2500 ಶಿಕ್ಷಕರ ಸನ್ಮಾನ

ತುಮಕೂರು, ಸೆ. ೭- ಗ್ರಾಮಾಂತರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ 2500ಕ್ಕೂ ಅಧಿಕ ಶಿಕ್ಷಕರನ್ನು ಶಾಸಕ ಡಿ.ಸಿ. ಗೌರಿಶಂಕರ್‍ರವರು ಸನ್ಮಾನಿಸಿ ಗುರು ಭಕ್ತಿ ಮೆರೆದರು.

ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅನುದಾನಿತ ಶಾಲೆಗಳು ಹಾಗೂ ನಿವೃತ್ತ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿದ್ದು ಗಮನ ಸೆಳೆಯಿತು. ಅಷ್ಟೂ ಜನ ಶಿಕ್ಷಕರಿಗೆ ಶಾಲು, ಹಾರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ ಎಂಬ ನಾಣ್ಣುಡಿಯಂತೆ ಪ್ರತಿ ವ್ಯಕ್ತಿಯು ತಂದೆ-ತಾಯಿ ಹಾಗೂ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಮಾತ್ರ ಯಶಸ್ಸು ದೊರಕುತ್ತದೆ ಎಂದರು.

ಶಿಕ್ಷಕರಿಗೆ ಸಮಾಜದಲ್ಲಿ ಪೂಜ್ಯನೀಯ ಸ್ಥಾನವಿದೆ. ಸದೃಢ ಭಾರತವನ್ನು ನಿರ್ಮಾಣ ಮಾಡುವ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ತಮ್ಮ ಪಾಲಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

Leave a Comment