3 ಮಕ್ಕಳ ಮೇಲೆ ಬೀದಿನಾಯಿಗಳ ಆಕ್ರಮಣ

ಬೆಂಗಳೂರು, ಸೆ. ೧೨- ನಗರದಲ್ಲಿ ಪದೇ ಪದೇ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿದ್ದರೂ ಬಿಬಿಎಂಪಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ವಿಫಲವಾಗಿದೆ. ಪದ್ಮನಾಭನಗರ ಕನಕ ಬಡಾವಣೆಯಲ್ಲಿ ಮೂವರು ಮಕ್ಕಳ ಮೇಲೆ ಐದಾರು ರಕ್ಕಸ ನಾಯಿಗಳು ಕಚ್ಚಿ ಗಾಯಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸೋಮವಾರ ಮನೆ ಮುಂದೆ ಆಟವಾಡುತ್ತಿದ್ದ ಮೂವರು ಮಕ್ಕಳ ಮೇಲೆ ನಾಯಿಗಳ ಗುಂಪು ಏಕಾಏಕಿ ಎರಗಿವೆ. ನಾಯಿಗಳು ಕಚ್ಚುತ್ತಿದ್ದಂತೆ ಕೆಳಗೆ ಬಿದ್ದ ಮಕ್ಕಳ ಅರಚಾಟ ಕೇಳಿ ಸ್ಥಳೀಯರು ನಾಯಿಗಳನ್ನು ಓಡಿಸಿದ್ದಾರೆ.

7 ವರ್ಷದ ಬಾಲಕಿ ಮಹಾದೇವಿ, 9 ವರ್ಷದ ಕೋಟೇಶ್ವರಿ ಹಾಗೂ 9 ವರ್ಷದ ತನ್ಮಯ ಗೌಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಇವರಲ್ಲಿ ತನ್ಮಯ ಗೌಡ ಎಂಬ ಬಾಲಕನಿಗೆ ಎರಡು ಮೂರು ಕಡೆ ಬೀದಿ ನಾಯಿಗಳು ಕಚ್ಚಿದ್ದು, ಗಂಭೀರ ಗಾಯಗಳಾಗಿವೆ.  ಕಳೆದವಾರ ವಿಭೂತಿಪುರದಲ್ಲಿ ಪ್ರವೀಣ್ ಎಂಬ ಬಾಲಕನಿಗೆ ಬೀದಿ ನಾಯಿಗಳು ಕಚ್ಚಿ ಆತ ಮೃತಪಟ್ಟಿದ್ದ. ಅದಾದ ಒಂದೆರೆಡು ದಿನಗಳಲ್ಲೇ ರಾಜಾಜಿನಗರದ ಗುಬ್ಬಾಳು ಲೇಔಟ್‌ನಲ್ಲಿ ಮೂರು ಮಕ್ಕಳ ಮೇಲೆ ರಕ್ಕಸ ಬೀದಿ ನಾಯಿಗಳು ಎರಗಿ ಗಾಯಗೊಳಿಸಿದ್ದವು.

ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ

ಮೂರು ರಕ್ಕಸ ನಾಯಿಗಳು ಬಾಲಕ ತನ್ಮಯ ಗೌಡನನ್ನು ಎಲ್ಲೆಂದರಲ್ಲಿ ಕಚ್ಚಿ ಎಳೆದಾಡುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಂಥವರನ್ನು ಬೆಚ್ಚಿ ಬೀಳಿಸಿದೆ.  ರಸ್ತೆ ಮಧ್ಯೆ ಹೋಗುತ್ತಿದ್ದ ಬಾಲಕನ ಮೇಲೆ ಏಕಾಏಕಿ ಎರಗುತ್ತಿದ್ದಂತೆ ಬಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೂ ಅವನನ್ನು ಬಿಡದೆ ಮೂರು ನಾಯಿಗಳು ಬಾಲಕ ಧರಿಸಿದ್ದ ಪ್ಯಾಂಟ್‌ನ್ನು ಕಚ್ಚಿ ಹಿಡಿದು ಎಳೆದಾಡಿವೆ. ರಕ್ಕಸ ನಾಯಿಗಳ ಅಟ್ಟಹಾಸಕ್ಕೆ ಬಾಲಕ ನಡುಗಿ ಹೋಗಿದ್ದು, ಭಯಭೀತರಾಗಿ ಕಿರುಚಿಕೊಂಡಿದ್ದಾನೆ.

ತಕ್ಷಣವೇ ಅಲ್ಲಿದ್ದ ಸಾರ್ವಜನಿಕರು ಸ್ಥಳಕ್ಕೆ ಬರುತ್ತಿದ್ದಂತೆ ನಾಯಿಗಳು ಬಾಲಕನನ್ನು ಬಿಟ್ಟು ಪರಾರಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Leave a Comment