ಮಣ್ಣಲ್ಲಿ ಮಣ್ಣಾದ ಚಿರು

ಬೆಂಗಳೂರು, ಜೂ ೮- ನಿನ್ನೆ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್‌ವುಡ್‌ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರದ ಫಾರ್ಮ್ ಹೌಸ್ ನಲ್ಲಿ ನೆರವೇರಿದೆ.

 ನಟ ಚಿರಂಜೀವಿ ಸರ್ಜಾ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆಯಿಂದಲೇ ಬಸನವನಗುಡಿ ನಿವಾಸದಲ್ಲಿ ಅಭಿಮಾನಿಗಳ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಂತಿಮ ದರ್ಶನದ ನಂತರ ಅವರ ಫಾರ್ಥೀವ ಶರೀರವನ್ನು ಕಳೆದ ಒಂದು ವರ್ಷದ ಹಿಂದಷ್ಟೇ ಕೊಂಡುಕೊಳ್ಳಲಾಗಿದ್ದಂತ ಕನಕಪುರ ಬಳಿಯ ನೆಲಗುಳಿ ಫಾರ್ಮ್ ಹೌಸ್ ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಈ ಮೂಲಕ ನಟ ಚಿರಂಜೀವಿ ಸರ್ಜಾ ತಮ್ಮ ನಚ್ಚಿನ ನೆಲಗುಳಿ ಫಾರ್ಮ್ ಹೌಸ್ ನಲ್ಲಿ ಮಣ್ಣಲ್ಲಿ ಮಣ್ಣಾದರು.

ಅಣ್ಣ ಸದಾ ನನ್ನ ಜೊತೆಗಿರಬೇಕು, ನನ್ನ ಫಾರ್ಮ್ ಹೌಸ್‍ನಲ್ಲೇ ಅಣ್ಣನ ಅಂತ್ಯಕ್ರಿಯೆಯಾಗಬೇಕು ಎಂದು ಸಹೋದರ ದೃವ ಸರ್ಜಾ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕನಕಪುರ ರಸ್ತೆ ಬಳಿಯಿ ನೆಲಗುಳಿ ಗ್ರಾಮದಲ್ಲಿ ತಮ್ಮ ಧ್ರುವ ಸರ್ಜಾರ ಫಾರ್ಮ್ ಹೌಸ್‍ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಇಂದು ಬೆಳಗ್ಗೆ 10 ಗಂಟೆವರೆಗೆ ಬಸವನಗುಡಿಯಲ್ಲಿರುವ ನಿವಾಸದಲ್ಲಿ ಚಿರು ಅಂತಿಮದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಸವನಗುಡಿ ನಿವಾಸಕ್ಕೆ ಇಂದು ಬೆಳಗ್ಗೆಯಿಂದಲೇ ಜನಸಾಗರವೇ ಹರಿದುಬರುತ್ತಿದೆ. ರಾತ್ರಿ 1 ಗಂಟೆಯವರೆಗೂ ಚಿತ್ರರಂಗದ ಗಣ್ಯರು, ಅಭಿಮಾನಿಗಳು, ಸಾರ್ವಜನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇಂದು ಬೆಳಗ್ಗೆ ಕೂಡ ಚಿತ್ರರಂಗದ ಪ್ರಮುಖರು ಆಗಮಿಸುತ್ತಿರುವುದು ಕಂಡುಬಂತು.

ಚಿರು ಅವರು ನಿಧನರಾದ ಬಳಿಕ ಕೋವಿಡ್‌-19 ಪರೀಕ್ಷೆ ನಡೆಸಲಾಗಿತ್ತು. ಆದರೆ ನೆಗೆಟಿವ್ ವರದಿ ಬಂದಿದೆ ಎಂದು ಆಸ್ಪತ್ರೆಯ ವೈದ್ಯರು ದೃಢಪಡಿಸಿದ ಬಳಿಕವಷ್ಟೇ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನಿನ್ನೆಯಿಂದ ಸಾವಿರಾರು ಮಂದಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಮನೆಯ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಚಿರಂಜೀವಿ ಸರ್ಜಾ ನಿಧನಕ್ಕೆ ಚಿತ್ರರಂಗ, ರಾಜಕೀಯ ವಲಯ ಸೇರಿದಂತೆ ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.

Share

Leave a Comment