254 ದಿವ್ಯಾಂಗರಿಗೆ ಶ್ರವಣ ಸಾಧನ, ತ್ರಿಚಕ್ರ ಬೈಸಿಕಲ್ ವಿತರಣೆ

ಹಾವೇರಿ:ಸೆ.12- ವಿಕಲಚೇತನರ ಬಗ್ಗೆ ಅನಾಸ್ಥೆ ತೋರುವುದು ಬೇಡ, ನಮ್ಮೊಂದಿಗೆ ಬದುಕುವ ಆತ್ಮವಿಶ್ವಾಸ ತುಂಬಿ ಸಮಾಜದ ಮುಖ್ಯವಾಹಿನಿಯೊಂದಿಗೆ ಕರೆದುಕೊಂಡು ಹೋಗೋಣ ಎಂದು ಹಾನಗಲ್ ಕ್ಷೇತ್ರದ ಶಾಸಕರಾದ ಸಿ.ಎಂ.ಉದಾಸಿ ಹೇಳಿದರು.

 
ಮಂಗಳವಾರ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಂಗವಿಕಲರ ಮತ್ತು ಹಿರಿಯ ನಾಗರಿಕ ಕಲ್ಯಾಣ ಇಲಾಖೆ, ಭಾರತದ ಸರ್ಕಾರದ ಸಾಮಾಜಿಕ ಹಾಗೂ ಸಬಲೀಕರಣ ಮಂತ್ರಾಲಯದ ದಿವ್ಯಾಂಗ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಸಾಮಾಜಿಕ ಆಧಾರಿತಾ ಶಿಬಿರ ಹಾಗೂ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನಾ ಸಲಕರಣೆಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 
ಅಂಗವಿಕಲತೆ, ದೃಷ್ಟಿಮಾಂಧ್ಯತೆ ಆಕಸ್ಮಿಕವಾದದ್ದು. ಕೆಲವರಿಗೆ ಹುಟ್ಟಿನಿಂದ ಹಾಗೂ ಮತ್ತೆ ಕೆಲವರಿಗೆ ಅವಘಡಗಳಿಂದ ಸಂಭವಿಸುತ್ತವೆ. ಇವರನ್ನು ಕುಂಟರು, ಕುರುಡರು ಎಂದು ಕರೆಯದೇ  ಗೌರವದಿಂದ ನಡೆಸಿಕೊಳ್ಳೋಣ. ಸ್ವಾವಂಭಿಗಳಾಗಿ ಬದುಕಲು ಸಹಜವಾಗಿ ಜೀವನ ನಡೆಸಲು ಧೈರ್ಯವನ್ನು ತುಂಬುವ ಕೆಲಸ ನಮ್ಮಿಂದಾಗಬೇಕು ಎಂದು ಹೇಳಿದರು.

 

 
ಅಂಗವಿಕಲತೆಯಿಂದ ಬದುಕಲು ಸಾಧ್ಯವೇ ಇಲ್ಲ ಎಂಬ ಕಾಲವೊಂದಿತ್ತು. ಆದರೆ ಕಾಲ ಬದಲಾಗಿದೆ, ಬ್ರೈಲ್ ಲಿಪಿಯ ಸಂಶೋಧನೆಯ ಫಲವಾಗಿ ವಿಕಲಚೇತನರು ಜ್ಞಾನವಂತರಾಗಿದ್ದಾರೆ, ಬಹುಭಾಷಾ ಪಂಡಿತರಾಗಿದ್ದಾರೆ. ಅಂಧರಾದ ಪುಟ್ಟರಾಜ ಗವಾಯಿಗಳಂತವರು ಬಹುಭಾಷಾ ಪಂಡಿತರಾಗಿ ಹಲವು ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಸಂಗೀತದಲ್ಲಿ ವಿಶಿಷ್ಠ ಸಾಧನೆ ಮಾಡಿದ್ದಾರೆ. ಇತರ ಸಹಜ ವ್ಯಕ್ತಿಗಳಿಗಿಂತ ವಿಕಲಚೇತನರು ಸ್ವಾವಂಭಿಯಾಗಿ ಬದುಕುವ  ಅಧಮ್ಯ ವಿಶ್ವಾಸವನ್ನು ಸಾಮಥ್ರ್ಯವನ್ನು ಹೊಂದಿದವರಾಗಿದ್ದಾರೆ. ಇತರರಂತೆ ಸಾಮಥ್ರ್ಯದಿಂದಲೇ ವಿಶ್ವದ ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಅವರ ಕೀರ್ತಿ ಪ್ರತಿಭೆಗೆ ಅಂಗವೈಕಲ್ಯ ಅಡ್ಡಿಯಾಗದಂತೆ ಸಾಧನೆಯನ್ನು ಮೆರೆದಿದ್ದಾರೆ ಎಂದು ಹೇಳಿದರು.

 

 
ಸರ್ಕಾರ ಸಹ ಅಂಗವಿಕಲರ ನೆರವಿಗೆ ನಾನಾ ಯೋಜನೆಗಳನ್ನು ರೂಪಿಸಿದೆ. ಅವರ ಸಾಮಥ್ರ್ಯವನ್ನು ವೃದ್ಧಿಸುವ ಕೆಲಸಮಾಡಿದೆ. ಕೇಂದ್ರ ಸರ್ಕಾರ ವಿಕಲಚೇತನರ ಸರ್ವೇ ನಡೆಸಿ ಅವರಿಗೆ ಅಗತ್ಯವಿರುವ ಉಪಕರಣ ನೀಡಲು ಕಾರ್ಯಕ್ರಮ ಹಾಕಿಕೊಂಡಿದೆ. ಜಿಲ್ಲೆಯಲ್ಲಿ 254 ವಿಕಲಚೇತನರಿಗೆ 1144 ವಿವಿಧ ಸಾಧನಗಳನ್ನು ಕೊಡುವ ಕೆಲಸ ಇಂದು ಹಮ್ಮಿಕೊಳ್ಳಲಾಗಿದೆ. ಇವುಗಳನ್ನು ಸದ್ಬಳಕೆಮಾಡಿಕೊಳ್ಳಿ, ಸೌಲಭ್ಯ ಸಿಗದೇ ಇರುವ ವಿಕಲಚೇತನರು ಉಳಿದಿದ್ದರೆ ವಿಕಲಚೇತನ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ ಅವರಿಗೂ ಉಪಕರಣಗಳನ್ನು ಮಂಜೂರ ಮಾಡಲಾಗುವುದು ಎಂದು ತಿಳಿಸಿದರು.

 

 
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಸಮಾಜದಲ್ಲಿರುವ ಒಟ್ಟು ಜನಸಂಖ್ಯೆಯ ಪೈಕಿ ಶೇ.3 ರಿಂದ 4ರಷ್ಟು ಜನ ವಿಕಲಚೇತನರಿದ್ದಾರೆ. ಹುಟ್ಟಿನಿಂದ ಹಾಗೂ ಅವಘಡದಿಂದ ವಿಕಲಚೇತನರಾಗುವ ಸಾಧ್ಯತೆ ಇರುತ್ತದೆ. ವಿಕಲಚೇತನರಿಗೆ ಸಲಕರಣೆಗಳನ್ನು ವಿತರಣೆಮಾಡಿ ಇದನ್ನು ಬಳಸುವ ಕುರಿತಂತೆ ತರಬೇತಿ ನಡೆಸುವ ಕಾರ್ಯಕ್ರಮವನ್ನೂ ಸಹ ಹಮ್ಮಿಕೊಳ್ಳಲಾಗಿದೆ. ತಮಗೆ ನೀಡಿದ ಉಪಕರಣಗಳನ್ನು ಸರಿಯಾಗಿ ಬಳಸಿಕೊಂಡು ಪರಿಪೂರ್ಣವಾದ ಬದುಕನ್ನು ಕಟ್ಟಿಕೊಳ್ಳಬೇಕು.  ಇತ್ತೀಚೆಗೆ ಕಂಪ್ಯೂಟರ್ ಕೌಶಲ್ಯ ಜ್ಞಾನ ಹೊಂದಿದ ವಿಕಲಚೇತನರು ಸ್ವಾವಲಂಭಿಗಳಾಗಿ ಉತ್ತಮವಾದ ಬದುಕನ್ನು ನಡೆಸುತ್ತಿದ್ದಾರೆ. ವಿಕಲಚೇತನರು ಉಪಕರಣಗಳ ಸದ್ಬಳಕೆಯ ಜೊತೆಗೆ ಕೌಶಲ್ಯಾಧಾರಿತ  ತರಬೇತಿಗಳನ್ನು ಪಡೆದು ಸ್ವಾವಲಂಭಿ ಬದುಕು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

 

 

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರಾದ  ದೀಪಾ ಅತ್ತಿಗೇರಿ, ಜಿ.ಪಂ.ಸದಸ್ಯರಾದ ಕೊಟ್ರೇಶಪ್ಪ ಬಸೇಗಣ್ಣಿ, ಸಿದ್ಧರಾಜ ಕಲಕೋಟಿ, ತಾಲೂಕು ಪಂಚಾಯತಿ ಅಧ್ಯಕ್ಷ ಕರಿಯಪ್ಪ ಉಂಡಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯ್ಕ, ವಿಕಲಚೇತನರ ಸಂಘದ ಜಿಲ್ಲಾ ಉಪಾಧ್ಯಕ್ಷ  ಮೌನೇಶ ಬಡಿಗೇರ, ವಿಕಲಚೇತನರ ಕಲ್ಯಾಣ್ಯಾಧಿಕಾರಿ ಮಲ್ಲಿಕಾರ್ಜುನ ಮಠದ ಉಪಸ್ಥಿತರಿದ್ದರು.

Leave a Comment