ಶಿವಣ್ಣನ ಮೆಚ್ಚದೆ ಬೇರೆ ದಾರಿ ಇಲ್ಲ

ಶ್ರೀಕಂಠ ಚಿತ್ರದಲ್ಲಿ ನಟಿಸಿರುವುದಕ್ಕೆ ಒಳ್ಳೆ ಸಿನೆಮಾ ಮಾಡಿದ್ದೇನೆ ಎನ್ನುವ ಹೆಮ್ಮೆ ಇದೆ ಎಂದ ಡಾ. ಶಿವರಾಜ್ ಕುಮಾರ್ ಎಂದಿನ ತಮ್ಮ ಅದೇ ವಿನಯದಲ್ಲಿ ತೃಪ್ತಿಯನ್ನು ವ್ಯಕ್ತಪಡಿಸುವ ಜೊತೆಗೆ ಶ್ರೀಕಂಠ ಚಿತ್ರಕ್ಕೆ ಜನರು ಉತ್ತಮ ಒಪನಿಂಗ್ ಕೊಟ್ಟು ಸ್ಪಂದಿಸುತ್ತಿರುವುದು ಎಲ್ಲಾ ಚಿತ್ರಗಳಿಗಿಂತ ಖುಷಿ ಕೊಟ್ಟಿದೆ ಎಂದು ತುಂಬು ಹೃದಯದಿಂದ ಹೇಳಿಕೊಂಡರು.

ತಾವು ಈ ಮಟ್ಟಕ್ಕೆ ಬೆಳೆದಿದ್ದರೆ ಅದು ಜನರಿಂದಾಗಿ ಎಂದು ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುವ ಶಿವಣ್ಣ ಶ್ರೀಕಂಠ ಚಿತ್ರಮಂದಿರಗಳಲ್ಲಿ ತುಂಬು ಪ್ರದರ್ಶನ ಕಾಣುತಿರುವ ಈ ಸಂದರ್ಭದಲ್ಲಿಯೂ ಕೃತಜ್ಞತೆ ತಿಳಿಸಲು ಮರೆಯಲಿಲ್ಲ. ತಮಗಾದ ಸಂತೋಷವನ್ನು ಹಂಚಿಕೊಳ್ಳಲು ಶ್ರೀಕಂಠ ಬಿಡುಗಡೆಯಾದ ಮೂರೇ ದಿನಕ್ಕೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ತಾವು ಒಬ್ಬ ಪ್ರೇಕ್ಷಕನಾಗಿ ಚಿತ್ರ ನೋಡಿದಾಗ ತುಂಬಾ ಇಷ್ಟವಾಯಿತು ಎಂದು ತಮ್ಮ ಚಿತ್ರವೆನ್ನುವ ಯಾವುದೇ ಆಹಂಕಾರವು ಇಲ್ಲದೆ ಮುಕ್ತ ವಿಮರ್ಶೆಯನ್ನು ಮಾಡಿದ್ದರು.

ನಿರ್ದೇಶಕ ಮಂಜು ಸ್ವರಾಜ್ ಕಥೆಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಸಿನೆಮಾದಲ್ಲಿ ವೇಶ್ಯೆಯಾಗಿ ಬರುವ ಸಣ್ಣ ಪಾತ್ರವೂ ಸೇರಿದಂತೆ ಪ್ರತಿ ಪಾತ್ರ ನೆನಪಿನಲ್ಲುಳಿಯುವ ಪ್ರಾಮುಖ್ಯತೆ ಪಡೆದುಕೊಂಡಿವೆ ಎಂದರಲ್ಲದೆ ಪ್ರತಿ ಕಲಾವಿದರೂ ಉತ್ತಮವಾಗಿ ನಟಿಸಿದ್ದಾರೆನ್ನುವ ಪ್ರಶಂಸೆಯನ್ನು ಮಾಡಿದರು. ಅಲ್ಲದೆ ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ಡ್ಯೂಪ್ ಇಲ್ಲದೆ ತಾವೇ ಮಾಡಿರುವುದಕ್ಕೆ ಅಭಿಮಾನಿಗಳಿಂದ ಸಿಕ್ಕಿರುವ ಮೆಚ್ಚುಗೆ ಅವರಲ್ಲಿ ಸಾರ್ಥಕ್ಯ, ತೃಪ್ತಿಯನ್ನೂ ಮೂಡಿಸಿದೆ.

ಜನ ಕುಟುಂಬ ಸಮೇತರಾಗಿ ಬಂದು ಶ್ರೀಕಂಠ ಚಿತ್ರ ನೋಡುತ್ತಿರುವುದು ಅವರ ಸಂತಸವನ್ನು ಇಮ್ಮಡಿಗೊಳಿಸಿದಂತಿತ್ತು. ಎಲ್ಲವನ್ನೂ ಮೀರಿ ತಾವು ಶ್ರೀಕಂಠ ಚಿತ್ರದಲ್ಲಿರುವಂತ ಶ್ರೀಸಾಮಾನ್ಯರಂತೆಯೇ ತಮ್ಮನ್ನು ಅಪ್ಪಾಜಿ(ಡಾ.ರಾಜ್ ಕುಮಾರ್) ಬೆಳೆಸಿದ್ದಾರೆ.

ಹೀಗಾಗಿ ನಟಿಸಲು ಕಷ್ಟವಾಗಲಿಲ್ಲವೆನ್ನುವ ಮಾತನ್ನು ಶಿವಣ್ಣನ ಅವತ್ತೂ ಹೇಳಿದರು. ಆದರೆ ನೂರು ಚಿತ್ರಗಳ ಈ ಸರದಾರ ಶ್ರೀಕಂಠನಾಗಿ ತನ್ನನ್ನು ತಾನು ಸಿನೆಮಾಕ್ಕೆ ಸಮರ್ಪಿಸಿಕೊಂಡಿರುವ ಬದ್ಧತೆಯನ್ನು ಎಂಥವರೂ ಮೆಚ್ಚಲೇಬೇಕು.

Leave a Comment