ವಿಮಾನ ನಿಲ್ದಾಣ ಉದ್ಘಾಟನೆಗೆ ಭರದ ಸಿದ್ಧತೆ

 

ಕಲಬುರಗಿ: ನಾಳೆಯಿಂದ ಬಾನಂಗಳದಲ್ಲಿ ವಿಮಾನ ಹಾರಾಟ

ಕಲಬುರಗಿ,ನ.22-ಬಹುನಿರೀಕ್ಷಿತ ಕಲಬುರಗಿ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭ ನಾಳೆ ಮಧ್ಯಾಹ್ನ 1.30ಕ್ಕೆ ನಡೆಯಲಿದ್ದು, ಅದಕ್ಕಾಗಿ ನಡೆದಿರುವ ಭರದ ಸಿದ್ಧತೆಗಳು ನಡೆದಿವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಟಾರ್ ಏರ್ ಸಂಸ್ಥೆಯ ವಿಮಾನದ ಮೂಲಕ ನಾಳೆ ಬೆಳಿಗ್ಗೆ 1.30ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ವಿಮಾನ ನಿಲ್ದಾಣದ ಉದ್ಘಾಟನೆ ನೆರವೇರಿಸಿ ನಂತರ ಅದೇ ವಿಮಾನದಲ್ಲಿ ಮರಳಿ ಬೆಂಗಳೂರಿಗೆ ತೆರಳಲಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಜಗದೀಶ ಶೆಟ್ಟರ್ ಮತ್ತು ದೆಹಲಿಯಿಂದ ಏರಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷರು ಆಗಮಿಸಲಿದ್ದಾರೆ ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದರು.

ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದ ಅವರು, ಈ ಭಾಗದ ಅದರಲ್ಲೂ ವಿಶೇಷವಾಗಿ ಕಲಬುರಗಿ ಜಿಲ್ಲೆಯ ಜನತೆಯ ಬಹುದಿನಗಳ ಕನಸು ನಾಳೆ ನನಸಾಗಲಿದೆ. ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಗಳನ್ನು ಗ್ರಾ.ಪಂ.ಸದಸ್ಯರಿಂದ ಹಿಡಿದು ತಾ.ಪಂ. ಜಿ.ಪಂ ಸದಸ್ಯರಿಗೆ, ಶಾಸಕರಿಗೆ, ಮಾಜಿ ಶಾಸಕರಿಗೆ, ಮಾಜಿ ಸಂಸದರು, ಎಲ್ಲ ಪಕ್ಷಗಳ ನಾಯಕರು ಸೇರಿದಂತೆ ಎಲ್ಲ ಗಣ್ಯರಿಗೆ ತಲುಪಿಸಲಾಗಿದೆ. ಸಮಾರಂಭದಲ್ಲಿ ಸುಮಾರು 5 ಸಾವಿರಕ್ಕೂ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸದ್ಯ ಸ್ಟಾರ್ ಏರ್ ಸಂಸ್ಥೆಯ ವಿಮಾನ ಸಂಚಾರ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿ ಅಲೈಯನ್ಸ್ ಏರಲೈನ್ಸ್ ಸಹ ಇಲ್ಲಿಂದ ತಿರುಪತಿ, ಗಾಜಿಯಾಬಾದ್ ಗೆ ವಿಮಾನಯಾನ ಆರಂಭಿಸಲಿದೆ. ಮುಂಬರುವ ವರ್ಷಗಳಲ್ಲಿ ಇಲ್ಲಿಂದ ಹಜ್ ಗೂ ವಿಮಾನ ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿದರು.

ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕಾಗಿ ವಿಮಾನ ನಿಲ್ದಾಣದ ಪಕ್ಕ ದೊಡ್ಡ ವೇದಿಕೆ ಹಾಕಲಾಗಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಮಾರಂಭಕ್ಕೆ ಆಗಮಿಸುವ ಎಲ್ಲರಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾಧಿಕಾರಿ ಶರತ್, ಸಿಇಓ ಡಾ.ರಾಜಾ ಪಿ.,ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಇದ್ದರು.

@12bc = ಸಮನ್ವಯದ ಕೊರತೆ

ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದ ಸಿದ್ಧತೆಯನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪ್ರತ್ಯೇಕವಾಗಿ ಪರಿಶೀಲನೆ ನಡೆಸಿದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ ಎದ್ದು ಕಾಣುತ್ತಿತ್ತು.

ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಶೀಲ ಜಿ.ನಮೋಶಿ, ಅಮರನಾಥ ಪಾಟೀಲ ಸೇರಿದಂತೆ ಮತ್ತಿತರರು ಒಂದು ಗುಂಪಾಗಿ ವಿಮಾನ ನಿಲ್ದಾಣದ ಸಿದ್ಧತೆಗಳನ್ನು ಪರಿಶೀಲಿಸಿದರೆ, ಪ್ರಾದೇಶಿಕ ಆಯುಕ್ತ ಸುಬೋಧ ಯಾಧವ, ಜಿಲ್ಲಾಧಿಕಾರಿ ಬಿ.ಶರತ್, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ.ಪಿ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಸೇರಿದಂತೆ ಇತರೆ ಅಧಿಕಾರಿಗಳ ತಂಡ ಪ್ರತ್ಯೇಕವಾಗಿಯೇ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಿದರು.

ಮೊದಲು ವಿಮಾನ ಸಂಚಾರ ಆರಂಭವಾಗಲಿ, ಹೆಸರು ಆಮೇಲೆ

“ಮೊದಲು ವಿಮಾನ ಸಂಚಾರ ಆರಂಭವಾಗಲಿ, ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು ಎಂಬುವುದರ ಕುರಿತು ಆಮೇಲೆ ಚಿಂತನೆ ಮಾಡೋಣ”-ಹಿಗೇಂದು ಹೇಳಿದವರು ಸಂಸದ ಡಾ.ಉಮೇಶ ಜಾಧವ ಅವರು.

ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಬೇಕಿತ್ತು. ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದ ಅವರು ಆಗಮಿಸುತ್ತಿಲ್ಲ. ಮುಂಬರುವ ದಿನಗಳಲ್ಲಿ ಅವರು ಇಲ್ಲಿಗೆ ಆಗಮಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Leave a Comment