371(ಜೆ) ಅನುಷ್ಠಾನಕ್ಕೆ ಹೋರಾಟ ಅಗತ್ಯ: ವೈಜನಾಥ ಪಾಟೀಲ

ಕಲಬುರಗಿ,ಸೆ.22-“371(ಜೆ) ಸರಿಯಾದ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲ. ಇದಕ್ಕಾಗಿ ಮತ್ತೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ” ಎಂದು ಮಾಜಿ ಸಚಿವ ಹಾಗೂ 371(ಜೆ) ಹೋರಾಟದ ರೂವಾರಿ ವೈಜನಾಥ ಪಾಟೀಲ ಹೇಳಿದರು.

ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿಂದು ಹಮ್ಮಿಕೊಂಡಿದ್ದ ಮನದಾಳದ ಮಾತು ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಅವರು, ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ 1973ರಲ್ಲಿಯೇ ಮಹಾರಾಷ್ಟ್ರದ ವಿದರ್ಭ ಮತ್ತು ಆಂಧ್ರದ ತೆಲಂಗಾಣ ಮಾದರಿಯಲ್ಲಿ ವಿಶೇಷ ಸ್ಥಾನಮಾನ ದೊರಕಬೇಕಿತ್ತು. ಆದರೆ ಈ ವಿಶೇಷ ಸ್ಥಾಮಾನದ ಬಗ್ಗೆ ಯಾರಿಗೂ ಅಷ್ಟೊಂದು ಅರಿವು ಇರಲಿಲ್ಲ. ವಿದರ್ಭ ಮತ್ತು ತೆಲಂಗಾಣಕ್ಕೆ ಭೇಟಿ ನೀಡಿದಾಗ ನಾವು ಏಕೆ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಸಬಾರದು ಎಂಬ ವಿಚಾರ ಬಂತು. ಅದಕ್ಕಾಗಿ ಹೋರಾಟ ಆರಂಭಿಸಲಾಯಿತು. ಹೈ-ಕ ಬಂದ್ ನಡೆಸಲಾಯಿತು. ದೆಹಲಿ ಚಲೋ ನಡೆಸಿ ಹೋರಾಟ ಮಾಡಲಾಯಿತು. ಹೀಗಾಗಿ ಮುಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 371(ಜೆ) ಅನುಷ್ಠಾನಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. ಮುಂದೆ ಕೇಂದ್ರ ಸರ್ಕಾರ 371(ಜೆ) ಜಾರಿಗೊಳಿಸಿತುಯ. ಈ ಹೋರಾಟದಲ್ಲಿ ಎಲ್ಲರ ಪಾಲು ಇದೆ. ಇದು ಯಾರೊಬ್ಬರು ನಡೆಸಿದ ಹೋರಾಟದ ಫಲವಲ್ಲ ಎಂದರು.

 ಸಚಿವಸ್ಥಾನಕ್ಕೆ ರಾಜೀನಾಮೆ

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಸಚಿವನಾಗಿದ್ದೆ. ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡುವಂತೆ ಅವರಿಗೆ ಪತ್ರ ಬರೆದಿದ್ದೆ. ಹೆಗಡೆ ಹೈ-ಕ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಮುಂದಾಗದೇ ಇರುವುದರಿಂದ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದೆ. ರಾಜೀನಾಮೆ ವಾಪಸ್ ಪಡೆಯುವಂತೆ ಹೆಗೆಡೆ ಮನವಿ ಮಾಡಿದರೂ ರಾಜೀನಾಮೆ ವಾಪಸ್ ಪಡೆಯಲಿಲ್ಲ ಎಂದರು.

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಹಕ್ಯಾಳ ನಮ್ಮೂರು. ಹಕ್ಯಾಳದಲ್ಲಿಯೇ ಪ್ರಾಥಮಿಕ ಶಿಕ್ಷಣ, ಈಗಿನ ಮಹಾರಾಷ್ಟ್ರದ ಉದಗೀರನಲ್ಲಿ ಐದನೇ ತರಗತಿಯವರೆಗೆ ಓದು, ಐದನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಅನ್ನುತ್ತೀರ್ಣನಾದುದ್ದರಿಂದ ಶಾಲೆ ಬಿಡಿಸಿದರು. ಮುಂದೆ ಭಾಲ್ಕಿಯ ಪಟ್ಟದೇವರು ಶಾಲೆಯಲ್ಲಿ 7ನೇ ತರಗತಿಗೆ ಸೇರ್ಪಡೆಯಾದೆ. 1962ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸಂಪರ್ಕ ದೊರೆಯಿತು. ಇದರಿಂದಾಗಿ ರಾಜಕೀಯದಲ್ಲಿ ಆಸಕ್ತಿ ಬೆಳೆಯಿತು. ಇದೇ ವೇಳೆ ಬಿ.ಎ.ಪರೀಕ್ಷೆ ಬಂದಿತ್ತು. ಪರೀಕ್ಷೆ ಸಮಯದಲ್ಲಿ ಓದುವುದನ್ನು ಬಿಟ್ಟು ಚುನಾವಣಾ ಪ್ರಚಾರಕಾರ್ಯದಲ್ಲಿ ತೊಡಗಿದ್ದಾಗ ಗೆಳೆಯರು ಪರೀಕ್ಷೆಗೆ ತಯಾರಿ ನಡೆಸುವಂತೆ ಬುದ್ಧಿ ಮಾತು ಹೇಳುತ್ತಿದ್ದರು. ಪರೀಕ್ಷೆ ಪ್ರತಿವರ್ಷ ಬರುತ್ತವೆ. ಚುನಾವಣೆ ಬರುವುದು ಐದು ವರ್ಷಕ್ಕೊಮ್ಮೆ ಎಂದೂ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರೂ ಪರೀಕ್ಷೆಯಲ್ಲಿ ಪಾಸಾದೇವು. ಬಿ.ಎ.ಅಂತಿಮ ವರ್ಷದಲ್ಲಿ ಮತ್ತೆ ಫೇಲಾಗಬೇಕಾಯಿತು. ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸಾಗಿದ್ದರಿಂದ ಮುಂದೆ ನೌಕರಿ ಸಿಕ್ಕಿತು. ಕೇವಲ 200 ರೂಪಾಯಿ ವೇತನ ಇತ್ತು. ವಕೀಲಿ ವೃತ್ತಿ ಮಾಡುವ ಆಸೆ, ರಾಜಕೀಯದಲ್ಲಿ ಬೆಳೆಯುವ ಆಸೆಯಿದ್ದರೂ ಎಲ್.ಎಲ್.ಬಿಗೆ ಹೋಗಲು ನಮ್ಮ ತಂದೆ ವಿರೋಧ ವ್ಯಕ್ತಪಡಿಸಿದ್ದರು. ಕಲಬುರಗಿಯಲ್ಲಿ ಎಲ್.ಎಲ್.ಬಿ ಓದಿ ಬೀದರ್ ನಲ್ಲಿ ಪ್ರ್ಯಾಕ್ಟಿಸ್ ಮಾಡಲಾರಂಭಿಸಿದೆ. ಮುಂದೆ ಸೋಶಿಯಲಿಸ್ಟ್ ಪಕ್ಷದ ಸಂಪರ್ಕ ಬೆಳೆಯಿತು. ಇದೇ ವೇಳೆ ಮನೆಯಲ್ಲಿ ಮದುವೆ ತಯಾರಿ ನಡೆಸಿದ್ದರು. ಸರ್ಕಾರಿ ನೌಕರಿ ಇರುವ ಹುಡುಗಿಯನ್ನು ಮದುವೆಯಾಗಬೇಕೆಂಬ ಇಚ್ಛೆ ಇತ್ತು. ಕೊನೆಗೆ ಚಿಂಚೋಳಿಯ ಹುಡುಗಿಯನ್ನು ಮದುವೆಯಾಗಬೇಕಾಯಿತು. ಅವರಿಗೆ ನೂರಾರು ಎಕರೆ ಜಮೀನಿತ್ತು. ಈ ಜಮೀನಿಗೆ ಸಂಬಂಧಿಸಿದಂತೆ ವೀರೇಂದ್ರ ಪಾಟೀಲ ಮತ್ತು ನಾನು ಮದುವೆಯಾದ ಮನೆಯ ಹುಡುಗಿ ಕುಟುಂಬದವರ ನಡುವೆ ವಿವಾದವಿತ್ತು. ಈ ವೇಳೆ ವೀರೇಂದ್ರ ಪಾಟೀಲ ಮುಖ್ಯಮಂತ್ರಿಯಾಗಿದ್ದರು. ಮದುವೆಯಾದ ಮೇಲೆ ಬೀದರ್ ನಿಂದ ನನನ್ನು ಭಾಜಿ ಭಜಂತ್ರಿಯೊಂದಿಗೆ ಮೆರವಣಿಗೆಯಲ್ಲಿ ಚಿಂಚೋಳಿಗೆ ಕರೆದುಕೊಂಡು ಹೋದರು. 1976ರಲ್ಲಿ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಆಗ ನಾವು ಸೋಶಿಯಲಿಸ್ಟ್ ಪಕ್ಷದಲ್ಲಿದ್ದುದ್ದರಿಂದ ಮುಖ್ಯಮಂತ್ರಿ ಬೀದರಗೆ ಬರುವ ದಿನವೇ ಬಾಂಬ್ ಸಿಡಿಸಲು ನಿರ್ಧರಿಸಿದ್ದೆವು. ಆದರೆ ಬಾಂಬ್ ಸಿಡಿಸಲು ಆಗಲಿಲ್ಲ.ಮುಂದೆ ಐದಾರು ತಿಂಗಳಲ್ಲಿ ತುರ್ತು ಪರಿಸ್ಥಿತಿ ಮುಗಿದು ಹೋಗಿ ದೇಶದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬಂತು. ಜನತಾ ಪಾರ್ಟಿ ಸ್ಥಾಪನೆಯಾದ ಮೇಲೆ ವೀರೇಂದ್ರ ಪಾಟೀಲ ರಾಜ್ಯಾಧ್ಯಕ್ಷರಾದರು. ನಾನು ತಾಲ್ಲೂಕ ಅಧ್ಯಕ್ಷನಾದೆ. ಮುಂದೆ 1983ರಲ್ಲಿ ಚಿಂಚೋಳಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದೆ. ವೀರೇಂದ್ರ ಪಾಟೀಲ ಅವರು ಹೊಲ ತೆಗೆದುಕೊಂಡು ವೈಜನಾಥ ಪಾಟೀಲ ಅವರಿಗೆ ಟಿಕೆಟ್ ನೀಡಿದ್ದಾರೆ ಎಂದು ಅಪಪ್ರಚಾರ ಮಾಡಲಾಯಿತು. ಈ ಚುನಾವಣೆಯಲ್ಲಿ 83 ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು. ಆ ನಂತರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ಬಹುಮತಗಳ ಅಂತರದಿಂದ ಗೆಲವು ಸಾಧಿಸಿದ್ದರಿಂದ ರಾಮಕೃಷ್ಣ ಹೆಗಡೆ ಅವರು ಒಂದೇ ತಿಂಗಳಲ್ಲಿಯೇ ಸಚಿವಸ್ಥಾನ ನೀಡಿದರು. ಸಚಿವನಾಗಿದ್ದಾಗ ಹೈದ್ರಾಬಾದ ಕರ್ನಾಟಕ ಪ್ರದೇಶದ ಏಳಿಗೆಗೆ ಏನಾದರು ಮಾಡಬೇಕೆಂದು ಹೈ-ಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಅವರಿಗೆ ಪತ್ರ ಬರೆದೆ. ಹೆಗಡೆ ಅವರು ಇದಕ್ಕೆ ಸ್ಪಂದಿಸದೇ ಹೋದುದ್ದರಿಂದ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು ಎಂದರು.

81ರ ಇಳಿವಯಸ್ಸಿನ ವೈಜನಾಥ ಪಾಟೀಲ ಅವರು ತಮ್ಮ ಬಾಲ್ಯ ಜೀವನದಿಂದ ಇದುವರೆಗಿನ ಹೋರಾಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ತಮ್ಮ ರಾಜಕೀಯ ಜೀವನದ ಏಳುಬೀಳು ಮತ್ತು ಹೋರಾಟದ ದಿನಗಳನ್ನು ಮೆಲಕು ಹಾಕಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಠಗಿ, ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್, ಬಿಜೆಪಿ ಮುಖಂಡ ಬಸವರಾಜ ಇಂಗಿನ್, ಡಾ.ವಿಕ್ರಮ ಪಾಟೀಲ, ಗೌತಮ ಪಾಟೀಲ, ಸುರೇಶ ಸಜ್ಜನ್, ಸೀತಿಕಂಠ ತಡಕಲ್, ಎಂ.ಬಿ.ಅಂಬಲಗಿ ಸೇರಿದಂತೆ ಮತ್ತಿತರರು ಇದ್ದರು.

ಕಸಪಾ ಗೌರವ ಕಾರ್ಯದರ್ಶಿ ಡಾ.ವಿಜಯಕುಮಾರ ಪರುತೆ ಕಾರ್ಯಕ್ರಮ ನಿರೂಪಿಸಿದರು. ಸಿ.ಎಸ್.ಮಾಲಿಪಾಟೀಲ ಪ್ರಾರ್ಥನಾಗೀತೆ ಹಾಡಿದರು. ಗೌರವ ಕೋಶಾಧ್ಯಕ್ಷ ದೌಲತರಾಯ ಮಾಲಿಪಾಟೀಲ ಸ್ವಾಗತಿಸಿದರು.

Leave a Comment