯಗಳಿಗೆ ಮೊರೆ ಹೋಗುತ್ತಿದ್ದರು. ಎಲ್ಲೆಂದರಲ್ಲಿ ಕಲ್ಲಂಗಡಿ, ಎಳೆನೀರು, ಕಬ್ಬಿನ ಹಾಲು ಮತ್ತು ಜ್ಯೂಸ್ ಅಂಗಡಿಗಳು ತಲೆ ಎತ್ತುತ್ತಿದ್ದವು. ಆದರೆ ಈ ವರ್ಷ ಕೊರೊನಾ ಲಾಕ್ ಡೌನ್ ನಿಂದಾಗಿ ಜ್ಯೂಸ್ ಅಂಗಡಿಗಳು ಬಾಗಿಲು ಹಾಕಿವೆ. ಅಲ್ಲದೆ ಹಣ್ಣುಗಳ ಮಾರಾಟದ ಬೇಡಿಕೆಯೂ ಸಹ ಕುಸಿದಿದೆ. ಇದರಿಂದಾಗಿ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಇನ್ನು ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ 41.4, ಕನಿಷ್ಠ 27,4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಗರಿಷ್ಠ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 2.3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಬೀದರ್ ಜಿಲ್ಲೆಯಲ್ಲಿ ಗರಿಷ್ಠ 39.6, ಕನಿಷ್ಠ 23.4, ವಿಜಯಪುರ ಜಿಲ್ಲೆಯಲ್ಲಿ ಗರಿಷ್ಠ 39.5, ಕನಿಷ್ಠ 23.0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಕಾರವಾರದಲ್ಲಿ ಗರಿಷ್ಠ 35.0, ಕನಿಷ್ಠ 28.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 42.6 ಡಿಗ್ರಿ ಸೆಲ್ಸಿಯಸ್,  ಕಾರವಾರದಲ್ಲಿ ಕನಿಷ್ಠ ತಾಪಮಾನ 28.1 ‌ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Leave a Comment