ಐಟಿ ಮುಂದೆ ಯಶ್ ಹಾಜರು

ಬೆಂಗಳೂರು, ಜ. ೧೧- ಆದಾಯ ತೆರಿಗೆ ದಾಳಿಗೆ ಒಳಗಾಗಿದ್ದ ನಟ ಯಶ್ ಇಂದು ತಾಯಿ ಪುಷ್ಪ ಅವರೊಂದಿಗೆ ಇಲಾಖೆಯ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಆದಾಯ ಇಲಾಖೆ ತೆರಿಗೆ ದಾಳಿಗೆ ಸಂಬಂಧಿಸಿದಂತೆ, ಮನೆಯಲ್ಲಿ ಪತ್ತೆಯಾದ ಆಸ್ತಿ – ಪಾಸ್ತಿ, ಚಿನ್ನಾಭರಣ, ನಗದು ಹಾಗೂ ದಾಖಲೆಗಳ ಬಗ್ಗೆ ವಿವರ ನೀಡುವಂತೆ ನಟ ಯಶ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿ ಮಾಡಿತ್ತು.

ದಾಳಿಯ ಸಂದರ್ಭದಲ್ಲಿ ಅಪಾರ ಪ್ರಮಾಣದ ಆಸ್ತಿ – ಪಾಸ್ತಿ, ನಗದು ಹಾಗೂ ತೆರಿಗೆ ಪಾವತಿಸದ ವಿಷಯಗಳು ಬೆಳಕಿಗೆ ಬಂದಿತ್ತು. ಹೀಗಾಗಿ ನೋಟೀಸ್ ಹಿನ್ನೆಲೆಯಲ್ಲಿ ನಟ ಯಶ್ ವಿಚಾರಣೆಗೆ ಹಾಜರಾದರು.

ಯಶ್ ಸಮ್ಮುಖದಲ್ಲಿ ಇಲಾಖೆಯ ಅಧಿಕಾರಿಗಳು ಯಶ್ ಮನೆಯಲ್ಲಿ ವಶಪಡಿಸಿಕೊಂಡು ಆಭರಣ, ಆಸ್ತಿ – ಪಾಸ್ತಿ ಸೇರಿದಂತೆ, ವಿವಿಧ ಆದಾಯದ ಮೂಲಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಇತ್ತೀಚೆಗೆ ಚಿತ್ರರಂಗದ ನಾಲ್ವರು ನಿರ್ದೇಶಕರು ಹಾಗೂ ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ನೂರಾರು ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ, 25 ಕೆಜಿ ಚಿನ್ನ ಸೇರಿದಂತೆ, ಇನ್ನಿತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.

ಈ ಹಿನ್ನೆಲೆಯಲ್ಲಿ ದಾಳಿಗೆ ಒಳಗಾಗಿ ಎಲ್ಲಾ ನಟ, ನಿರ್ಮಾಪಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿತ್ತು. ಅದರಲ್ಲಿ ಈಗಾಗಲೇ ನಟರಾದ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ, ಹಲವರು ಹಾಜರಾಗಿ ವಿಚಾರಣೆ ಎದುರಿಸಿದ್ದರು.

ವಿಚಾರಣೆಗೆ ಹಾಜರಾಗುವಂತೆ ಯಶ್‌ಗೆ ನೋಟೀಸ್ ನೀಡಲಾಗಿತ್ತು. ಚಿತ್ರೀಕರಣವಿದೆ, ಹೊರಗಡೆ ಹೋಗುತ್ತಿದ್ದೇನೆ, ಉತ್ತರ ನೀಡಲು ಸಮಯಾವಕಾಶ ಕೇಳಿದ್ದ ಯಶ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳದೆ, ಮನೆ ಮತ್ತು ಆಡಿಟರ್ ಕಚೇರಿಯಲ್ಲಿ ಅಧಿಕಾರಿಗಳ ವಿಚಾರಣೆಗೆ ಹೇಗೆ ಉತ್ತರ ಕೊಡಬೇಕು ಎನ್ನುವ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ನಟ ಯಶ್ ಅವರ ಮೇಲೆ ಆದಾಯ ತೆರಿಗೆ ಇಲಾಖೆಯ ಗುಪ್ತಚರ ಅಧಿಕಾರಿಗಳು ಕಣ್ಣಿಟ್ಟಿದ್ದರು. ನಿನ್ನೆಯಷ್ಟೆ ಆದಾಯ ತೆರಿಗೆ ಅಧಿಕಾರಿಗಳು ಯಶ್ ಅವರ ಆಡಿಟರ್ ಕಚೇರಿ ಮೇಲೂ ದಾಳಿ ನಡೆಸಿದ್ದರು.

Leave a Comment