28,29 ರಂದು ಸರಕಾರಿ ನೌಕರರ ಕ್ರೀಡಾಕೂಟ

ಕಲಬುರಗಿ,ಡಿ.6-ಪ್ರತಿವರ್ಷದಂತೆ ಈ ವರ್ಷವೂ ಸಹ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಡಿ.28, 29 ರಂದು ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೂರ್ಣ ಪ್ರಮಾಣದ ರಾಜ್ಯ ಸರಕಾರಿ ನೌಕರರು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದ್ದು, ದೈಹಿಕ ಶಿಕ್ಷಕರು, ಕ್ರೀಡಾಧಿಕಾರಿಗಳು, ತಾತ್ಕಾಲಿಕ ನೌಕರರು, ದಿನಗೂಲಿ ನೌಕರರು, ಆರಕ್ಷಕ, ಪ್ಯಾರಾ ಮಿಲಿಟರಿ ಹಾಗೂ ಕೇಂದ್ರ ಸರ್ಕಾರಿ ನೌಕರರು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

45 ವರ್ಷ ಒಳಪಟ್ಟ ಮತ್ತು 45 ವರ್ಷ ಮೇಲ್ಪಟ್ಟ ಪುರುಷರಿಗೆ ಮತ್ತು 40ರ ಮೇಲ್ಪಟ್ಟ ಮತ್ತು 40ರ ಒಳಗಿನ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳಿರುತ್ತವೆ. ಜೊತೆಗೆ ಪುರುಷರು ಮತ್ತು ಮಹಿಳೆಯರಿಗೆ ಅಥ್ಲೆಟಿಕ್ ಹಾಗೂ ಗುಂಪು ಆಟಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೇ ಈ ಎರಡೂ ವರ್ಗದವರಿಗೆ ಸಾಂಸ್ಕೃತಿಕ ಸ್ಪರ್ಧೆಗಳಾದ ಹಿಂದೂಸ್ತಾನಿ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ, ವಾದ್ಯ ಸಂಗೀತ, ಜಾನಪದ ಗೀತೆ, ಕರಕುಶಲ ವಸ್ತು ಪ್ರದರ್ಶನ, ಕಿರುನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಜಿಲ್ಲೆಯ ಸರಕಾರಿ ನೌಕರರು ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಹೆಸರು ನೋಂದಾಯಿಸಿಬೇಕು. ಹೆಚ್ಚಿನ ಮಾಹಿತಿಗಾಗಿ ರಾಜು ಲೇಂಗಟಿ ಅವರನ್ನು (ದೂ.ಸಂ.9481789999) ಸಂಪರ್ಕಿಸಲು ಕೋರಲಾಗಿದೆ.

Leave a Comment