370ನೇ ಕಲಂ ರದ್ಧತಿ ದೇಶದ ಅಖಂಡತೆ-ಬಳ್ಳಾರಿ

ಬ್ಯಾಡಗಿ,ಆ 16- ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಜಾರಿಯಲ್ಲಿದ್ದ 370ನೇ ವಿಧಿ ಹಿಂಪಡೆದ ಕೇಂದ್ರ ಸರ್ಕಾರ ದೇಶದ ಅಖಂಡತೆಯನ್ನು ಎತ್ತಿ ಹಿಡಿದಿದೆ, ಇದರಿಂದ ಪ್ರಜಾತಂತ್ರ ವ್ಯವಸ್ಥೆ ಇನ್ನಷ್ಟು ಬಲಿಷ್ಟಗೊಂಡಿದೆ ಸದರಿ ಪ್ರದೇಶದಲ್ಲಿ ನಾಗರೀಕ ಸರ್ಕಾರ ವೊಂದನ್ನು ಸ್ಥಾಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಂದೂಕು ಸಂಸ್ಕೃತಿಗೆ ಶಾಶ್ವತ ವಿರಾಮ ನೀಡಲಿದ್ದಾರೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

 

 
ಗುರುವಾರ, ಸ್ಥಳೀಯ ತಾಲೂಕಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 73ನೇ ಸ್ವಾತಂತ್ರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಯೋತ್ಪಾದಕರು ಮತ್ತು ಪ್ರತ್ಯೇಕತಾ ವಾದಿಗಳು ಧರ್ಮವನ್ನು ಮುಂದಿಟ್ಟುಕೊಂಡು ಶಕ್ತಿ ಸಿದ್ಧಾಂತದ ಮೂಲಕ ಅಪ್ರತ್ಯಕ್ಷವಾಗಿ ಒತ್ತೆಯಾಳುಗಳ ಸರ್ಕಾರವನ್ನು ಜಮ್ಮು ಕಾಶ್ಮೀರದಲ್ಲಿ ಸ್ಥಾಪಿಸಿಕೊಂಡಿದ್ದು ಇಡೀ ಪ್ರಜಾತಂತ್ರ ವ್ಯವಸ್ಥೆ ಬುಡಮೇಲು ಮಾಡುವ ಹುನ್ನಾರ ನಡೆಸಿದ್ದರು, 370ನೇ ಕಲಂ ಹಿಂಪಡೆದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ನಿರ್ಭೀತ ಸರ್ಕಾರವನ್ನು ರಚಿಸಲು ಮುಂದಾಗಿದ್ದು ಶ್ಲಾಘನೀಯ ಎಂದರು.

 

 
ಸ್ವಾತಂತ್ರ್ಯ ನಮಗೆಲ್ಲರಿಗೂ ಸುಮ್ಮನೆ ಸಿಕ್ಕಿಲ್ಲ ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನದಳಿಂದ ಲಭಿಸಿದೆ ಇದೊಂದು ಪ್ರಜಾತಂತ್ರ ವ್ಯವಸ್ಥೆ ಬಹುದೊಡ್ಡ ಅಡಿಪಾಯವೂ ಕೂಡ ಹೌದು, ದೇಶದ ಸಮಗ್ರ ಪ್ರಗತಿಯೊಂದಿಗೆ ಮೂಲಭೂತ ಹಕ್ಕು ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವುದು ಆಡಳಿತಾರೂಢ ಸರ್ಕಾರಗಳ ಜವಾಬ್ದಾರಿಯಾದರೇ, ಸ್ವಾತಂತ್ರ್ಯ ವನ್ನು ಅನುಭವಿಸುತ್ತಿರುವ ಜನರು ದೇಶಕ್ಕೆ ನಿಷ್ಟೆ ತೋರಿಸುವ ಮೂಲಕ ಸರ್ವಧರ್ಮ ಸಹಿಷ್ಣುತೆ ಉತ್ತೇಜಿಸುವಂತಹ ಕೆಲಸದಲ್ಲಿ ನಿರತರಾದಾಗ ಮಾತ್ರ ತ್ಯಾಗಬಲಿದಾನಗಳಿಂದ ಪಡೆದಂತಹ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗಲಿದೆ ಎಂದರು.

 

 
ಯವಕರ ಮೇಲೆ ಜವಾಬ್ದಾರಿ ಹೆಚ್ಚಿದೆ:ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ಸರ್ವಧರ್ಮ ಸಂಸ್ಕೃತಿಗಳ ತಿರುಳನ್ನು ತಿಳಿದುಕೊಳ್ಳುವ ಮೂಲಕ ಗೌರವಿಸುವ ಕೆಲಸ ದೇಶದ ಯುವಕರಿಂದ ಆಗಬೇಕಿದೆ ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಮೂಲಮಂತ್ರವಾಗಿದ್ದು, ಜಾತಿಭೇದವಿಲ್ಲದ, ಲಿಂಗತಾರತಮ್ಯವಿಲ್ಲದ ಸರ್ವಧರ್ಮ ಸಮಾನಭಾವನೆಯನ್ನು ಪ್ರತಿಯೊಬ್ಬರೂ ಹೊಂದಬೇಕಾಗಿದೆ ಎಂದರು.

 

 
ಸ್ವಚ್ಚ ಭಾರತ ಕಲ್ಪನೆ ಬರಲಿ:ಧ್ವಜವಂದನೆ ಸ್ವೀಕರಿಸಿದ ತಹಶೀಲ್ದಾರ ಗುರುಬಸವರಾಜ ಮಾತನಾಡಿ, ದೇಶದ ಅಭಿವೃದ್ಧಿ ಯುವ ಜನಾಂಗದ ಕೈಯಲ್ಲಿದೆ ದೇಶಕ್ಕಾಗಿ ನಾವೇನು ಮಾಡುತ್ತಿದ್ದೇವೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸ್ವಚ್ಛ ಭಾರತದ ಕಲ್ಪನೆ ಮೊದಲು ನಮ್ಮಲ್ಲಿ ಜಾಗೃತಗೊಳ್ಳಬೇಕು ಮತ್ತು ಅಮೂಲ್ಯವಾದ ನೀರು, ಅರಣ್ಯ, ಆಹಾರ ಇವುಗಳು ದೇಶದ ಆಸ್ತಿಯಾಗಿದ್ದು ಇಂತಹ ಅಮೂಲ್ಯವಾದ ಸಂಪನ್ಮೂಲಗಳನ್ನು ಉಳಿಸಿಕೊಂಡಾಗ ಮಾತ್ರ ದೇಶ ಸ್ವಾತಂತ್ರ್ಯಕ್ಕೆ ಗೌರವ ಸಲ್ಲಿಸಿದಂತಾಗಲಿದೆ ಎಂದರು.

 

 
ಲ್ಯಾಪಟಾಪ್ ವಿತರಣೆ ಹಾಗೂ ಸನ್ಮಾನ:ಇದೇ ಸಂದರ್ಭದಲ್ಲಿ ಕ್ರೀಡಾಕ್ಷೇತ್ರದಲ್ಲಿ ಗಣನೀಯ ಸಾಧನೆ ತೋರಿದ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟುಗಳಾದ ಶ್ರೀಮತಿ ಮಂಜುಳ ಭಜಂತ್ರಿ (ಬಣಕಾರ) ಹಾಗೂ ಸುಭಾಸ್ ಮಾಳಗಿ ಸೇರಿದಂತೆ ನಿವೃತ್ತ ಸೈನಿಕರಾದ ಬಸವರಾಜ ತೇಲಿ, ಮಂಜುನಾಥ ಪಾಟೀಲ ಇವರನ್ನು ಸನ್ಮಾನಿಸಲಾಯಿತು, ಕಳೆದ ಸಾಲಿನ ಎಸ್ಸೆಸ್ಸ್‍ಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ಯಲ್ಲಪ್ಪ ಮೂಡಬಾಗಿಲ, ಫಕ್ಕಿರಪ್ಪ ಪಡಿಯಣ್ಣನವರ, ಪ್ರೀತಿ ತಳಮನಿ, ರೋಹಿನಾಬಾನು ಮೊಮಿನಗಾರ್ ಅವರುಗಳಿಗೆ ಲ್ಯಾಪಟಾಪ್ ನೀಡಿ ಗೌರವಿಸಲಾಯಿತು.

 

 

 
ಆಕರ್ಷಕ ಪರೇಡ್: ಇದಕ್ಕೂ ಮುನ್ನ ಪೊಲೀಸ್ ಸಿಬ್ಬಂದಿ ಸೇರಿದಂತೆ, ಎನ್‍ಸಿಸಿ, ಸ್ಕೌಟ್ & ಗೈಡ್, ಸೇವಾದಳ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪರೇಡ್ ನಡೆಯಿತು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ತಹಶೀಲ್ದಾರ ಗುರುಬಸವರಾಜ ಹಾಗೂ ಸಿಪಿಐ ಭಾಗ್ಯವತಿ, ತೆರೆದ ವಾಹನದಲ್ಲಿ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು, ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

 

 
ವೇದಿಕೆಯಲ್ಲಿ ಪುರಸಭೆ ಸರ್ವ ಸದಸ್ಯರು, ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು, ತಾಲ್ಲೂಕ ಮಟ್ಟದ ಎಲ್ಲ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಡಾವಣೆ ಶಾಲೆ ಶಿಕ್ಷಕ ಪ್ರಕಾಶ ಕೊರಮರ ಹಾಗೂ ವಿದ್ಯಾರ್ಥಿಗಳಿಂದ ನಾಡಗೀತೆ ಕಾರ್ಯಕ್ರಮ ಜರುಗಿತು, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಮುನಿ ಸ್ವಾಗತಿಸಿದರು, ಶಿಕ್ಷಕ ಬಿ.ಎಫ್.ದೊಡ್ಮನಿ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್.ಬಾರ್ಕಿ ವಂದಿಸಿದರು.

Leave a Comment