ಗದಗ,ಜೂ 30-ಶಾಸಕ   ಎಚ್. ಕೆ. ಪಾಟೀಲ್ ಅವರು ಮೈದಾನ, ಬಯಲು ಪ್ರದೇಶದಲ್ಲಿ ಜನರಿಗೆ ಚಿಕಿತ್ಸೆ ನೀಡಲು ಜಾನುವಾರಲ್ಲ ಎಂದು ಹೇಳಿದ  ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರು  ಹರಿಹಾಯ್ದಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಮಹಾರಾಷ್ಟ್ರದಲ್ಲಿ ಇವರದ್ದೇ ಸರ್ಕಾರವಿದೆ. ಇವರು  ಅಲ್ಲೇನು ಮಾಡಿದ್ದಾರೆ ಎಂಬುದನ್ನು    ಗಮನಿಸಲಿ ಎಂದು ಪ್ರಶ್ನಿಸಿದರು. ಕೊವಿಡ್‌ನಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡಬಾರದು ಎನ್ನುವ ಕಿವಿ ಮಾತನ್ನು ಎಚ್.ಕೆ.ಪಾಟೀಲರಿಗೆ ಹೇಳ ಬಯಸುತ್ತೇನೆ ಎಂದರು.
ಇಂದು ರಾಜ್ಯಾದ್ಯಂತ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಕೊರೊನಾ ವೈರಸ್ ಎಲ್ಲೆಂದರಲ್ಲಿ ಹರಡುತ್ತಿದ್ದು, ಪ್ರತಿಭಟನೆಯ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಮರೆಯಲಾಗಿದೆ. ಪ್ರತಿಭಟನಾ ಸಂದರ್ಭದಲ್ಲಿ ಸಾಮಾಜಿಕ ಅಂತರದ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ. ಮೊದಲು ಇದನ್ನು ಪರಿಪಾಲನೆ ಮಾಡಲಿ ಎಂದರು.
ಸದ್ಯ ಎಚ್.ಕೆ.ಪಾಟೀಲ್ ಅವರು  ಖಾಲಿ ಇದ್ದಾರೆ‌. ‌ಏನಾದರೂ ಮಾಡಿ ಹೈ ಕಮಾಂಡ್ ಮೆಚ್ಚಿಸಬೇಕಲ್ಲ, ಅದಕ್ಕೆ ಟೀಕೆ ಮಾಡುತ್ತಿದ್ದಾರೆ. ಪಿಪಿಇ ಕಿಟ್ ಬಗ್ಗೆ ಎಚ್.ಕೆ.ಪಾಟೀಲರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಟೀಲ ನಮ್ಮ ಬಳಿ ಇನ್ನು 16 ಸಾವಿರ ಪಿಪಿಇ ಕಿಟ್‌ಗಳಿವೆ. ನಮಗೆ ಸಧ್ಯಕ್ಕೆ ಬೇಕಾಗಿರುವುದು ದಿನಕ್ಕೆ ಒಂದು ನೂರು ಮಾತ್ರ. ಇಂದೆ  ಆದೇಶ  ಕೊಟ್ಟರೆ ಬೇಕಾದಷ್ಟು 24 ತಾಸಿನಲ್ಲಿ ಲಭ್ಯವಾಗುತ್ತದೆ ಎಂದರು.
ಜಿಲ್ಲೆಯಲ್ಲಿ 33 ಕ್ವಾರಂಟೈನ್ ಪ್ರದೇಶಗಳಿದ್ದು, ಇನ್ನೂ ಕೊರೋನಾ ಸೊಂಕಿತರ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಮಾಡಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಬಳಸಲು ಸ್ವಚ್ಛತೆ ನಡೆಸಲಾಗಿದೆ. ಚಿಕಿತ್ಸೆ ನೀಡಲು 1315 ಹಾಸಿಗೆ ಲಭ್ಯವಿದ್ದು,  15 ಸಾವಿರ ಓ95 ಮಾಸ್ಕಗಳಿವೆ. 10 ಸಾವಿರ ಟೆಸ್ಟಿಂಗ್ ಉಪಕರಣಗಳಿದ್ದು, ಜಿಲ್ಲೆಯಲ್ಲಿ ಕೊವಿಡ್ ಚಿಕಿತ್ಸೆಗೆ ಯಾವುದೇ ಕೊರತೆ ಇಲ್ಲಾ ಎಂದು ಸಚಿವ ಸಿ.ಸಿ.ಪಾಟಲ ಹೇಳಿದರು.

Share

Leave a Comment