ಐಪಿಎಲ್ ಗಾಗಿ ವಿಶ್ವ ಕಪ್ ಮುಂದೂಡಿಕೆ ಬಯಸುವುದಿಲ್ಲ: ಧುಮಾಲ್

ನವದೆಹಲಿ, ಮೇ 22 -ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವ ಕಪ್ ಟೂರ್ನಿಯನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಮುಂದೂಡುವಂತೆ ಬಿಸಿಸಿಐ ಪ್ರಯತ್ನಿಸುವುದಿಲ್ಲ ಎಂದು ಮಂಡಳಿಯ ಖಜಾಂಚಿ ಅರುಣ್ ಸಿಂಗ್ ಧುಮಾಲ್ ಹೇಳಿದ್ದಾರೆ. ಇದೇ ವೇಳೆ ವಿಶ್ವಕಪ್ ಮುಂದೂಡುವ ಪರಿಸ್ಥಿತಿ ಎದುರಾದರೆ ಅಕ್ಟೋಬರ್ -ನವೆಂಬರ್ ನಲ್ಲಿ ಐಪಿಎಲ್ ನಡೆಸಲು ಯೋಜಿಸಲಾಗುವುದು ಎಂದಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಧುಮಾಲ್, ವಿಶ್ವ ಕಪ್ ಮುಂದೂಡುವಂತೆ ಮಾಡಲು ಐಸಿಸಿ ಮೇಲೆ ಬಿಸಿಸಿಐ ಒತ್ತಡ ಹೇರುತ್ತಿದೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಮಾಡಿರುವ ವರದಿಗೆ ಈ ಮೂಲಕ ತಿರುಗೇಟು ನೀಡಿದ್ದಾರೆ.
ಬಹುಕೋಟಿ ಮೊತ್ತದ ಐಪಿಎಲ್ ಟೂರ್ನಿ ಕೋವಿಡ್-19 ನಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಅಕ್ಟೋಬರ್ 18ರಿಂದ ಆರಂಭವಾಗಬೇಕಿರುವ ಟಿ20 ವಿಶ್ವ ಕಪ್ ಬಗ್ಗೆ ಇನ್ನೂ ಅನಿಶ್ಚಿತತೆ ಎದುರಾಗಿದೆ. ಹೀಗಾಗಿ ಮುಂದಿನ ವಾರ ನಡೆಯಲಿರುವ ಐಸಿಸಿ ಸಭೆಯಲ್ಲಿ ವಿಶ್ವ ಕಪ್ ಆಯೋಜನೆ ಕುರಿತು ವಿಸ್ತೃತ ಚರ್ಚೆ ನಡೆಯಲಿದ್ದು, ಈ ವೇಳೆ ಟೂರ್ನಿಯನ್ನು ಮುಂದೂಡುವಂತೆ ಬಿಸಿಸಿಐ ಒತ್ತಡ ಹೇರುವುದಿಲ್ಲ ಎಂದು ಧುಮಾಲ್ ಹೇಳಿದ್ದಾರೆ.
ಯುಎನ್ಐಆರ್ ಕೆ 1925

Leave a Comment