ವರ್ತಮಾನದಲ್ಲಿ ರಕ್ಷಾಬಂಧನ ಹಬ್ಬದ ಮಹತ್ವ

ಭಾರತವು ಹಬ್ಬಗಳ ತವರೂರು. ಈ ಹಬ್ಬಗಳು ಪರಸ್ಪರ ಸ್ನೇಹ-ವಿಶ್ವಾಸ, ಗೌರವವನ್ನು ಇಮ್ಮಡಿಗೊಳಿಸುತ್ತಾ ಮಾನವನ ಜೀವನದಲ್ಲಿ ಸುಖ-ಶಾಂತಿಯನ್ನು ತುಂಬುತ್ತಿವೆ. ಮನುಷ್ಯನಲ್ಲಿ ಹಲವು ರೀತಿಯ ಮಾನವೀಯ ಗುಣಗಳನ್ನು ತುಂಬುತ್ತಾ ಅವನನ್ನು ಗುಣವಂತನ್ನಾಗಿ ಹಬ್ಬಗಳು ಮಾಡುತ್ತಿವೆ. ಈ ನಾಡಿನಲ್ಲಿ ಆಚರಿಸುವ ಹಬ್ಬಗಳಲ್ಲಿ ಮಾನವನ ರಕ್ಷಣೆಯು ಅಡಗಿದೆ. ಆಧುನಿಕ ವಿಜ್ಞಾನ ಯುಗದಲ್ಲಿಯೂ ಕೂಡ ಹಬ್ಬಗಳ ಆಚರಣೆಯು ತನ್ನದೇ ಆದ ಮಹತ್ವವನ್ನು ಹೊಂದಿದೆ.

ಭಾರತಾದ್ಯಂತ ವಿಭಿನ್ನ ರೀತಿಯ ರಕ್ಷಾಬಂಧನ

ಉತ್ತರ ಭಾರತದಲ್ಲಿ ರಕ್ಷಾಬಂಧನವನ್ನು ದೇವರನ್ನು ಪೂಜಿಸಿ ಸಹೋದರಿಯರು ಸಹೋದರರಿಗೆ ತಿಲಕವನ್ನಿಟ್ಟು ರಕ್ಷಾಬಂಧವನ್ನು ಕಟ್ಟಿ ಆರತಿ ಬೆಳಗಿಸಿ ಸಿಹಿಯನ್ನು ತಿನ್ನಿಸುವುದರ ಮೂಲಕ ಆಚರಿಸುತ್ತಾರೆ. ಪೂರ್ವ ಭಾರತದಲ್ಲಿ ’ಝೂಲಾ ಪೂರ್ಣಿಮೆ’ಯೆಂದು ದೇವತಾ ಶ್ರೀಕೃಷ್ಣ ಹಾಗೂ ರಾಧೆಗೆ ಪೂಜೆ ಸಲ್ಲಿಸಿ ರಕ್ಷಾಬಂಧನವನ್ನು ಕಟ್ಟಿ ಹಬ್ಬವನ್ನು ಆಚರಿಸುತ್ತಾರೆ. ಪಶ್ಚಿಮ ಭಾರತದಲ್ಲಿ ’ಪವಿತ್ರೋಪನ’ ಎಂದು ಪರಮಾತ್ಮ ಶಿವನಿಗೆ ಅಭಿಷೇಕ ಸಲ್ಲಿಸಿ ತಮ್ಮ ಹಿಂದಿನ ಪಾಪಕರ್ಮಗಳಿಗೆ ಕ್ಷಮೆಯನ್ನು ಕೇಳಿ ರಕ್ಷಾಬಂಧನವನ್ನು ಆಚರಿಸುತ್ತಾರೆ. ಮಧ್ಯಭಾರತದಲ್ಲಿ ’ಕಜಾರಿ ಪೂರ್ಣಿಮೆ’ಯೆಂದು ತಾಯಿ-ಮಕ್ಕಳೆಲ್ಲಾ ಸೇರಿ ಭೂಮಿ ತಾಯಿಯನ್ನು ಪೂಜಿಸಿ ಹಬ್ಬವನ್ನು ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ’ನಾರಾಲಿ ಪೂರ್ಣಿಮೆ’ಯಂದು ತೀರಪ್ರದೇಶದ ಜನರು ಸಾಗರಕ್ಕೆ ಕೊಬ್ಬರಿಯನ್ನು ಹಾಕಿ ಹಬ್ಬವನ್ನು ಆಚರಿಸುತ್ತಾರೆ. ತಮಿಳುನಾಡು ಮತ್ತು ಕೇರಳದಲ್ಲಿ ’ಅವನಿಅವಿಟ್ಟಂ ಪೂರ್ಣಿಮೆ’ಯಂದು ಪುರುಷರು ನೀರಿನಲ್ಲಿ ಮುಳುಗಿ ತಮ್ಮ ಪೂರ್ವ ಪಾಪಗಳಿಗೆ ಕ್ಷಮೆ ಕೇಳಿ ತಮ್ಮ ಜನಿವಾರವನ್ನು ಬದಲಿಸಿಕೊಳ್ಳುತ್ತಾ ಹಬ್ಬವನ್ನು ಆಚರಿಸುತ್ತಾರೆ. ಹೀಗೆ ರಕ್ಷಾಬಂಧನವನ್ನು ಭಾರತಾದ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ.

26j8

ರಕ್ಷಾಬಂಧನದ ಹಿನ್ನೆಲೆ

ಕೇವಲ ಅಣ್ಣ-ತಂಗಿಯರ ಹಬ್ಬವೆಂದು ಆಚರಿಸಲ್ಪಡುವ ರಕ್ಷಾಬಂಧನ ಹಬ್ಬದ ಹಿನ್ನೆಲೆಯು ವಿಭಿನ್ನವಾಗಿದೆ. ಪುರಾಣದ ಅನುಸಾರ ರಾಕ್ಷಸರಿಗೂ ಹಾಗೂ ದೇವತೆಗಳಿಗೂ ಯುದ್ಧ ನಡೆಯುತ್ತಿತ್ತು. ಯುದ್ಧವು ನಿಲ್ಲುವ ಯಾವ ಸೂಚನೆಯು ಕಾಣುತ್ತಿರಲಿಲ್ಲ. ಆಗ ಇಂದ್ರನ ಪತ್ನಿಯಾದ ಸಚಿದೇವಿಯು ವಿಷ್ಣುವಿನ ಮೊರೆ ಹೋಗುತ್ತಾಳೆ. ವಿಷ್ಣುವು ಅವಳಿಗೆ ಪವಿತ್ರವಾದ ನೂಲುದಾರವನ್ನು ನೀಡುತ್ತಾನೆ. ಅದನ್ನು ಅವಳು ತನ್ನ ಪತಿಯ ಕೈಗೆ ಪರಮಾತ್ಮನ ರಕ್ಷಣೆ ಇರಲೆಂದು ಕಟ್ಟುತ್ತಾಳೆ. ಆಗ ಇಂದ್ರನು ಅಮರಾವತಿಯನ್ನು ಗೆಲ್ಲುತ್ತಾನೆ.

ಭಾಗವತದ ಪ್ರಕಾರ ಬಲಿ ಚಕ್ರವರ್ತಿಯು ಮೂರು ಲೋಕಗಳನ್ನು ಗೆದ್ದು, ವಿಷ್ಣುವನ್ನು ತನ್ನ ಅರಮನೆಯ ಹಿಂಭಾಗದಲ್ಲಿ ಬಂಧಿಯಾಗಿ ಇಟ್ಟುಕೊಂಡಿದ್ದನು. ಆಗ ಶ್ರೀ ಲಕ್ಷ್ಮಿಯು ತನ್ನ ಪತಿಯನ್ನು ಬಂಧನದಿಂದ ಬಿಡಿಸಲು ಬಲಿ ಚಕ್ರವರ್ತಿಗೆ ರಕ್ಷಾಬಂಧನವನ್ನು ಕಟ್ಟುತ್ತಾಳೆ. ಬಲಿ ಚಕ್ರವರ್ತಿಯು ಉಡುಗೊರೆಯಾಗಿ ವಿಷ್ಣುವನ್ನು ಬಂಧನದಿಂದ ಮುಕ್ತಗೊಳಿಸುತ್ತಾನೆ. ಈ ರೀತಿ ಶ್ರೀ ಲಕ್ಷ್ಮಿಯು ಪವಿತ್ರ ಬಂಧನದ ಮೂಲಕ ತನ್ನ ಪತಿಯನ್ನು ವೈಕುಂಠಕ್ಕೆ ಕರೆದೊಯ್ಯುತ್ತಾಳೆ.

26a6ಗಣೇಶನ ಇಬ್ಬರು ಪುತ್ರರಾದ ಶುಭ-ಲಾಭರು ತಂಗಿಯರು ಬೇಕೆಂಬ ಬೇಡಿಕೆಯನ್ನು ತಮ್ಮ ತಂದೆಯ ಬಳಿ ಇಡುತ್ತಾರೆ. ಆಗ ಗಣೇಶನು ನಾರದರ ಸಹಾಯದಿಂದ ದಿವ್ಯಜ್ಯೊತಿಯನ್ನು ಸೃಷ್ಟಿಸಿ ಸಂತೋಷಿ ಮಾತಾಳಿಂದ ಇಬ್ಬರು ಹೆಣ್ಣುಮಕ್ಕಳನ್ನು ಪಡೆಯುತ್ತಾನೆ. ಈ ಪುತ್ರಿಯರನ್ನು ಪಡೆದ ದಿನವೇ ರಕ್ಷಾಬಂಧನದ ದಿನವೆಂದು ಹೇಳಲಾಗುತ್ತದೆ.

ಮಹಾಭಾರತದಲ್ಲಿ ಪಾಂಡವರ ಪತ್ನಿಯಾದ ದ್ರೌಪದಿಯು ಶ್ರೀಕೃಷ್ಣನಿಗೆ ರಕ್ಷಾಬಂಧನವನ್ನು ಕಟ್ಟಿ ವಸ್ತ್ರಾಪಹರಣದ ಸಂದರ್ಭದಲ್ಲಿ ರಕ್ಷಣೆಯನ್ನು ಪಡೆದ ಉದಾಹರಣೆಯನ್ನು ಕಾಣಬಹುದು. ಕುಂತಿಯು ಅಭಿಮನ್ಯುವು ಯುದ್ಧಕ್ಕೆ ಹೊರಟು ನಿಂತಾಗ ರಕ್ಷಾಬಂಧನವನ್ನು ಕಟ್ಟಿದ ಉದಾಹರಣೆಯನ್ನು ಸ್ಮರಿಸಬಹುದು.  ಹೀಗೆ ರಕ್ಷಾಬಂಧನವು ಕೇವಲ ಅಣ್ಣ-ತಂಗಿಯರ ಹಬ್ಬವಾಗಿರದೇ ಸರ್ವರೂ ಪರಮಾತ್ಮನ ರಕ್ಷಣೆಯನ್ನು ಪಡೆಯುವ ಹಬ್ಬವಾಗಿದೆ.

ರಕ್ಷಣೆಗಾಗಿ ರಕ್ಷಾಬಂಧನ:

ವರ್ತಮಾನ ಪರಿಸ್ಥಿತಿಯಲ್ಲಿ ಭಾರತೀಯ ಸಮಾಜದಲ್ಲಿ ನಡೆಯುತ್ತಿರುವ ಅನೇಕ ಅಹಿತಕರ ಘಟನೆಗಳನ್ನು ನೋಡಿದಾಗ ರಕ್ಷಾಬಂಧನದ ಹಬ್ಬವನ್ನು ವಿಶೇಷವಾಗಿ ಆಚರಿಸುವುದು ಮಹತ್ವಪೂರ್ಣವಾಗಿದೆ. ಸ್ತ್ರೀ-ರಕ್ಷಣೆಯ ವಿಷಯವನ್ನು ತೆಗೆದುಕೊಂಡರೆ ಸ್ತ್ರೀಯನ್ನು ದೇವಿಯಂದು ಪೂಜಿಸುವ ನಾಡಿನಲ್ಲಿಂದು ಅತ್ಯಾಚಾರಗಳು ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಮಾನವನು ವೈಜ್ಞಾನಿಕವಾಗಿ ಎಷ್ಟೇ ಮುಂದೆವರೆದಿದ್ದರೂ ಆಧ್ಯಾತ್ಮಿಕವಾಗಿ ಮತ್ತು ನೈತಿಕವಾಗಿ ಹಿಂದೆ ಉಳಿದಿದ್ದಾನೆ. ಸಾಮಾಜಿಕ ಬಂಧನಗಳನ್ನು ಮುರಿದು ಮಾನವನು ಶ್ರೇಷ್ಠ ಗುಣಗಳಿಂದ ದೂರನಾಗಿ ದಾನವ-ಲಕ್ಷಣಗಳಿಂದ ಕೂಡಿಹೋಗಿದ್ದಾನೆ. ಈ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ಮತ್ತೊಮ್ಮೆ ತರಲು ಮನುಷ್ಯಾತ್ಮರು ರಕ್ಷಾಬಂಧನದ ಮಹತ್ವ ಅರಿತುಕೊಳ್ಳುವುದು ಅವಶ್ಯಕವಾಗಿದೆ.

ರಕ್ಷಾಬಂಧನದ ಆಧ್ಯಾತ್ಮಿಕ ಅರ್ಥ

ರಕ್ಷಾಬಂಧನದ ಸಮಯದಲ್ಲಿ ಸಹೋದರಿಯರು ತಮ್ಮ ಸಹೋದರನ ಮಸ್ತಕದ ಮೇಲೆ ತಿಲಕವನ್ನಿಟ್ಟು, ಆರತಿಯನ್ನು ಬೆಳಗಿಸಿ, ಸಿಹಿಯನ್ನು ತಿನ್ನಿಸಿ, ಶುಭಕೋರುತ್ತಾ ರಕ್ಷಾಬಂಧನವನ್ನು ಕಟ್ಟುತ್ತಾರೆ. ತಿಲಕವು ಆತ್ಮಜ್ಯೋತಿಯ ಪ್ರತೀಕವಾಗಿದೆ. ಇದು ದೇಹದೃಷ್ಟಿಯಿಂದ ದೂರವಿದ್ದು, ಆತ್ಮಿಕ ದೃಷ್ಟಿಯನ್ನು ಹೊಂದುವುದರ ಸಂಕೇತವಾಗಿದೆ. ಪರಮಾತ್ಮನ ಸ್ಮರಣೆಯನ್ನು ಮಾಡಿ ಅವನ ರಕ್ಷಣೆಯು ಸದಾ ಸಹೋದರನಿಗೆ ಇರಲೆಂದು ಸಹೋದರಿಯು ರಕ್ಷಾಬಂಧನವನ್ನು ಕಟ್ಟುತ್ತಾಳೆ.

26j9

ಸಹೋದರನ ಸಕಲ ಶ್ರೇಯೋಭಿವೃದ್ಧಿಗಾಗಿ ಶುಭವನ್ನು ಹಾರೈಸುತ್ತಾಳೆ. ಈ ಸಂದರ್ಭದಲ್ಲಿ ಸಹೋದರನು ಸಹೋದರಿಯ ರಕ್ಷಣೆಗಾಗಿ ದೃಢಸಂಕಲ್ಪ ಮಾಡುತ್ತಾನೆ. ವಾಸ್ತವಿಕವಾಗಿ ನಾವೆಲ್ಲರೂ ದೃಢತೆಯಿಂದ ನಮ್ಮಲ್ಲಿರುವ ದುರ್ಗುಣ, ದುಶ್ಚಟ, ದುರ್ಬಲತೆಗಳನ್ನು ಕಾಣಿಕೆಯಾಗಿ ಆ ಪರಮಾತ್ಮನಿಗೆ ನೀಡಬೇಕು. ಆರತಿಯು ಜ್ಞಾನಪ್ರಕಾಶದ ಪ್ರತೀಕವಾಗಿದೆ. ನಮ್ಮ ವೇದಗಳು ಸಾರುವಂತೆ ನಹಿ ಜ್ಞಾನೇನ ಸದೃಶಂ, ಅರ್ಥಾತ್ ಜ್ಞಾನಕ್ಕಿಂತ ಮಿಗಿಲಾದದ್ದೂ ಯಾವುದೂ ಇಲ್ಲ. ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಸಾಗುವುದೇ ಆರತಿ ಬೆಳಗುವುದಾಗಿದೆ. ಬಾಯಿ ಸಿಹಿಮಾಡುವುದೆಂದರೆ ಸದಾ ಶುಭ ಹಾಗೂ ಮಧುರ ನುಡಿಗಳನ್ನು ನುಡಿಯುವುದಾಗಿದೆ. ಸ್ನೇಹ-ಪ್ರೀತಿಯಿಂದ ಸಹಬಾಳ್ವೆಯನ್ನು ನಡೆಸುವುದರ ಸಂಕೇತವಾಗಿದೆ.

ಉಮಾದೇವಿ ಎ.ಸಿ. 

ಉಪನ್ಯಾಸಕರು, ದಾವಣಗೆರೆ.

Leave a Comment