ಕನ್ಹಯ್ಯಕುಮಾರ್ ಉಪನ್ಯಾಸ ಕಾರ್ಯಕ್ರಮ ದಿಢೀರ್ ರದ್ದು

 

ಕಲಬುರಗಿ,ಅ.15-ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂದು ನಡೆಯಬೇಕಿದ್ದ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ ಅವರ ಉಪನ್ಯಾಸ ಕಾರ್ಯಕ್ರಮ ರದ್ದಾಗಿದೆ.

ವಿವಿಯ ಡಾ.ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಕನ್ಹಯ್ಯಕುಮಾರ ಅವರು ” ಡಾ.ಬಿ.ಆರ್.ಅಂಬೇಡ್ಕರ್ ಕಂಡ ಆಧುನಿಕ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ” ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ ವಿಶ್ವವಿದ್ಯಾಲಯ ಮಧ್ಯರಾತ್ರಿಯೇ ಉಪನ್ಯಾಸ ಕಾರ್ಯಕ್ರಮವನ್ನು ದಿಢೀರೆಂದು ರದ್ದುಪಡಿಸಿದೆ.

ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಈ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದವು.

ಕನ್ಹಯ್ಯಕುಮಾರ ಉಪನ್ಯಾಸ  ಕಾರ್ಯಕ್ರಮಕ್ಕೆ ಶ್ರೀರಾಮ ಸೇನೆ ವಿರೋಧ ವ್ಯಕ್ತಪಡಿಸಿ ಕಾರ್ಯಕ್ರಮ ರದ್ದುಗೊಳಿಸುವಂತೆ ಆಗ್ರಹಿಸಿತ್ತು. ಅಲ್ಲದೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಸಹ ಒಡ್ಡಿತ್ತು.  ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.

ಕನ್ಹಯ್ಯಕುಮಾರ ಉಪನ್ಯಾಸ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೋ ಬೇಡವೋ ಎಂಬುವುದನ್ನು ಚರ್ಚಿಸಲು ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ ಅವರು ಸೋಮವಾರ ಸಿಂಡಿಕೇಟ್ ಸಭೆ ಕರೆದು ಸುದೀರ್ಘವಾಗಿ ಚರ್ಚೆ ನಡೆಸಿ ಉಪನ್ಯಾಸ ಕಾರ್ಯಕ್ರಮಕ್ಕೆ ಅನುಮತಿ ನೀಡುವ ನಿರ್ಣಯವನ್ನು ಪ್ರಕಟಿಸಿದ್ದರು.

ಆದರೆ ರಾತ್ರೋರಾತ್ರಿ ಕಾರ್ಯಕ್ರಮವನ್ನು ದಿಢೀರೆಂದು ರದ್ದುಪಡಿಸಲಾಗಿದೆ.

ಕಾರ್ಯಕ್ರಮ ರದ್ಧಾದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ವವಿದ್ಯಾಲಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

@h18 =ಅನುಮತಿ ನೀಡಲು ಪೊಲೀಸರ ನಿರಾಕರಣೆ ‌

ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕನ್ಹಯ್ಯಕುಮಾರ ಭಾಷಣಕ್ಕೆ ಸಿದ್ಧತೆ ಮಾಡಲಾಗಿತ್ತು. ಆದರೆ, ದಿಢೀರ್ ಕಾರ್ಯಕ್ರಮ ಆಯೋಜನೆ ಮಾಡಿದದರಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲು ಆಗುವುದಿಲ್ಲ ಎಂದು ಹೇಳಿ ಪರವಾನಿಗೆ ನೀಡಲು ಪೊಲೀಸರು ನಿರಾಕರಿಸಿದರು. ಹೀಗಾಗಿ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಿದ್ಧ ಕಾರ್ಯಕ್ರಮವು ನಡೆಯಲಿಲ್ಲ. ಕಾರ್ಯಕ್ರಮ ನಡೆಯದೇ ಇರುವುದರಿಂದ ವಿಶ್ವೇಶ್ವರಯ್ಯ ಭವನದಲ್ಲಿ ಸೇರಿದ್ದ ಕನ್ಹಯ್ಯಕುಮಾರ ಅಭಿಮಾನಿಗಳು ವಾಪಸ್ ಮರಳಿದರು.

ಇನ್ನೊಂದೆಡೆ ಸಂಜೆ 4 ಗಂಟೆಗೆ ಅಂಬೇಡ್ಕರ್ ಕಾಲೇಜು ಆವರಣದಲ್ಲಿ ಕನ್ಹಯ್ಯ ಕುಮಾರ್ ಕಾರ್ಯಕ್ರಮ ನಿಗದಿಯಾಗಿದೆ.

ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕಾರ್ಯಕ್ರಮ ರದ್ದು

ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂಬ ಉದ್ದೇಶದಿಂದ ಕನ್ಹಯ್ಯಕುಮಾರ ಅವರ ಉಪನ್ಯಾಸ ಕಾರ್ಯಕ್ರಕ್ಕೆ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ಯಾವುದೇ ರೀತಿಯ ಅಚಾತುರ್ಯ ಆಗಬಾರದು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಾರದು ಎಂಬ ಉದ್ದೇಶದಿಂದ ಕನ್ಹಯ್ಯಕುಮಾರ ಅವರ ಕಾರ್ಯಕ್ರಮಕ್ಕೆ ನೀಡಿದ್ದ ಷರತ್ತುಬದ್ದ ಅನುಮತಿಯನ್ನು ಹಿಂಪಡೆಯಲಾಗಿದ್ದು, ಇದನ್ನು ಕಾರ್ಯಕ್ರಮದ ಆಯೋಜಕರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಸರ್ಕಾರವು ಸಹ ಕಾನೂನು ಸುವ್ಯವಸ್ಥೆ ನೋಡಿಕೊಂಡು ನಿರ್ಣಯ ತೆಗೆದುಕೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಉಪನ್ಯಾಸ ಕಾರ್ಯಕ್ರಮಕ್ಕೆ ನೀಡಿದ್ದ ಷರತ್ತುಬದ್ಧ ಅನುಮತಿಯನ್ನು ರಾತ್ರಿಯೇ ಹಿಂಪಡೆಯಲಾಗಿದೆ ಎಂದು ತಿಳಿಸಿದರು.

 

Leave a Comment