3 ಸಾವಿರ ರೂ.ಗಳಿಗಾಗಿ ಕೊಲೆ ಮಾಡಿದ್ದ ಆರೋಪಿ ಬಂಧನ

ಚಾಮರಾಜನಗರ, ಫೆ.14- ಕೆಲವು ದಿನಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಕೇವಲ 9 ದಿನಗಳಲ್ಲಿಯೇ ಭೇದಿಸಿ ಆರೋಪಿ ಮಹೇಶ ಎಂಬುವನನ್ನು ಬಂಧಿಸುವಲ್ಲಿ ಜಿಲ್ಲಾ ಪೋಲೀಸರು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಇಂದು ಜಿಲ್ಲಾ ಪೋಲಿಸ್‍ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಮಹದೇವೇಗೌಡ ಎಂಬುವರು ಸಿದ್ದಯ್ಯ ಎಂಬುವರ ಜಮೀನಿನಲ್ಲಿ ಕುರಿಮರಿಗಳು ಹಾಗೂ ಹಸುಗಳನ್ನು ಮೇಯಿಸಲು ಹೋಗಿದ್ದಾಗ ಕೊಲೆಯಾಗಿದ್ದರು.
ಈ ಬಗ್ಗೆ ಆರಂಭದಲ್ಲಿ ಜಮೀನೊಂದರಲ್ಲಿ ಅನಾಥವಾಗಿ ಶವ ಬಿದ್ದಿದ್ದ ಕಾರಣ ಯಾವ ಉದ್ದೇಶಕ್ಕಾಗಿ ಕೊಲೆಯಾಗಿದೆ ಎಂಬುದರ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆದರೆ ನಂತರ ವಿಶೇಷ ಪ್ರಕರಣ ಎಂದು ನಮ್ಮ ತಂಡವು ತನಿಖೆಯನ್ನು ಚುರುಕುಗೊಳಿಸಿದಾಗ ಮಂಗಲ ಭಾಗದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಲು ಶುರು ಮಾಡಿದರು, ಆಗ ಬಾತ್ಮಿದಾರರ ಮಾಹಿತಿ ಹಾಗೂ ಅನುಮಾಸ್ಪದವಾಗಿ ಕಂಡು ಬಂದ ಹಂಡ್ರಕಳ್ಳಿ ಮೋಳೆ ಗ್ರಾಮದ ಮಹೇಶ @ ಗೋಪಿ ಬಿನ್ ಲೇಟ್ ಗೋವಿಂದಶೆಟ್ಟಿ ಎಂಬುವನನ್ನು ವಿಚಾರಣೆಗೊಳಪಡಿಸಿದಾಗ ಆತ ಮಹದೇವೇಗೌಡರವರ ನಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.
ಕೇವಲ 3 ಸಾವಿರಕ್ಕಾಗಿ ಕೊಲೆ : ಮಹದೇವೇಗೌಡ ಮಂಗಲ ಗ್ರಾಮದವರಾಗಿದ್ದು, ಕುರಿಗಳನ್ನು ಮೇಯಿಸುವುದರ ಜೊತೆಗೆ ಸಂತೆಗಳಲ್ಲಿ ಕುರಿ, ಮೇಕೆ, ಹಸು ಮಾರಾಟ ಮಾಡುವುದಲ್ಲದೆ ದಲ್ಲಾಳಿಯಾಗಿಯೂ ಕೆಲಸ ಮಾಡುತ್ತಿದ್ದರು. ಮಾರಾಟ ಹಾಗೂ ದಲ್ಲಾಳಿತನದಿಂದ ಬಂದ ಹಣವನ್ನು ಜೊತೆಯಲ್ಲಿಯೇ ಇಟ್ಟುಕೊಂಡಿರುತ್ತಿದ್ದರು. ಇದನ್ನೆಲ್ಲಾ ಗಮನಿಸುತ್ತಿದ್ದ ಆರೋಪಿ ಮಹೇಶ ಕುಡಿತ, ಗಾಂಜಾ ಹಾಗೂ ಇನ್ನಿತರ ದುಶ್ಚಟಗಳಿಗೆ ದಾಸನಾಗಿದ್ದನು. ಇದಕ್ಕಾಗಿ ಹಣ ದೊರಕದಿದ್ದಾಗ ಎಂದಿನಂತೆ ಜಮೀನಿನಲ್ಲಿ ಕುರಿಮೇಯಿಸುತ್ತಿದ್ದ ಮಹದೇವೇಗೌಡರನ್ನು ಆಯುಧದಿಂದ ತಲೆಗೆ, ಮುಖಕ್ಕೆ ಹೊಡೆದು ಲುಂಗಿಯಿಂದ ಕತ್ತನ್ನು ಬಿಗಿದು ಕೊಲೆ ಮಾಡಿ ಶವವನ್ನು ಪಕ್ಕದ ಜಮೀನಿನ ಬೇಲಿ ಬಳಿ ಸಾಗಿಸಿ, ಮಹದೇವೇಗೌಡರ ಬಳಿ ಇದ್ದ 3 ಸಾವಿರ ರೂ.ನಗದು ಮತ್ತು ಅವರ ಬೆರಳಿನಲ್ಲಿದ್ದ ಉಂಗುರವನ್ನು ದೋಚಿ ಪರಾರಿಯಾಗಿದ್ದನು.
ಪ್ರಕರಣದ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಅನಿತಾ. ಬಿ. ಹದ್ದಣನವರ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಮೋಹನ್‍ರವರ ಸಲಹೆಯಂತೆ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಕೆ.ಎಂ. ಮಂಜು ರವರ ನೇತೃತ್ವದಲ್ಲಿ ಎಸ್.ಐ. ಸುನಿಲ್, ಸಿಬ್ಬಂದಿಗಳಾದ ಮಂಜುನಾಥ, ನಾಗನಾಯ್ಕ, ಚಂದ್ರು, ಡಿ. ಶಾಂತರಾಜು, ವೆಂಕಟೇಶ್, ದೊಡ್ಡವೀರಶೆಟ್ಟಿ, ಮಾದೇಶ್‍ಕುಮಾರ್, ನಿಂಗರಾಜು, ಕಿಶೋರ, ಅಶೋಕ, ಎಸ್. ವೆಂಕಟೇಶ, ಬಸವರಾಜು, ಶಂಕರರಾಜು, ರಾಜು ಮಹೇಶವರುಗಳು ಭಾಗವಹಿಸಿದ್ದರು ಎಂದು ಎಸ್.ಪಿ. ಆನಂದ್‍ಕುಮಾರ್ ತಿಳಿಸಿದರು.

Leave a Comment