371(ಜೆ) ಅನುಷ್ಠಾನಕ್ಕೆ ಸಚಿವಾಲಯ: ಸಿಎಂ ಘೋಷಣೆ ಜಾರಿಗೆ  ದಸ್ತಿ ಆಗ್ರಹ

=

ಕಲಬುರಗಿ ನ 19: ಸಂವಿಧಾನದ 371(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಸೇರಿದಂತೆ, ಸ.17 ರಂದು ನಗರದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಘೋಷಿಸಿದ ಪ್ರಮುಖ ಘೋಷಣೆಗಳ ಜಾರಿಗೆ ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

371(ಜೆ) ಅಡಿ ಇರುವ ದೋಷಗಳ ನಿವಾರಣೆಗೆ ವಿಶೇಷ ಕ್ರಮ, 371(ಜೆ) ವಿಶೇಷ ಕೋಶ ಕಚೇರಿ ಕಲಬುರಗಿಯಲ್ಲಿ ಸ್ಥಾಪನೆ ಮತ್ತು ಹೈಕ ಇತಿಹಾಸ ರಚನಾ  ಸಮಿತಿಗೆ ಹಾಗೂ ಗುವಿವಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಸಮಗ್ರ ಅಧ್ಯಯನಕ್ಕೆ ಪೀಠ ಸ್ಥಾಪನೆಗೆ ಸರ್ಕಾರದ ಎಲ್ಲ ರೀತಿಯ ನೆರವು ನೀಡುವ ಬಗ್ಗೆ ಮುಖ್ಯಮಂತ್ರಿಗಳು ಅಂದಿನ ಸಮಾರಂಭದಲ್ಲಿ ಘೋಷಿಸಿದ್ದರು.ಈ ಎಲ್ಲ ಬೇಡಿಕೆಗಳ ಮನವಿಯನ್ನು  ಸಮಿತಿಯ ನಿಯೋಗವು ಸ. 7 ರಂದು ಬೆಂಗಳೂರಿನಲ್ಲಿ  ಸಿಎಂ ಅವರನ್ನು  ಭೇಟಿಯಾಗಿ ಮನವಿ ಸಲ್ಲಿಸಿತ್ತು . ಮನವಿಯ ಕ್ರಮದ ಬಗ್ಗೆ  ಸಮಿತಿಗೆ ಸಚಿವಾಲಯದಿಂದ ಪತ್ರವೂ ಬಂದಿದೆ. ಆದರೆ ಸರ್ಕಾರದ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಮುಖ್ಯಮಂತ್ರಿಗಳ ಘೋಷಣೆಯ ಬಗ್ಗೆ ಪರಿಣಾಮಕಾರಿ ಕ್ರಮಗಳು ಜರುಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಸಮಿತಿ ನಡೆ ಜನಪ್ರತಿನಿಧಿಗಳ ಮನೆಯ ಕಡೆ ಅಭಿಯಾನ:

ಮುಖ್ಯಮಂತ್ರಿಗಳ ಘೋಷಣೆ ಜಾರಿ, ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಸೇರಿದಂತೆ ಕಲ್ಯಾಣ ಕರ್ನಾಟಕದ ಪ್ರಮುಖ ಬೇಡಿಕೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಜನಪರ ಸಂಘರ್ಷ ಸಮಿತಿಯ ನಡೆ ಜನಪ್ರತಿನಿಧಿಗಳ ಮನೆಯ ಕಡೆ ಎಂಬ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ  ಮನೀಷ ಜಾಜು, ಡಾ ಮಾಜೀದ ದಾಗಿ.ಅಸ್ಲಂ ಚೊಂಗೆ, ಮೊಹ್ಮದ್ ಮಿರಾಜುದ್ದೀನ್ ಉಪಸ್ಥಿತರಿದ್ದರು..

Leave a Comment