4 ಶಾಸಕರ ಅನರ್ಹತೆಗೆ ಸಿದ್ದು ಮನವಿ

ಬೆಂಗಳೂರು, ಫೆ. ೧೧- ಕಾಂಗ್ರೆಸ್ ನಾಲ್ಕು ಮಂದಿ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಸಂಬಂಧ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಮನವಿ ಮಾಡಿರುವುದು ಮುಂದಿನ ರಾಜಕೀಯ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ವರದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಸ್ಪೀಕರ್ ಅವರನ್ನು ಭೇಟಿ ಮಾಡಿ ನಾಲ್ವರು ಶಾಸಕರ ಅನರ್ಹಗೊಳಿಸಲು ಮನವಿ ಮಾಡುವುದಾಗಿ ಹೇಳಿದ್ದರು.

ಅದರಂತೆ, ಇಂದು ಬೆಳಿಗ್ಗೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರನ್ನು ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿ.ಸಿ.ಎಂ. ಪರಮೇಶ್ವರ್ ಅವರೊಂದಿಗೆ ಭೇಟಿ ಮಾಡಿ ಶಾಸಕರ ಅನರ್ಹಗೊಳಿಸುವ ಸಂಬಂಧ ಚರ್ಚೆ ನಡೆಸಿದರು.

ಗೈರು ಹಾಜರಾಗಿದ್ದ ಶಾಸಕರುಗಳಾದ ರಮೇಶ್‌ಜಾರಕಿಹೊಳಿ, ಡಾ. ಉಮೇಶ್‌ಜಾಧವ್, ನಾಗೇಂದ್ರ ಮತ್ತು ಮಹೇಶ್ ಕಮಟಹಳ್ಳಿ ಇವರುಗಳನ್ನು ಅನರ್ಹಗೊಳಿಸುವ ಬಗ್ಗೆ ಮೂರು ದಿನಗಳ ಹಿಂದೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತಾದರೂ ದೂರು ನೀಡಲು ಕಾಂಗ್ರೆಸ್ ನಾಯಕರು ಮೀನಾಮೇಷ ಎಣಿಸಿದ್ದರು.

ಅತೃಪ್ತ ಶಾಸಕರನ್ನು ಅನರ್ಹಗೊಳಿಸಲು ಕಾಂಗ್ರೆಸ್ ನಾಯಕರು ಹಿಂದೇಟು ಹಾಕಿದ್ದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿತ್ತು. ಇದಕ್ಕೆಲ್ಲಾ ತೆರೆ ಎಳೆಯುವಂತೆ ಇಂದು ಅಧಿಕೃತವಾಗಿ ಸಭಾಧ್ಯಕ್ಷರಿಗೆ ದೂರು ನೀಡುವ ತೀರ್ಮಾನಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ.

ವಿಧಾನಸೌಧದಲ್ಲಿಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಲು ಸಮಯ ನೀಡುವಂತೆ ಮನವಿ ಮಾಡಿದರು. ಅದರಂತೆ ಇಂದು ಮಧ್ಯಾಹ್ನ ವಿಧಾನಸಭೆಯ ಕಲಾಪದ ಭೋಜನ ವಿರಾಮದ ವೇಳೆ ಬಂದು ಭೇಟಿ ಮಾಡುವಂತೆ ವಿಧಾನಸಭಾಧ್ಯಕ್ಷರು ಸಿದ್ಧರಾಮಯ್ಯ ಅವರಿಗೆ ಹೇಳಿದ್ದು, ಮಧ್ಯಾಹ್ನ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಸಿದ್ಧರಾಮಯ್ಯ ಅವರು ಸಭಾಧ್ಯಕ್ಷರಿಗೆ ಪತ್ರ ಬರೆಯುವರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಸಹ ಉಪಸ್ಥಿತರಿರುವರು ಎಂದು ಹೇಳಲಾಗಿದೆ.

 ಅನರ್ಹತೆ ಅಸ್ತ್ರ
ಬಿಜೆಪಿಯ ಆಮಿಷಗಳಿಗೆ ಒಳಗಾಗಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸಿರುವ ಕಾಂಗ್ರೆಸ್ ಶಾಸಕರಿಗೆ ಒಂದು ಸಂದೇಶ ರವಾನಿಸಲು ಈ ನಾಲ್ವರು ಅತೃಪ್ತ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಬಳಸಲು ತೀರ್ಮಾನಿಸಲಾಗಿದ್ದು ಈ ನಾಲ್ವರು ಶಾಸಕರನ್ನು ಅನರ್ಹಗೊಳಿಸಲು ಮುಂದಾದರೆ ಉಳಿದ ಶಾಸಕರು ಭಯಗೊಂಡು ಬಿಜೆಪಿಯ ಸೆಳೆತದಿಂದ ದೂರವಾಗುತ್ತಾರೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದಾಗಿದೆ. ಅದರಂತೆ ವಿಫ್ ಉಲ್ಲಂಘಿಸಿ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿರುವ ನಾಲ್ವರಿಗೆ ಅನರ್ಹತೆಯ ಅಸ್ತ್ರವನ್ನು ಕಾಂಗ್ರೆಸ್ ನಾಯಕರು ಪ್ರಯೋಗಿಸಿದ್ದಾರೆ.

ಮುಂಬೈನಲ್ಲೇ ಉಳಿದ ಅತೃಪ್ತರು
ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಲು ಸಿದ್ಧರಾಗಿದ್ದರು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅತೃಪ್ತ ಶಾಸಕರುಗಳಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಾ. ಉಮೇಶ್ ಜಾಧವ್, ನಾಗೇಂದ್ರ ಮತ್ತು ಮಹೇಶ್ ಕಮಟಹಳ್ಳಿ ಮುಂಬೈನಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ.

ಶಾಸಕತ್ವದ ಅನರ್ಹತೆಯಿಂದ ಪಾರಾಗಲು ಈ ನಾಲ್ವರು ಕಾಂಗ್ರೆಸ್ ನಾಯಕರು ಸಭಾಧ್ಯಕ್ಷರಿಗೆ ದೂರು ನೀಡುವ ಮೊದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಗಳು ಕೇಳಿ ಬಂದಿತ್ತು. ಆದರೆ ಅತೃಪ್ತ ಶಾಸಕರು ಮುಂಬೈನಲ್ಲೇ ಉಳಿದಿರುವ ಜತೆಗೆ ಅವರ ನಡೆ ಕುತೂಹಲ ಮೂಡಿಸಿದೆ.

ಹುಬ್ಬಳಿ ವರದಿ
ವಿಧಾನಸಭೆ ಅಧಿವೇಶನಕ್ಕೆ ಹಾಜರಾಗದೆ ವಿಪ್ ನೀಡಿದರೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಚಕ್ಕರ್ ಹೊಡೆದಿರುವ ನಾಲ್ವರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ ಮಾಡಲಾಗುವುದೆಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಕುರಿತಂತೆ ಸ್ಪೀಕರ್ ಅವರನ್ನು ಭೇಟಿಯಾಗಿ ತಾವು ಮನವಿ ಮಾಡುವುದಾಗಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಓರ್ವ ಸುಳ್ಳುಗಾರ ಎಂದು ಅವರು ಕಟುವಾಗಿ ಟೀಕಿಸಿದರು. ಮೋದಿಯವರು ಬರೀ ಸುಳ್ಳು ಹೇಳುತ್ತಾರೆ, ಸುಳ್ಳು ಹೇಳುವುದು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ಲ ಎಂದು ಅವರು ಕುಟುಕಿದರು.

ರೈತರ ಸಾಲಮನ್ನಾ ಮಾಡಲು ಕೋರಿ ಎರಡು ಬಾರಿ ಅವರಲ್ಲಿಗೆ ನಿಯೋಗ ಕೊಂಡೊಯ್ಯಲಾಗಿತ್ತು. ಆದರೆ ಸಾಲಮನ್ನಾಕ್ಕೆ ಮುಂದಾಗಲಿಲ್ಲವೇಕೆ? ಎಂದು ಅವರು ಪ್ರಶ್ನಿಸಿದರು.
ಆದರೆ ನಾವು ಈ ವರ್ಷದ ಬಜೆಟ್‌ನಲ್ಲಿ ಸಾಲಮನ್ನಾಕ್ಕೆ ಹಣ ಇರಿಸಿದ್ದೇವೆ. ಮೋದಿ ಅದನ್ನು ತಿಳಿದುಕೊಳ್ಳಲಿ, ಎಲ್ಲ ಮಾತನಾಡುವ ಮೋದಿ ನಿನ್ನಿನ ಸಮಾವೇಶದಲ್ಲಿ ರಫೇಲ್ ಕುರಿತು ಚಕಾರವೆತ್ತಲಿಲ್ಲವೇಕೆ? ಎಂದು ಸಿದ್ಧರಾಮಯ್ಯ ಚಾಟಿ ಬೀಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಆಡಿಯೋ ವಿಷಯಕ್ಕೆ ಸಂಬಂಧಿಸಿದಂತೆ ಮೊದಮೊದಲು ಅದರಲ್ಲಿರುವುದು ತಮ್ಮ ಧ್ವನಿಯಲ್ಲ, ತಮ್ಮದೆಂದು ಸಾಬೀತು ಪಡಿಸಿದರೆ ರಾಜೀನಾಮೆ ಕೊಡುವುದಾಗಿ ಹೇಳಿದ್ದರು. ಈಗ ಆ ಧ್ವನಿ ತಮ್ಮದೇ ಎಂದಿದ್ದಾರೆ. ಹಾಗಾದರೆ ತಕ್ಷಣ ರಾಜೀನಾಮೆ ಕೊಡಲಿ ಎಂದವರು ಆಗ್ರಹಿಸಿದರು.

ನಿಜವಾಗಲೂ ಯಡಿಯೂರಪ್ಪ ಶರಣಗೌಡಗೆ ಹೇಳಿದ್ದೇನೆಂದರೆ “ನಿಮ್ಮ ತಂದೆಗೆ 10 ಕೋಟಿ ರೂ. ಕೊಡ್ತೇವೆ, ಮಂತ್ರಿ ಮಾಡ್ತೇವೆ, ನಿಂಗೆ ಟಿಕೆಟ್ ಕೊಡ್ತೇವೆ” ಎಂದು ಇದು ಕುದುರೆ ವ್ಯಾಪಾರ ಅಲ್ವಾ? ಎಂದು ಸಿದ್ಧರಾಮಯ್ಯ ಖಾರವಾಗಿ ಕೇಳಿದರು.

ಮುಖ್ಯಮಂತ್ರಿಯಾಗದವರು ಶಾಸಕರನ್ನು ಕೊಂಡುಕೊಳ್ಳಲು ಹೊರಟಿದ್ದಾರೆ, ಇಂಥವರು ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್ ಎಂದು ಅವರು ಬಿರುಸಾಗಿ ನುಡಿದರು.

Leave a Comment