4 ಕ್ಷೇತ್ರಗಳಲ್ಲಿ ಆಪರೇಷನ್ ಹಸ್ತ

ಬೆಂಗಳೂರು, ಸೆ. ೨೨- ಹಠಾತ್ ಎದುರಾಗಿರುವ ಉಪಚುನಾವಣೆ ಎದುರಿಸಲು ಸ್ವಲ್ಪ ಮಟ್ಟಿಗೆ ಸಜ್ಜಾಗಿರುವ ಕಾಂಗ್ರೆಸ್ ಪಕ್ಷ 15 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಆಪರೇಷನ್ ಹಸ್ತ ನಡೆಸುವುದು ಬಹುತೇಕ ಖಚಿತವಾಗಿದೆ.
ಬಿಜೆಪಿ ಹಾಗೂ ಜೆಡಿಎಸ್‌ಗೆ ಟಾಂಗ್ ನೀಡಲು ತಂತ್ರರೂಪಿಸುತ್ತಿರುವ ಕಾಂಗ್ರೆಸ್, ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದು, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಸೆಳೆದು ಟಿಕೇಟ್ ನೀಡಲು ಮುಂದಾಗಿದೆ. ಅನರ್ಹರ ಕ್ಷೇತ್ರಗಳನ್ನು ಕಾಂಗ್ರೆಸ್ ಮತ್ತೇ ಗೆದ್ದುಕೊಳ್ಳಲು ಸಾಧ್ಯವಾದರೆ ಸಹಜವಾಗಿ ಬಿಜೆಪಿ ಸರ್ಕಾರ ಕುಸಿದು ಬೀಳುತ್ತದೆ ಎಂಬ ಭಾವನೆ ಕಾಂಗ್ರೆಸ್‌ನಲ್ಲಿ ಬೇರೂರಿದ್ದು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಈಗಾಗಲೇ ತಯಾರಿ ನಡೆಸಿದೆ.
ಎಲ್ಲೆಲ್ಲಿ `ಕೈ` ಗಾಳ
ಅಧಿಕಾರದ ಲಾಲಾಸೆಯಿಂದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹವೆಸಗಿ ಬಿಜೆಪಿಗೆ ಬೆಂಬಲಿಸಿದ ಅನರ್ಹ ಶಾಸಕರಿಗೆ ತಕ್ಕಪಾಠ ಕಲಿಸಲು ಕಾಂಗ್ರೆಸ್‌ ಮುಂದಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಪ್ರಭಾವಿ ಮುಖಂಡರನ್ನು ಸೆಳೆಯಲು ಈಗಾಗಲೇ ತಂತ್ರರೂಪಿಸಿರುವ ಕಾಂಗ್ರೆಸ್ ನಾಯಕರು ಹೊಸಕೋಟೆಯಲ್ಲಿ ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಅವರನ್ನು ಕಾಂಗ್ರೆಸ್‌ಗೆ ಸೆಳೆದು ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿ ತೊಡಗಿದೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದ್ದು, ಬಿಜೆಪಿಗೆ ಟಾಂಗ್ ನೀಡಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ.
ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಆಪರೇಷನ್ ಹಸ್ತದ ಬಿಸಿ ಮುಟ್ಟುವ ಸಾಧ್ಯತೆಯಿದೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಅಂಜನಪ್ಪನವರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ನಡೆದಿದೆ. ಒಂದು ವೇಳೆ ಈ ಪ್ರಯತ್ನದಲ್ಲಿ ಕಾಂಗ್ರೆಸ್ ಸಫಲವಾದರೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಬೆಂಬಲಿತ ಅಭ್ಯರ್ಥಿಗೆ ನೇರ ಪೈಪೋಟಿ ನೀಡಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಮುಖಂಡರದ್ದಾಗಿದೆ.
ಹಾಗೆಯೇ ಹಿರೆಕೇರೂರಿನಲ್ಲಿ ಕಮಲ ಪಾಳೆಯಕ್ಕೆ ಬಿಸಿ ಮುಟ್ಟಿಸುವ ಸಾಧ್ಯತೆಯಿದೆ. ಅನರ್ಹ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಅಥವಾ ಅವರ ಬೆಂಬಲಿತ ಅಭ್ಯರ್ಥಿ ವಿರುದ್ಧ ಕಳೆದ ಬಾರಿಯ ಬಿಜೆಪಿ ಪರಾಜಿತ ಅಭ್ಯರ್ಥಿ ಯು.ಬಿ. ಬಣಕಾರ್ ಅವರನ್ನು ಸೆಳೆಯುವ ಪ್ರಯತ್ನ ನಡೆದಿದ್ದು, ಒಂದು ವೇಳೆ ಬಣಕಾರ್ ಸ್ಪರ್ಧಿಸಲು ಇಚ್ಚಿಸದಿದ್ದರೆ ಅವರ ಪುತ್ರನನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಲು ಕೈ ಪಾಳೆಯ ಕಸರತ್ತು ನಡೆಸುತ್ತಿದೆ.
ಎಸ್.ಟಿ. ಸೋಮಶೇಖರ್ ಪ್ರತಿನಿಧಿಸಿದ್ದ ಯಶವಂತಪುರ ಕ್ಷೇತ್ರದಲ್ಲಿ ಕಳೆದ ಬಾರಿಯ ಪರಾಜಿತ ಜೆಡಿಎಸ್ ಅಭ್ಯರ್ಥಿ ಜವರಾಯ ಗೌಡರನ್ನು ಕಾಂಗ್ರೆಸ್ ಸೆಳೆಯಲು ಮುಂದಾಗಿರುವ ಕಾಂಗ್ರೆಸ್ ನಾಯಕರು, ಚುನಾವಣೆ ಘೋಷಣೆಯಾದ 15 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ಎರಡಕ್ಕೂ ಟಾಂಗ್ ನೀಡಲು ಮುಂದಾಗಿದೆ ಎನ್ನಲಾಗಿದೆ.

Leave a Comment